/p>

* ಪ್ರಧಾನಿ ನರೇಂದ್ರ ಮೋದಿಗೆ ಹೋರಾಟ ಸಮಿತಿಯಿಂದ ಪತ್ರ * ಪರಿಶೀಲನೆ ಭರವಸೆ

ವಿಜಯವಾಣಿ ಸುದ್ದಿಜಾಲ

ಶಿರಸಿ-ಹಾವೇರಿ ರೈಲು ಮಾರ್ಗ ನಿರ್ಮಾಣ

ಶಿರಸಿ; ಬೆಳೆಯುತ್ತಿರುವ ಶಿರಸಿ ನಗರಕ್ಕೆ ರೈಲು ಸಾರಿಗೆ ಅಗತ್ಯವಿದೆ. ಶಿರಸಿಯಿಂದ ಹಾವೇರಿಗೆ ರೈಲು ಮಾರ್ಗ ನಿರ್ವಿುಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಪರಿಶೀಲಿಸುವ ಭರವಸೆ ಸಿಕ್ಕಿದೆ ಎಂದು ಹಾವೇರಿ ಶಿರಸಿ ರೈಲು ಹೋರಾಟ ಸಮಿತಿ ಪ್ರಮುಖ ಡಾ. ಶಿವರಾಮ ಕೆ. ವಿ. ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು,‘ಶಿರಸಿ ನಗರ ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಅತಿ ದೊಡ್ಡ ತಾಲೂಕಾಗಿದ್ದು, 6 ರಿಂದ 8 ತಾಲೂಕುಗಳಿಗೆ ಸಂಪರ್ಕ ಕೇಂದ್ರವಾಗಿದೆ. ನಗರದಿಂದ ಬೆಂಗಳೂರಿಗೆ ಪ್ರತಿ ದಿನ 49 ಬಸ್​ಗಳು ಸಂಚರಿಸುತ್ತವೆ. ಅಂದಾಜು 5 ಸಾವಿರ ಜನ ಪ್ರಯಾಣಿಸುತ್ತಾರೆ. ಶಿರಸಿಗೆ ರೈಲು ಸೌಲಭ್ಯ ಒದಗಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬೆಂಗಳೂರಿನಿಂದ ಶಿರಸಿಗೆ ವಸ್ತುಗಳ ಸಾಗಣೆ ವೆಚ್ಚವೂ ಕಡಿಮೆಯಾಗಲಿದೆ. ಇಲ್ಲಿ ಕಚ್ಚಾ ಸಾಮಗ್ರಿಗಳು ದೊರೆಯುವುದರಿಂದ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಸಹಾಯವಾಗುತ್ತದೆ. ಈ ಮೂಲಕ ಜನರು ಉದ್ಯೋಗ ಅರಸಿ ದೂರದ ಊರಿಗೆ ಹೋಗುವುದು ತಪ್ಪುತ್ತದೆ ಎಂದರು.

ಸಿದ್ದಾಪುರ ಮೂಲಕ ತಾಳಗುಪ್ಪಕ್ಕೆ ಸಂಪರ್ಕ ಕಲ್ಪಿಸುವುದಾದರೆ ಅರಣ್ಯ ನಾಶವಾಗುವ ಪ್ರಮಾಣ ಅಧಿಕವಾಗಿದೆ. ಅದೇ ರೀತಿ ಹುಬ್ಬಳ್ಳಿ ಸಂಪರ್ಕಕ್ಕೆ ಮುಂಡಗೋಡಿನಲ್ಲಿ ಆನೆ ಕಾರಿಡಾರ್ ಪ್ರದೇಶ ಇರುವುದರಿಂದ ಸರ್ಕಾರದ ಅನುಮತಿ ಲಭಿಸುವುದು ಕಷ್ಟ. ಶಿರಸಿಯಿಂದ ಹಾವೇರಿ 73 ಕಿ. ಮೀ. ಅಂತರದಲ್ಲಿದೆ. ಪರಿಸರ ನಾಶವಾಗುವ ಪ್ರಮಾಣವೂ ಅತಿ ಕಡಿಮೆ. ಅಲ್ಲದೆ, ಅಕ್ಕಿಆಲೂರು ಮತ್ತು ಹಾನಗಲ್ಲ ಜನತೆಗೂ ಈ ಮಾರ್ಗ ಅನುಕೂಲವಾಗಲಿದೆ’ ಎಂದರು.

ಹೋರಾಟ ಸಮಿತಿ ರಚನೆ: ಉದ್ದೇಶಿತ ರೈಲು ಮಾರ್ಗ ನಿರ್ವಣಕ್ಕೆ ಸಾರ್ವಜನಿಕರ ಬೆಂಬಲದೊಂದಿಗೆ ಸರ್ಕಾರಕ್ಕೆ ಮನವರಿಕೆ ಮಾಡಲು ‘ಹಾವೇರಿ- ಶಿರಸಿ ರೈಲ್ವೆ ಹೋರಾಟ ಸಮಿತಿ’ ರಚಿಸಲಾಗಿದೆ. ವಿ.ಪಿ. ಹೆಗಡೆ ವೈಶಾಲಿ ಅಧ್ಯಕ್ಷರಾಗಿದ್ದು, ಡಾ. ಶಿವರಾಮ ಕೆ. ವಿ., ಎಂ.ಎಂ. ಭಟ್ ಕಾರೇಕೊಪ್ಪ, ಅನಂತ ಪದ್ಮನಾಭ, ಕಾಶಿನಾಥ ಮೂಡಿ ಇತರರು ಸದಸ್ಯರಾಗಿದ್ದಾರೆ.

ಕೇಂದ್ರ ಸರ್ಕಾರದ ರೈಲ್ವೆ ಬಜೆಟ್ ಕುರಿತ ರೂಪುರೇಷೆಗಳು ಜ. 15ರ ಒಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಶಿರಸಿ-ಹಾವೇರಿ ರೈಲು ಮಾರ್ಗದ ಅಗತ್ಯತೆಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ಸಮಿತಿ ಯತ್ನಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಮಿತಿ ಸಲ್ಲಿಸಿದ ಅರ್ಜಿಗೆ ಪ್ರಧಾನಿ ಕಾರ್ಯಾಲಯ ಸ್ಪಂದಿಸಿದೆ. ಈ ಕುರಿತು ಪರಿಶೀಲಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಕಾರ್ಯಾಲಯ ಸಮಿತಿಗೆ ತಿಳಿಸಿದೆ. ಶಿರಸಿ ಹಾವೇರಿ ರೈಲು ಮಾರ್ಗಕ್ಕೆ ಸರ್ಕಾರವನ್ನು ಒತ್ತಾಯಿಸಲು ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರ ಪಡೆಯಲು ಸಮಿತಿ ನಿರ್ಧರಿಸಿದೆ.