ಹಾವೇರಿ: ನೆರೆ ಪರಿಹಾರ ಅಕ್ರಮವು ದಿನದಿಂದ ದಿನಕ್ಕೆ ಕುತೂಹಕಾರಿ ತಿರುವು ಪಡೆದುಕೊಳ್ಳುತ್ತಿದೆ, ಶಿಗ್ಗಾಂವಿ ಎಪಿಎಂಸಿಯಲ್ಲಿನ ವ್ಯಾಪಾರಿಯೊಬ್ಬ ಈ ಅಕ್ರಮದ ಕಿಂಗ್ಪಿನ್ ಎಂಬ ಸಂಶಯ ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ಮೂಡಿದೆ.
ಈ ಕುರಿತು ಹಾವೇರಿ ತಾಲೂಕು ದೇವಗಿರಿಯ ಗ್ರಾಮಲೆಕ್ಕಾಧಿಕಾರಿ ಆನಂದ ದೇಸಾಯಿ ಎಂಬುವವರು ಹಾವೇರಿ ಗ್ರಾಮೀಣ ಠಾಣೆಗೆ ದೂರೊಂದನ್ನು ನೀಡಿದ್ದು, ಅದರಲ್ಲಿ ಶಿಗ್ಗಾಂವಿ ತಾಲೂಕು ವನಹಳ್ಳಿ ಗ್ರಾಮದ ನಿವಾಸಿ, ದಲಾಲಿ ವ್ಯಾಪಾರಸ್ಥ ಮಂಜುನಾಥ ದೊಡ್ಡಮನಿ ಎಂಬುವವರ ಹೆಸರು ನಮೂದಿಸಿದ್ದಾರೆ.
ಬೆಳಕಿಗೆ ಬಂದಿದ್ದು ಹೀಗೆ: ದೇವಗಿರಿ ಗ್ರಾಮದಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ ಅವರ ಜಮೀನಿನ ಸರ್ವೆ ನಂಬರ್ ಬಳಿಸಿ ಮಹಾದೇವಕ್ಕ ಗಾಣಿಗೇರ ಹಾಗೂ ಶಿವಾನಂದ ಗಾಣಿಗೇರ ಎಂಬುವರ ಖಾತೆಗೆ ತಲಾ 46,528ರೂ. ಜಮೆಯಾಗಿರುವ ಕುರಿತು ವಿಜಯವಾಣಿಯಲ್ಲಿ ಫೆ. 22ರಂದು ವರದಿ ಪ್ರಕಟಗೊಂಡಿತ್ತು. ಅದರ ಆಧಾರದ ಮೇಲೆ ಹಣ ಜಮೆಯಾದವರ ಜಾಡು ಹಿಡಿದುಕೊಂಡು ಗ್ರಾಮಲೆಕ್ಕಾಧಿಕಾರಿ ಆನಂದ ದೇಸಾಯಿ, ಮಹೇಶ ದಿವಟರ, ಲಿಂಗರಾಜ ಬೋರಗಲ್ಲಪ್ಪನವರ ಇತರರು ಭಾನುವಾರ ಹುಬ್ಬಳ್ಳಿ ತಾಲೂಕು ಅರಳಿಕಟ್ಟಿ ಗ್ರಾಮಕ್ಕೆ ಹೋಗಿ ವಿಚಾರಿಸಿದ್ದಾರೆ. ಅರಳಿಕಟ್ಟಿಯ ಮಂಜುನಾಥ ಲಾವನಗೌಡ ಪಾಟೀಲ ಎಂಬಾತ ತಮ್ಮ ಗ್ರಾಮದ 10 ಜನರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಕೆಲ ದಿನಗಳ ಹಿಂದೆ ನನ್ನ ದೂರದ ಸಂಬಂಧಿ ಮಂಜುನಾಥ ದೊಡ್ಡಮನಿ ನನ್ನನ್ನು ಸಂರ್ಪಸಿ, ರೈತರಿಂದ ಬೆಳೆ ಖರೀದಿಸಿದ್ದೇನೆ. ನನಗೆ ಬರಬೇಕಾದ ಹಣ ರೈತರ ಖಾತೆಗೆ ಜಮೆಯಾಗುತ್ತಿದೆ. ಆದರೆ, ಅವರು ಜಮೆಯಾದ ಹಣ ನೀಡುವುದಿಲ್ಲ. ನಿನಗೆ ಪರಿಚಯವಿರುವ ಒಂದಷ್ಟು ಜನರ ಬ್ಯಾಂಕ್ ಪಾಸ್ಬುಕ್ ಹಾಗೂ ಆಧಾರ್ಕಾರ್ಡ್ ನೀಡುವಂತೆ ಕೇಳಿದ್ದ. ನನಗೆ ಪರಿಚಯವಿದ್ದ 20ರಿಂದ 25 ಜನರ ಪಾಸ್ಬುಕ್, ಆಧಾರ್ ಕಾರ್ಡ್ ನೀಡಿದ್ದೇನೆ. ಅದರಲ್ಲಿ ಶಿವಾನಂದ ಗಾಣಿಗೇರ, ಮಹಾದೇವಕ್ಕ ಗಾಣಿಗೇರ, ಉಮೇಶ ಮುಗಳಿಕಟ್ಟಿ, ರೇಣುಕಾ ನೀರಲಗಿ, ಅಡಿವೆಪ್ಪ ಕುಬ್ಯಾಳ, ಬಸವರಾಜ ನೀರಲಗಿ, ಗಂಗಾಧರ ಕಾಳಂಗಿ, ಮಂಜುನಾಥ ಮಡ್ಲಿ, ಸವಿತಾ ಚಿನಗುಡಿ, ಕಲ್ಲನಗೌಡ ಚಿನಗುಡಿ, ಈರನಗೌಡ ಅದರಗುಂಚಿ ಎಂಬುವವರ ಖಾತೆಗೆ ಜಮೆಯಾದ ಹಣವನ್ನು ಮಂಜುನಾಥ ದೊಡ್ಡಮನಿಯವರಿಗೆ ಕೊಟ್ಟಿದ್ದೇವೆ ಎಂದು ಒಪ್ಪಿಕೊಂಡಿದ್ದಾನೆ. ನಂತರ ಈ ಕುರಿತು ಮಂಜುನಾಥ ಪಾಟೀಲ ಹಾವೇರಿ ತಹಸೀಲ್ದಾರ್ ಕಚೇರಿಗೆ ಬಂದು ಹೇಳಿಕೆಯನ್ನು ಬರೆದುಕೊಟ್ಟಿದ್ದಾನೆ. ಪರಿಹಾರ ತಂತ್ರಾಂಶ ದುರ್ಬಳಕೆ ಮಾಡಿಕೊಂಡಿರುವ ಮಂಜುನಾಥ ದೊಡ್ಡಮನಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೊಡ್ಡಮನಿಗೆ ಲಾಗಿನ್ ಹೇಗೆ ಸಿಕ್ಕಿತು…?: ಇಲ್ಲಿ ವಿಶೇಷವೆಂದರೆ, ಸರ್ಕಾರ ಪರಿಹಾರ ತಂತ್ರಾಂಶದಲ್ಲಿ ರೈತರ ಹೆಸರು ನಮೂದಿಸಲು ಆಯಾ ಗ್ರಾಮಲೆಕ್ಕಾಧಿಕಾರಿಗಳಿಗೆ ಪ್ರತ್ಯೇಕ ಲಾಗಿನ್ ನೀಡಿತ್ತು. ಆ ಲಾಗಿನ್ ದಲಾಲಿ ವ್ಯಾಪಾರಿ ದೊಡ್ಡಮನಿಗೆ ಹೇಗೆ ಸಿಕ್ಕಿತು?. ಇವರೊಬ್ಬರೇ ಅಥವಾ ಇನ್ನೂ ಅನೇಕರು ಇದರ ಹಿಂದೆ ಇದ್ದಾರೆಯೇ ? ಅರಳಿಕಟ್ಟಿಯ ಮಂಜುನಾಥ ಪಾಟೀಲ ಅವರು ಹೇಳುವುದು ನಿಜವೇ ಎಂಬೆಲ್ಲ ಅಂಶಗಳ ಕುರಿತು ತನಿಖೆ ನಡೆಯಬೇಕಿದೆ.
