ಹುಬ್ಬಳ್ಳಿ: ಕಬಡ್ಡಿ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಜತೆಗೆ ಚಾಣಾಕ್ಷತನ ಕಲಿಸುತ್ತದೆ ಎಂದು ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರು ಹೇಳಿದರು.
ತಾಲೂಕಿನ ಶಿರಗುಪ್ಪಿ ಗ್ರಾಮ ಪಂಡಿತ ನೆಹರು ಪ್ರೌಢಶಾಲೆಯಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿರುವ ರಾಜ್ಯಮಟ್ಟದ 14 ಮತ್ತು 17 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಎರಡು ದಿನಗಳ ಕಬಡ್ಡಿ ಪಂದ್ಯಾವಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
4 ಸಾವಿರ ವರ್ಷಗಳಿಂದಲೂ ಭಾರತದಲ್ಲಿ ಕಬಡ್ಡಿ ಕ್ರೀಡೆ ಪ್ರಚಲಿತದಲ್ಲಿದೆ. ಮಹಾಭಾರತ ಕಾವ್ಯದಲ್ಲಿ ಕಬಡ್ಡಿ ಆಟದ ಉಲ್ಲೇಖಗಳಿವೆ. ಚಾಣಾಕ್ಷತನ ಹೆಚ್ಚಿಸಿಕೊಳ್ಳಲು ಪಾಂಡವರು ಅದರಲ್ಲೂ ಮಧ್ಯಮ ಪಾಂಡವನಾದ ಅರ್ಜುನ ಕಬಡ್ಡಿ ಕ್ರೀಡೆಯಲ್ಲಿ ತೊಡಗಿಕೊಂಡಿದ್ದನು ಎಂದರು.
ಸಾನ್ನಿಧ್ಯ ವಹಿಸಿದ್ದ ಮಣಕವಾಡ ಅನ್ನದಾನೀಶ್ವರ ಮಠದ ಶ್ರೀ ಸಿದ್ಧರಾಮ ದೇವರು ಮಾತನಾಡಿ, ಗ್ರಾಮೀಣ ಮಟ್ಟದ ಮಕ್ಕಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಗಮನ ಸೆಳೆಯುತ್ತಿರುವುದು ಶ್ಲಾಘನೀಯ. ಕ್ರೀಡೆಯಲ್ಲಿ ಸೋಲು-ಗೆಲುವು ಲೆಕ್ಕಿಸದೆ ಉತ್ತಮ ಪ್ರದರ್ಶನ ನೀಡಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಭುವನೇಶ್ವರಿ ಶಿವನಗೌಡ್ರ ಕ್ರೀಡಾ ಜ್ಯೋತಿ ಬೆಳಗಿಸಿದರು. ಉಪಾಧ್ಯಕ್ಷೆ ಯಲ್ಲವ್ವ ನೆರ್ತಿ, ಶಿಕ್ಷಣ ಸಮಿತಿ ಅಧ್ಯಕ್ಷ ಎನ್.ಎನ್. ಕಂಪ್ಲಿ, ಕಾರ್ಯದರ್ಶಿ ಎಸ್.ಜಿ. ಮೆಣಸಿನಕಾಯಿ, ಡಿಡಿಪಿಐ ಆರ್.ಎಸ್. ಮುಳ್ಳೂರು, ಬಿಇಒ ಎಸ್.ಬಿ. ಹುಡೇದಮನಿ, ಮುಖ್ಯಶಿಕ್ಷಕಿ ಎಸ್.ಆರ್. ಕಲಾದಗಿ ಮತ್ತಿತರರಿದ್ದರು.
