ಶಿಕ್ಷಣ ಸ್ವರೂಪ ಬದಲಾಗಲಿ

ಕೆ.ಆರ್.ಪೇಟೆ: ಪ್ರಸ್ತುತ ವ್ಯವಸ್ಥೆಯಲ್ಲಿ ಶಿಕ್ಷಣದ ಸ್ವರೂಪವೇ ಬದಲಾಗಬೇಕಿದೆ. ಮಾನವೀಯತೆಯ ನೆಲೆಗಟ್ಟಿನಲ್ಲಿ ಶಿಕ್ಷಣವನ್ನು ನೀಡಬೇಕಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕ್ರೀಡಾ ವಿಭಾಗ ಮತ್ತು ಸಾಂಸ್ಕೃತಿಕ ವಿಭಾಗದ ವತಿಯಿಂದ ಆಯೋಜಿಸಿದ್ದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಈಗಿನ ಶಿಕ್ಷಣ ಕೇವಲ ಕಲಿಕೆಯ ವರ್ಗಾವಣೆಯಾಗಿದೆ. ಇದರಿಂದ ಸಮಾಜಕ್ಕಾಗಲಿ ಅಥವಾ ಸಮುದಾಯಕ್ಕಾಗಲಿ ಯಾವುದೇ ಪ್ರಯೋಜನವಾಗುವುದಿಲ್ಲ. ಯುವಕರು ಥಿಯರಿ ಆಧರಿತ ಶಿಕ್ಷಣಕ್ಕೆ ಜೋತು ಬೀಳಬಾರದು. ಪ್ರಾಯೋಗಿಕ ಶಿಕ್ಷಣಕ್ಕೆ ಒಡ್ಡಿಕೊಳ್ಳಬೇಕು. ಪ್ರಯೋಗ ಇದ್ದೆಡೆ ಪ್ರಶ್ನೆ ಇರುತ್ತದೆ. ಪ್ರಶ್ನೆಗೆ ಉತ್ತರ ಹುಡುಕುವಷ್ಟರಲ್ಲಿ ಬದುಕಿನ ಪಾಠವನ್ನು ಸರಿಯಾಗಿ ಕಲಿಯಬಹುದಾಗಿದೆ ಎಂದು ಹೇಳಿದರು.

ಬಹುಮಾನ ವಿತರಣೆ: ಕಾಲೇಜಿನ ದತ್ತಿನಿಧಿ ನಗದು ಪುರಸ್ಕಾರಕ್ಕೆ ಪಾತ್ರರಾದ ವಿದ್ಯಾರ್ಥಿಗಳಿಗೆ ಇದೇ ವೇಳೆ ಸಹ ಪ್ರಾಧ್ಯಾಪಕ ಭದ್ರೇಗೌಡ ಬಹುಮಾನ ವಿತರಿಸಿದರು. ಪ್ರಾಂಶುಪಾಲ ಡಾ.ಜಾನೇಗೌಡ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ನಿರ್ದೇಶಕ ಪಟೇಲ್ ಪಾಂಡು, ಅಧೀಕ್ಷಕ ಬಿ.ಎ.ಮಂಜುನಾಥ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಪ್ರೊ.ಜಯಕೀರ್ತಿ, ಆರ್.ಕಿರಣ್, ಮೋಹನ್‌ಕುಮಾರ್, ಸಹ ಪ್ರಾಧ್ಯಾಪಕ ಎಂ.ಎನ್.ಸಂಪತ್‌ಕುಮಾರ್, ಕ್ರೀಡಾ ನಿರ್ದೇಶಕಿ ಸಂಧ್ಯಾರಾಣಿ ಹಾಜರಿದ್ದರು.