ಶಿರಾಡಿ ರಾತ್ರಿ ಪ್ರಯಾಣ ಅಪಾಯಕರ

ಮಂಗಳೂರು: ಶಿರಾಡಿ ಘಾಟಿ ರಾಷ್ಟ್ರೀಯ ಹೆದ್ದಾರಿಯೇನೋ ಸುಧಾರಣೆಯಾಗಿದೆ, ಆದರೆ ರಾತ್ರಿ ವೇಳೆ ಪ್ರಯಾಣ ಮಾತ್ರ ಅಪಾಯಕಾರಿ.

ಇದು ಕಾರ್ಯ ನಿಮಿತ್ತ ರಾತ್ರಿ ಶಿರಾಡಿ ಘಾಟಿ ರಸ್ತೆ ಮೂಲಕ ಸಂಚರಿಸುವ ಪ್ರಯಾಣಿಕರ ಅಭಿಪ್ರಾಯ. ಹೆದ್ದಾರಿ ಕಳೆದ ವರ್ಷವೇ ಸುಧಾರಣೆಗೊಂಡಿದ್ದು ಸಂಚಾರಕ್ಕೆ ಸಮಸ್ಯೆಯಿಲ್ಲ. ಆದರೆ ಅನೇಕ ತಿರುವುಗಳಲ್ಲಿ ಇನ್ನೂ ಸರಿಯಾದ ಪ್ರತಿಫಲಕಗಳನ್ನು ಹಾಕಿಲ್ಲ. ಒಂದೆಡೆ ಹೈಬೀಮ್ ಹೆಡ್‌ಲೈಟ್ ಹಾಕುತ್ತ ಬರುವ ಘನವಾಹನಗಳು, ಇನ್ನೊಂದೆಡೆ ಮಳೆ, ಮಂಜು ಕವಿದ ವಾತಾವರಣದಲ್ಲಿ ಹೆದ್ದಾರಿಯ ಹಲವೆಡೆ ತಿರುವುಗಳಲ್ಲಿ ಸರಿಯಾಗಿ ಕಾಣುವುದಿಲ್ಲ.

ಹೊಸಬರಿಗೆ ಅಂತೂ ತೀರಾ ಕಷ್ಟವಾಗಬಹುದು, ಪ್ರತೀ ದಿನ ಸಂಚರಿಸುವ ಬಸ್, ಟ್ರಕ್ ಚಾಲಕರಿಗೆ ಅಭ್ಯಾಸವಾಗಿರಬಹುದು, ಆದರೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಸ್ವಂತ ವಾಹನದಲ್ಲಿ ತಿಂಗಳಿಗೊಮ್ಮೆ, ಎರಡು ಬಾರಿ ಸಂಚರಿಸುವ ನಮ್ಮಂಥವರಿಗೆ ಇದು ಕಷ್ಟವಾಗುತ್ತದೆ. ಸರಿಯಾಗಿ ರಿಫ್ಲೆಕ್ಟರ್ಸ್‌ ಹಾಕದ ಕಾರಣ ರಾತ್ರಿ ವೇಳೆ ಮುಂದೆ ಏನಿದೆ ಎನ್ನುವುದೂ ಕಾಣಿಸುವುದಿಲ್ಲ ಎನ್ನುತ್ತಾರೆ ಪುತ್ತೂರಿನ ಶ್ಯಾಮಸೂರ್ಯ.

ದರೋಡೆ ಭೀತಿ: ರಾತ್ರಿ ಘಾಟಿ ಸೆಕ್ಷನ್‌ನಲ್ಲಿ ಸುಮಾರು 15 ಕಿ.ಮೀ. ಭಾಗದಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಸಿಗುವುದಿಲ್ಲ. ಹಾಗಾಗಿ ಯಾವುದೇ ಅಪಾಯ ಸಂಭವಿಸಿದರೆ ಸಹಾಯ ಸಿಗುವುದೂ ಕಷ್ಟ. ಕೆಲದಿನಗಳ ಹಿಂದೆಯಷ್ಟೇ ತಡರಾತ್ರಿ ಓವರ್‌ಟೇಕ್ ಮಾಡಲು ಸೈಡ್ ಕೊಡಲಿಲ್ಲ ಎಂಬ ಕಾರಣವನ್ನೊಡ್ಡಿ ನಾಲ್ವರು ಯುವಕರು ಓರ್ವ ಕಾರು ಚಾಲಕನ ಮೇಲೆ ಮುಗಿಬಿದ್ದು ಅವರಲ್ಲಿದ್ದ ಹಣ, ಲ್ಯಾಪ್‌ಟಾಪ್ ಇತ್ಯಾದಿ ದೋಚಿದ ಘಟನೆ ನಡೆದಿತ್ತು.

