ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಈ ಬಾರಿಯೂ ಪುಸ್ತಕ ಕೊರತೆ

ಮಂಜುನಾಥ ಸಾಯೀಮನೆ ಶಿರಸಿ: ಶಾಲೆ ಆರಂಭಕ್ಕೆ ಕೆಲವೇ ದಿನಗಳು ಉಳಿದಿವೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಇದುವರೆಗೆ ಶೇ. 66ರಷ್ಟು ಪುಸ್ತಕಗಳು ಪೂರೈಕೆಯಾಗಿದ್ದು, ಪ್ರಸಕ್ತ ವರ್ಷವೂ ಪುಸ್ತಕಗಳ ಕೊರತೆ ಆತಂಕ ಎದುರಾಗಿದೆ.

ಪ್ರತಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಸಂಗ್ರಹಣೆ ಪ್ರಕ್ರಿಯೆ ಕೆಲ ತಿಂಗಳ ಹಿಂದೆಯೇ ನಡೆದಿದೆ. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಂದ ಅಗತ್ಯ ಪುಸ್ತಕಗಳ ಮಾಹಿತಿ ಸಂಗ್ರಹಿಸಿ ಎಲ್ಲ 6 ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಡಿಡಿಪಿಐ ಕಚೇರಿಗೆ ಸಲ್ಲಿಸಿದ್ದಾರೆ. ಅಗತ್ಯ ಪುಸ್ತಕಗಳ ಬೇಡಿಕೆಯನ್ನು ಸರ್ವ ಶಿಕ್ಷಾ ಅಭಿಯಾನದ ವೆಬ್​ಸೈಟ್ ಮೂಲಕ ಡಿಡಿಪಿಐ ಕಚೇರಿ ಅಧಿಕಾರಿಗಳು ಅಪ್​ಲೋಡ್ ಮಾಡಿದ್ದಾರೆ. ಪುಸ್ತಕಗಳು ಮೇ 10ರೊಳಗೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ತಲುಪ ಬೇಕಿತ್ತು. ಮೇ 19ರ ಒಳಗಾಗಿ ಶಾಲೆಗಳಿಗೆ ಪೂರೈಕೆ ಆಗಬೇಕಿತ್ತು. ಆದರೆ, ಇದುವರೆಗೆ ಶೇ. 66ರಷ್ಟು ಪುಸ್ತಕಗಳು ಮಾತ್ರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಿಗೆ ಬಂದಿವೆ.

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಒಳಗೊಂಡು 7,82,414 ಪುಸ್ತಕಗಳ ಅಗತ್ಯವಿದೆ. ಇದುವರೆಗೆ 5,22,714 ಪುಸ್ತಕಗಳನ್ನು ಪೂರೈಸಲಾಗಿದೆ. ಹಳಿಯಾಳ ತಾಲೂಕಿನಲ್ಲಿ 2,19,283 ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿದ್ದು, 1,43,834 ಪುಸ್ತಕಗಳು ಪೂರೈಕೆಯಾಗಿವೆ. ಜೊಯಿಡಾ ತಾಲೂಕಿನಲ್ಲಿ 61,214 ಪುಸ್ತಕಗಳ ಬೇಡಿಕೆ ಇದ್ದು, 42,083 ಪೂರೈಕೆ ಮಾಡಲಾಗಿದೆ. ಮುಂಡಗೋಡ ತಾಲೂಕಿನಲ್ಲಿ 1,21,716 ಬೇಡಿಕೆ ಇದ್ದು, 74,272 ಪುಸ್ತಕಗಳನ್ನು ನೀಡಲಾಗಿದೆ. ಸಿದ್ದಾಪುರ ತಾಲೂಕಿನಲ್ಲಿ 99,515 ಪುಸ್ತಕಗಳ ಬೇಡಿಕೆ ಪೈಕಿ 70,477 ಪುಸ್ತಕಗಳನ್ನು ಒದಗಿಸಲಾಗಿದೆ. ಶಿರಸಿ ತಾಲೂಕಿನಲ್ಲಿ 1,94,990 ಪುಸ್ತಕಗಳ ಬೇಡಿಕೆ ಇದ್ದು, 1,34,016 ಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ. ಯಲ್ಲಾಪುರ ತಾಲೂಕಿನಲ್ಲಿ 85,696 ಪುಸ್ತಕಗಳ ಬೇಡಿಕೆ ಪೈಕಿ 58,032 ಪುಸ್ತಕಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಪೂರೈಸಲಾಗಿದೆ.

ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ:ಕಳೆದ ವರ್ಷ ಪ್ರೌಢಶಾಲೆಗಳ ಮತ್ತು ಪ್ರಾಥಮಿಕ ಶಾಲೆಯ ಕೆಲ ತರಗತಿಗಳ ಪುಸ್ತಕಗಳು ಶೈಕ್ಷಣಿಕ ವರ್ಷದ ಮೊದಲ ಅವಧಿ ಪೂರ್ಣಗೊಂಡರೂ ಪೂರೈಕೆಯಾಗಿರಲಿಲ್ಲ. ಈ ವರ್ಷ ಅಂತಹ ಮುಜುಗರ ತಪ್ಪಿಸಿಕೊಳ್ಳುವ ಸಲುವಾಗಿ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಶೈಕ್ಷಣಿಕ ಜಿಲ್ಲೆಯ 1387 ಶಾಲೆಗಳಲ್ಲಿ 1372 ಶಾಲೆಗಳು ಪುಸ್ತಕಕ್ಕಾಗಿ ಇಂಡೆಂಟ್ ಸಲ್ಲಿಸಿದ್ದವು. ಪುಸ್ತಕದ ಮೌಲ್ಯ 61.24 ಲಕ್ಷ ರೂ. ಆಗಿದ್ದು, ಎಲ್ಲ ಪುಸ್ತಕಗಳು ಬಂದ ಮೇಲೆಯೇ ಈ ಹಣ ಸಂದಾಯ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಮೇ 29ರಿಂದ ಶಾಲೆಗಳು ಆರಂಭವಾಗಲಿವೆ. ಹೀಗಾಗಿ, ಮೇ 25ರ ಬಳಿಕ ಎಲ್ಲ ಶಾಲೆಗಳಿಗೆ ಪುಸ್ತಕಗಳನ್ನು ವಿತರಿಸಲಾಗುವುದು. ಅಷ್ಟರೊಳಗಾಗಿ ಇಂಡೆಂಟ್ ಸಲ್ಲಿಸಿದ ಪುಸ್ತಕಗಳು ಪೂರ್ಣ ಪ್ರಮಾಣದಲ್ಲಿ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. | ದಿವಾಕರ ಶೆಟ್ಟಿ ಎಚ್. ಡಿಡಿಪಿಐ ಶಿರಸಿ

Leave a Reply

Your email address will not be published. Required fields are marked *