ಜಿಲ್ಲಾಡಳಿತ ವೈಫಲ್ಯ ಬಹಿರಂಗ: ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಯಾರದೋ ಜಮೀನಿನ ಹೆಸರಿನಿಲ್ಲಿ ಮತ್ಯಾರದ್ದೋ ಹೆಸರು ತಂತ್ರಾಂಶದಲ್ಲಿ ಅದ್ಹೇಗೆ ಸೇರ್ಪಡೆಯಾಯಿತು. ಬೆಳೆ ಪರಿಹಾರ ತಂತ್ರಾಂಶದಲ್ಲಿಯೇ ಲೋಪವಿದೆಯೇ, ಜಿಲ್ಲಾಡಳಿತದಲ್ಲಿ ಎಲ್ಲವನ್ನು ಬಲ್ಲ ಅಧಿಕಾರಿಯೇ ಲಾಗಿನ್ ಐಡಿ, ಪಾಸ್ವರ್ಡ್ಗಳನ್ನು ಲೀಕ್ ಮಾಡಿದ್ದಾನೆಯೇ ಎಂಬ ಅಂಶದ ಬಗ್ಗೆಯೂ ತನಿಖೆ ನಡೆಯಬೇಕಿದೆ.
ಎಫ್ಐಆರ್ ಆಗಿಲ್ಲ: ತಾಲೂಕಿನಲ್ಲಿ ಬೆಳೆ ಪರಿಹಾರ ವಿತರಣೆಯಲ್ಲಿನ ಅಕ್ರಮದ ಪತ್ತೆಗೆ ಎಡಿಸಿಯವರು ಈಗಾಗಲೇ ದೂರು ನೀಡಿರುವುದರಿಂದ ದೇವಗಿರಿ ಗ್ರಾಮಲೆಕ್ಕಾಧಿಕಾರಿ ಆನಂದ ದೇಸಾಯಿ ಫೆ. 23ರಂದು ನೀಡಿದ ದೂರು ಠಾಣೆಯ ಡೈರಿಯಲ್ಲಿ ಮಾತ್ರ ಎಂಟ್ರಿಯಾಗಿದೆ. ಎಡಿಸಿಯವರಿಂದಲೇ ಇದರ ಪರಿಶೀಲನೆಗೆ ಪೊಲೀಸ್ ಠಾಣೆಗೆ ಮಾಹಿತಿ ಬರಬೇಕಂತೆ. ಅಂದಾಗ ಮಾತ್ರ ಮಂಜುನಾಥ ದೊಡ್ಡಮನಿಯನ್ನು ವಿಚಾರಣೆಗೆ ಕರೆತರಲು ಪೊಲೀಸರು ಮುಂದಾಗುತ್ತಾರಂತೆ ಎಂಬ ಮಾಹಿತಿ ನಂಬಲರ್ಹ ಮೂಲಗಳಿಂದ ವಿಜಯವಾಣಿಗೆ ತಿಳಿದುಬಂದಿದೆ.
ಹಾವೇರಿ ತಾಲೂಕಿನಲ್ಲಿ ಬೆಳೆಹಾನಿ ಪರಿಹಾರದಲ್ಲಿನ ಅಕ್ರಮ ಹಾಗೂ ಸಾರ್ವಜನಿಕರಿಂದ ಸ್ವೀಕರಿಸಿದ ದೂರುಗಳ ತನಿಖೆಗೆ ಈಗಾಗಲೇ ಭಾನುವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ದೇವಗಿರಿ ಗ್ರಾಮದವರ ಹಣ ಬೇರೆಯವರ ಖಾತೆಗೆ ಹೋಗಿರುವ ಮಾಹಿತಿಯೂ ಅದರಲ್ಲಿದೆ. ಶಿಗ್ಗಾಂವಿಯ ವ್ಯಕ್ತಿಯೊಬ್ಬರು ಹಣ ಹಾಕಿಸಿದ್ದಾರೆ ಎನ್ನುವುದು ಪೊಲೀಸ್ ತನಿಖೆಯಿಂದ ಹೊರಬರಲಿದೆ.
| ಎಂ. ಯೋಗೇಶ್ವರ, ಅಪರ ಜಿಲ್ಲಾಧಿಕಾರಿ ಹಾವೇರಿ