ಬೇಕು ರಾತ್ರಿ ಗಸ್ತು: ಪೊಲೀಸರು ಈ ಭಾಗದಲ್ಲಿ ರಾತ್ರಿ ಹೆಚ್ಚು ಪ್ಯಾಟ್ರೋಲಿಂಗ್ ನಡೆಸಬೇಕು, ಹಾಗಿದ್ದರೆ ಕಿಡಿಗೇಡಿಗಳಿಗೆ ಹೆದರಿಕೆ ಹುಟ್ಟಬಹುದು, ಇಲ್ಲವಾದರೆ ಈ ರೀತಿ ಲೂಟಿ ಮಾಡುವ ಗ್ಯಾಂಗ್‌ಗಳು ಕಾರ್ಯಪ್ರವೃತ್ತರಾಗುತ್ತವೆ ಎನ್ನುವುದು ಪ್ರಯಾಣಿಕರ ಕಳಕಳಿ.
ಸದ್ಯ ರಾತ್ರಿ ಪ್ರಯಾಣಿಸುವ ವಾಹನಗಳಿಗೆ ಯಾವುದೇ ಅಪಾಯವಾದರೆ ಉಪ್ಪಿನಂಗಡಿ ಠಾಣೆವರೆಗೂ ಬಂದು ದೂರು ಕೊಡಬೇಕಿದೆ. ಇದರ ಬದಲು ರಾತ್ರಿ ನಿರಂತರ ಗಸ್ತು ತಿರುಗುತ್ತಿದ್ದರೆ ಅಪಾಯ ತಪ್ಪಿಸಬಹುದು.

 ಶಿರಾಡಿ ಘಾಟಿ ರಾತ್ರಿ ಸಂಚಾರ ಅಪಾಯಕಾರಿ. ಒಂದೆಡೆ ಸರಿಯಾದ ರಿಫ್ಲೆಕ್ಟರ್ ಇಲ್ಲದೆ ಸಂಚಾರ ಕಷ್ಟ, ಇನ್ನೊಂದೆಡೆ ರಾತ್ರಿ ಅಡ್ಡ ಹಾಕಿ ದೋಚುವಂತಹವರು ಕಾರ್ಯಪ್ರವೃತ್ತರಾಗುತ್ತಿರುವುದು ಬೆದರಿಕೆ ಹುಟ್ಟಿಸುತ್ತಿದೆ. ಪೊಲೀಸರು ಈ ಬಗ್ಗೆ ಹೆಚ್ಚಿನ ಗಮನ ಕೊಟ್ಟರೆ ಒಳ್ಳೆಯದು.
-ಶ್ಯಾಮಸೂರ್ಯ, ಪುತ್ತೂರು
ನೆಲ್ಯಾಡಿಯಲ್ಲೊಂದು ಔಟ್‌ಪೋಸ್ಟ್ ಇದೆ, ಅಲ್ಲದೆ ಶಿರಾಡಿ ಭಾಗದಲ್ಲಿ ರಾತ್ರಿ ಗಸ್ತು ನಡೆಯುತ್ತಿದೆ, ಇದನ್ನು ಅಗತ್ಯವಿದ್ದರೆ ಹಚ್ಚಿಸುತ್ತೇವೆ.
ಲಕ್ಷ್ಮಿ ಪ್ರಸಾದ್ ಪೊಲೀಸ್ ವರಿಷ್ಠಾಧಿಕಾರಿ, ದ.ಕ

Leave a Reply

Your email address will not be published. Required fields are marked *