ಶಿಕ್ಷಣ ಸಚಿವರ ನೇಮಕಕ್ಕೆ ಒತ್ತಾಯ

ಚಾಮರಾಜನಗರ: ರಾಜ್ಯ ಸರ್ಕಾರ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರನ್ನು ಕೂಡಲೇ ನೇಮಿಸಬೇಕು ಎಂದು ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸುಲ್ತಾನ್ ಷರೀಫ್ ವೃತ್ತದಿಂದ ಭುವನೇಶ್ವರಿ ವೃತ್ತದ ತನಕ ಮೆರವಣಿಗೆ ನಡೆಸಿದರು. ಬಳಿಕ ರಸ್ತೆ ಸಂಚಾರ ತಡೆ ನಡೆಸಿ, ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣ ಸಚಿವರಾಗಿದ್ದ ಎನ್.ಮಹೇಶ್ ಅವರು ರಾಜೀನಾಮೆ ನೀಡಿದ ಬಳಿಕ ಸಚಿವ ಸಂಪುಟ ವಿಸ್ತರಣೆಗೊಂಡಿದೆ. ಆದರೂ ರಾಜಕೀಯ ಕಚ್ಚಾಟದಿಂದ ಸಮರ್ಥ ಸಚಿವರನ್ನು ಇಲಾಖೆಗೆ ನೇಮಿಸಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಸಾರಕ್ಷತಾ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷವಾಗಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. 8ನೇ ತರಗತಿ ವಿದ್ಯಾರ್ಥಿಗಳಿಗೆ ಸರಿಯಾಗಿ ಸೈಕಲ್ ವಿತರಿಸಿಲ್ಲ. ಪದವಿಪೂರ್ವ ಶಿಕ್ಷಣ ಇಲಾಖೆಗಳಲ್ಲಿ 3 ತಿಂಗಳಿನಿಂದ ಪೂರ್ಣಾವಧಿ ನಿರ್ದೇಶಕರಿಲ್ಲ. ಜಂಟಿ ನಿರ್ದೇಶಕರು, ಉಪನಿರ್ದೇಶಕರಿಲ್ಲದೆ ವ್ಯವಸ್ಥೆ ಕುಂಠಿತಗೊಂಡಿದೆ ಎಂದು ದೂರಿದರು.

ಮುಂಬರುವ ವಾರ್ಷಿಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಪಾರದರ್ಶಕತೆ ಕಾಯ್ದುಕೊಳ್ಳಲು ಮುಂಜಾಗ್ರತೆ ಕ್ರಮಗಳನ್ನು ವಹಸಬೇಕು. ಉಚಿತ ಸೈಕಲ್ ವಿತರಣೆಯಲ್ಲಿ ಆಗಿರುವ ಅವ್ಯವಸ್ಥೆಯನ್ನು ಸರಿಪಡಿಸಿ ಶೀಘ್ರದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಬೇಕು. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಮುಖ್ಯ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಸುಹೇಲ್‌ಪಾಷ, ಉಪಾಧ್ಯಕ್ಷ ಉಮ್ಮೆಜುಹ, ಜಿಲ್ಲಾ ಕಾರ್ಯದರ್ಶಿ ಅಬ್ದುಲ್, ನಿದಾಫಾತಿಮ, ಜಿಲ್ಲಾ ಸಮಿತಿ ಸದಸ್ಯರಾದ ಮಹಮದ್‌ಮಸೂದ್, ಮಹಮದ್‌ಸುನೆನ್, ಸೈಯದ್‌ಸುಪಿಯಾನ, ಮಹಮದ್ ಸುಹೇಲ್, ಸೈಯದ್‌ಅಸ್ರಾರ್, ನಗರಸಭಾ ಸದಸ್ಯರಾದ ಸಮೀವುಲ್ಲಾಖಾನ್, ಎಂ.ಮಹೇಶ್, ಮೊಹಮ್ಮದ್‌ಅಮೀಕ್, ಎಸ್‌ಡಿಪಿಐ ಜಿಲ್ಲಾ ಸಮಿತಿ ಸರ್ದಾರ್ ಷರೀಫ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *