ಶಿಗ್ಗಾಂವಿ ಪೊಲೀಸರ ಹಲ್ಲೆಯಿಂದ ವ್ಯಕ್ತಿ ಸಾವು ಆರೋಪ

ಹುಬ್ಬಳ್ಳಿ: ಕುರಿ ಕಳ್ಳತನ ಪ್ರಕರಣ ಹೆಸರಲ್ಲಿ ಶಿಗ್ಗಾಂವಿ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಕರೆದೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಆತನ ಕುಟುಂಬದವರು ಗುರುವಾರ ಸಂಜೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಪ್ರಕರಣ ದಾಖಲಿಸಿದ ಬಳಿಕವೇ ಶವ ಸಂಸ್ಕಾರ ಮಾಡುವುದಾಗಿ ಪಟ್ಟು ಹಿಡಿದರು.

ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ನಾಗಪ್ಪ ಚವ್ಹಾಣ (35) ಮೃತಪಟ್ಟ ವ್ಯಕ್ತಿ.

ಕುರಿ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಶಿಗ್ಗಾಂವಿ ಹಾಗೂ ಬಂಕಾಪುರ ಠಾಣೆ ಪೊಲೀಸರು ಮೂರು ತಿಂಗಳ ಹಿಂದೆ ನಾಗಪ್ಪನನ್ನು ಕರೆದುಕೊಂಡು ಹೋಗಿದ್ದರು. ಠಾಣೆಯಲ್ಲಿ ಆತನಿಗೆ ಮನಬಂದಂತೆ ಥಳಿಸಿದ್ದರು. ಇದರಿಂದ ತೀವ್ರ ಅಸ್ವಸ್ಥನಾಗಿದ್ದ ನಾಗಪ್ಪ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಫಲಕಾರಿಯಾಗದೇ ಗುರುವಾರ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಮನೆಯಲ್ಲಿ ಸಾವನ್ನಪ್ಪಿದ್ದಾನೆ. ಇದರಿಂದ

ಆಕ್ರೋಶಗೊಂಡ ಕುಟುಂಬಸ್ಥರು ಠಾಣೆಗೆ ಮುತ್ತಿಗೆ ಹಾಕಿ ಶಿಗ್ಗಾಂವಿ ಪೊಲೀಸರ ವಿರುದ್ಧ ಹಲ್ಲೆ, ಹತ್ಯೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಪ್ರತಿಭಟಿಸಿದರು. ರಾತ್ರಿ 10 ಗಂಟೆವರೆಗೆ ಪೊಲೀಸರೊಂದಿಗೆ ಠಾಣೆಯಲ್ಲಿ ವಾಗ್ವಾದ ನಡೆದಿದ್ದು, ತಡರಾತ್ರಿವರೆಗೆ ಪ್ರಕರಣ ದಾಖಲಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಿದ್ದೇನು: ಕುರಿ ಕಳ್ಳತನ ಕುರಿತು ಶಿಗ್ಗಾಂವಿ ಠಾಣೆಯಲ್ಲಿ ಜುಲೈ 29ರಂದು ಪ್ರಕರಣ ದಾಖಲಾಗಿತ್ತು. ಶಿಗ್ಗಾಂವಿ, ಬಂಕಾಪುರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿದ್ದರು. ಬ್ಯಾಹಟ್ಟಿ ಗ್ರಾಮದ ಶಿವಪ್ಪ ಕಾಳೆ, ಫಕೀರಪ್ಪ ಕಾಳೆ, ಚನ್ನಪ್ಪ ಕಾಳೆ, ಬಲರಾಮ ಚವ್ಹಾಣ, ನಾಗಪ್ಪ ಚವ್ಹಾಣರನ್ನು ಬಂಧಿಸಿ 8.55 ಲಕ್ಷ ರೂ. ಮೌಲ್ಯದ 150ಕ್ಕೂ ಹೆಚ್ಚು ಕುರಿ, ಟಗರು, ಆಡುಗಳನ್ನು ವಶಪಡಿಸಿ ಕೊಂಡಿದ್ದರು. ಪ್ರಕರಣದ ತನಿಖೆ ವೇಳೆ ನಾಗಪ್ಪನನ್ನು ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಆತ ತೀವ್ರವಾಗಿ ಅಸ್ವಸ್ಥನಾಗಿದ್ದ ಎಂದು ಮೂಲಗಳು ತಿಳಿಸಿವೆ.

ಪ್ರಕರಣ ದಾಖಲಿಸಲು ಹಿಂದೇಟು: ಶಿಗ್ಗಾಂವಿ ಠಾಣೆ ಪೊಲೀಸರು ಹಲ್ಲೆ ನಡೆಸಿದ್ದರಿಂದ ನಾಗಪ್ಪ ಸಾವನ್ನಪ್ಪಿದ್ದಾನೆ ಎಂದು ಹೇಳುತ್ತೀರಿ. ಹಾಗಾಗಿ, ಈ ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನೀವು ಶಿಗ್ಗಾಂವಿ ಠಾಣೆಗೆ ಹೋಗಿ ಎಂದು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದರು. ಬ್ಯಾಹಟ್ಟಿ ಗ್ರಾಮ ಹುಬ್ಬಳ್ಳಿ ಗ್ರಾಮೀಣ ಠಾಣೆ ವ್ಯಾಪ್ತಿಗೆ ಬರುವುದರಿಂದ ಇಲ್ಲೇ ಪ್ರಕರಣ ದಾಖಲಿಸಿಕೊಳ್ಳಿ ಎಂದು ಕುಟುಂಬದವರು ಪಟ್ಟು ಹಿಡಿದರು. ಪ್ರಕರಣ ದಾಖಲಿಸಿಕೊಳ್ಳದೇ, ಶವ ಸಂಸ್ಕಾರ ಮಾಡಿ ಎಂದು ಪೊಲೀಸರು ಒತ್ತಾಯಿಸುತ್ತಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ರಾತ್ರಿ ಠಾಣೆಯಲ್ಲಿ ಜಮಾವಣೆ: ನಾಗಪ್ಪನ ಸಾವಿಗೆ ಶಿಗ್ಗಾಂವಿ, ಬಂಕಾಪುರ ಠಾಣೆ ಪೊಲೀಸರೇ ಕಾರಣ. ಅವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಆಗ್ರಹಿಸಿ ಆತನ ಕುಟುಂಬದವರು ರಾತ್ರಿ ಪೂರ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರಿಗೆ ಆಗ್ರಹಿಸಿದರು. ರಾತ್ರಿ 10 ಗಂಟೆವರೆಗೆ ಠಾಣೆಯಲ್ಲೇ ಬೀಡು ಬಿಟ್ಟಿದ್ದರು.