ಎಸ್ಜಿಎಫ್ಐ ನಿಯಮಾವಳಿಯಲ್ಲಿ ಪಂದ್ಯ…
ಎಸ್ಜಿಎಫ್ಐ (ಸ್ಕೂಲ್ ಗೇಮ್್ಸ ಫೆಡರೇಷನ್ ಆಫ್ ಇಂಡಿಯಾ) ನಿಯಮ ಅನುಸಾರ ಪಂದ್ಯ ಆಯೋಜಿಸಲಾಗಿದೆ. ಸೂಪರ್ ಟ್ಯಾಕಲ್, ಡೂ ಆರ್ ಡೈ, ರೈಡರ್ಗೆ 30 ಸೆಕೆಂಡ್ ಸಮಯ ನಿಗದಿ ಸೇರಿದಂತೆ ಅಂತಾರಾಷ್ಟ್ರೀಯ ನಿಯಮ ಹಾಗೂ ಮಾನದಂಡ ಅನುಸರಿಸಲಾಗುತ್ತಿದೆ. 26ಕ್ಕೂ ಹೆಚ್ಚು ನಿರ್ಣಾಯಕರು ವಿವಿಧ ಪಂದ್ಯಗಳನ್ನು ನಿರ್ಣಯಿಸಲಿದ್ದಾರೆ. ಪ್ರತಿ ವಿಭಾಗ ಮಟ್ಟದಿಂದ 4 ತಂಡಗಳಂತೆ ಒಟ್ಟು 16 ತಂಡಗಳು ಭಾಗವಹಿಸಿವೆ. ಪ್ರತಿ ತಂಡವು 3 ಲೀಗ್ ಪಂದ್ಯ ಆಡಲಿವೆ. ಬುಧವಾರ ಹೊನಲು ಬೆಳಕಿನಲ್ಲೂ ಪಂದ್ಯಾವಳಿ ಜರುಗಿದ್ದು, ಸೆ. 20ರಂದು ಸೆಮಿಫೈನಲ್, ಫೈನಲ್ ಪಂದ್ಯ ನಡೆಯಲಿವೆ ಎಂದು ಕ್ರೀಡಾಕೂಟದ ಪ್ರಧಾನ ನಿರ್ಣಾಯಕ ಬಿ.ವಿ. ಗೌಡರ ತಿಳಿಸಿದ್ದಾರೆ.
ಲೀಗ್ನಲ್ಲಿ ನಗೆ ಬೀರಿದ ಬೆಳಗಾವಿ ತಂಡ
17 ವರ್ಷದೊಳಗಿನ ಬಾಲಕರ ವಿಭಾಗ ಪಂದ್ಯದಲ್ಲಿ ಕಲಬುರ್ಗಿ ತಂಡದ ವಿರುದ್ಧ ಬೆಳಗಾವಿ ತಂಡ 22 (62-40) ಅಂಕಗಳೊಂದಿಗೆ, ಮೈಸೂರು ತಂಡದ ವಿರುದ್ಧ ಬೆಂಗಳೂರು ತಂಡ 17 (49-32) ಅಂಕದೊಂದಿಗೆ ಜಯಗಳಿಸಿವೆ. ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡದ ವಿರುದ್ಧ ಬೆಂಗಳೂರು ತಂಡ 12 (24-12) ಅಂಕದೊಂದಿಗೆ ಹಾಗೂ ಕಲಬುರ್ಗಿ ತಂಡದ ವಿರುದ್ಧ ಬೆಳಗಾವಿ ತಂಡ 33 (61-28) ಅಂಕದೊಂದಿಗೆ ಜಯಗಳಿಸಿದೆ.
14 ವರ್ಷದೊಳಗಿನ ಬಾಲಕರ ವಿಭಾಗದ ಪಂದ್ಯದಲ್ಲಿ ಮೈಸೂರು ತಂಡದ ವಿರುದ್ಧ ಬೆಂಗಳೂರು ವಿಭಾಗ ತಂಡವು 22 (47-29) ಅಂಕಗಳೊಂದಿಗೆ ಹಾಗೂ ಕಲಬುರ್ಗಿ ತಂಡದ ವಿರುದ್ಧ ಬೆಳಗಾವಿ ತಂಡವು 14 (35-21) ಜಯಗಳಿಸಿದೆ. ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ಹಾಗೂ ಕಲಬುರ್ಗಿ ತಂಡ 40-40 ಅಂಕದೊಂದಿಗೆ ಸಮಬಲ ಸಾಧಿಸಿವೆ. ಬೆಂಗಳೂರು ತಂಡದ ವಿರುದ್ಧ ಮೈಸೂರು ತಂಡವು 16 (38-22) ಅಂಕಗಳೊಂದಿಗೆ ಜಯಗಳಿಸಿದೆ.