ಶಿರ್ವ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಕಡ್ಡಾಯ

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ
ಸಾರ್ವಜನಕರು ಓಡಾಟ ಮಾಡುವ ಶಾಪಿಂಗ್ ಮಾಲ್, ವಾಣಿಜ್ಯ ಸಂಕೀರ್ಣ, ಕ್ರೀಡಾ ಸಂಕೀರ್ಣ, ಆಸ್ಪತ್ರೆ, ಶಾಲೆ-ಕಾಲೇಜು, ಧಾರ್ಮಿಕ ಸ್ಥಳ, ಬಸ್, ರೈಲು ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ 30 ದಿನಗಳ ಬ್ಯಾಕ್‌ಅಪ್‌ನೊಂದಿಗೆ ಪೊಲೀಸರಿಗೆ ಲಭ್ಯಗೊಳಿಸುವುನ್ನು ಕಡ್ಡಾಯಗೊಳಿಸಿರುವ ಸಾರ್ವಜನಿಕ ಸುರಕ್ಷತೆಯ ಅಧಿನಿಯಮವನ್ನು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಶಿರ್ವ ಪೊಲೀಸ್ ಠಾಣೆ ಪಿಎಸ್‌ಐ ಶಿರ್ವ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸುವಂತೆ ಶಿರ್ವ ಗ್ರಾಪಂ ಪಿಡಿಒಗೆ ನೋಟಿಸ್ ನೀಡಿದ್ದಾರೆ. ತಪ್ಪಿದ್ದಲ್ಲಿ ಕ್ರಮ ಜರಗಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಏನಿದು ಅಧಿನಿಯಮ?: ಸಾರ್ವಜನಿಕರು ಓಡಾಡುವ ಪ್ರದೇಶಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮರಾರಾಗಳನ್ನು ಸಂಬಂಧಪಟ್ಟವರು ಅಳವಡಿಸುವುದನ್ನು ಕರ್ನಾಟಕ ಸಾರ್ವಜನಿಕ ಸುರಕ್ಷೆಯ ಕ್ರಮಗಳು ಅಧಿನಿಯಮ 2017 ಮತ್ತು ಜಾರಿ ನಿಯಮಗಳು 2018 ಕಡ್ಡಾಯಗೊಳಿಸಿರುತ್ತದೆ. ಈ ಅಧಿನಿಯಮವನ್ನು ರಾಜ್ಯಾದ್ಯಂತ ಕಡ್ಡಾಯವಾಗಿ ಪೊಲೀಸ್ ಇಲಾಖೆಯವರು ನೋಟಿಸ್ ನೀಡಿ ಜಾರಿಗೊಳಿಸುತ್ತಿದ್ದಾರೆ.

ಏನು ಲಾಭ?: ಸಾರ್ವಜನಿಕರು ಬರುವ ಸ್ಥಳಗಳ ಮೇಲೆ ನಿಗಾ ಇಡಲು ಸಿಸಿ ಕ್ಯಾಮರಾ ಸಹಕಾರಿಯಾಗುವುದಲ್ಲದೆ ಅಹಿತಕರ ಘಟನೆಗಳು ನಡೆದಲ್ಲಿ ತನಿಖೆಗೆ ಸಹಕಾರಿಯಾಗಲಿದೆ. ಸಿಸಿ ಕ್ಯಾಮರಾ ಇರುವುದರಿಂದ ಕಿಡಿಗೇಡಿಗಳ ಕುಚೋದ್ಯಗಳಿಗೂ ಬ್ರೇಕ್ ಬೀಳಲಿದೆ.
ಯಾರು ಹೊಣೆ?
ಸಿಸಿ ಕ್ಯಾಮರಾ ಅಳವಡಿಸಲು ಆ ಕಟ್ಟಡ, ಸ್ಥಳಗಳ ಅಧಿಕೃತರೇ ಜವಾಬ್ದಾರರು. ನಿಗದಿತ ಸಮಯದೊಳಗೆ ಸಿಸಿ ಕ್ಯಾಮರಾ ಅಳವಡಿಸಿ ವರದಿ ನೀಡದಿದ್ದಲ್ಲಿ ಕಾನೂನು ಕ್ರಮ ಜರಗಿಸುವುದಾಗಿ ಪೊಲೀಸರು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಈ ಅಧಿನಿಯಮದಲ್ಲಿ ದಂಡದಿಂದ ಬಂಧನದವರೆಗೂ ಅವಕಾಶ ಇದೆ ಎನ್ನುತ್ತವೆ ಪೊಲೀಸ್ ಮೂಲಗಳು. ಡಿವೈಎಸ್‌ಪಿ ಹಂತದ ಅಧಿಕಾರಿಗಳು ಕ್ರಮದ ಅಧಿಕಾರ ಹೊಂದಿರುತ್ತಾರೆ.

Leave a Reply

Your email address will not be published. Required fields are marked *