ಚಿತ್ರದುರ್ಗ: ದೇಶದ ವಿವಿಧೆಡೆಯ ವೈವಿಧ್ಯಮಯ ಉಡುಗೆ-ತೊಡುಗೆಯೊಂದಿಗೆ ಆಗಮಿಸಿದ ಕಲಾವಿದರು. ಇಲ್ಲಿನ ಸಂಸ್ಕೃತಿ, ಸಂಸ್ಕಾರ ಅನಾವರಣದ ಮೂಲಕ ಗಮನ ಸೆಳೆದರು. ಅದರಲ್ಲಿ ಶ್ರೀರಾಮಚಂದ್ರ ಪ್ರಭುವಿನ ಭಕ್ತನ ರಕ್ಷಣೆಗಾಗಿ ವಾನರ ಸೇನೆಯೊಂದಿಗೆ ಧಾವಿಸಿದ ಬಹುಬಲಿ ಭಜರಂಗಿಯ ಹನುಮಾನ್ ಚಾಲೀಸಾ ಗೀತ ಸಂಯೋಜನೆಯ ರೂಪಕ ರೋಮಾಂಚನ ಸೃಷ್ಟಿಸಿತು…
ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಹೊರತೆಗೆಯಲು ನಗರದ ದೇವರಾಜ ಅರಸು ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಆರಂಭಗೊಂಡ ಡೆಸ್ಟಿನಿ-2025 ಬೃಹತ್ ಸಾಂಸ್ಕೃತಿಕ ಉತ್ಸವದಲ್ಲಿ ಸಿದ್ಧವಾಗಿದ್ದ ಸುಂದರ ವೇದಿಕೆ ಇದಕ್ಕೆ ಸಾಕ್ಷಿಯಾಯಿತು.
ದುರ್ಗಾಸ್ತಮಾನ, ಬನ್ ಕೇ, ಜಿಯಾ ಚಲೇ ಜಾ ಚಲೇ, ದೈವ ಸ್ವರೂಪದ ಚಂದಾಕಾರ, ಭೈರವ ರಾಗ ಹೀಗೆ.. ಅಭಿವ್ಯಕ್ತ ಸಾಧನೆಯೊಂದಿಗೆ ಕಲಾವಿದರು ಪ್ರಸ್ತುತ ಪಡಿಸಿದ ವಿವಿಧ ರೂಪಕಗಳು ಸಾಂಸ್ಕೃತಿಕ ಲೋಕಕ್ಕೆ ಕರೆದೊಯ್ದವು.
ಖ್ಯಾತ ನಗೆವಾಗ್ಮಿ ಪ್ರೊ.ಕೃಷ್ಣೇಗೌಡ ಮಾತನಾಡಿ, ಗಣಪತಿ, ಆಂಜನೇಯ, ಶ್ರೀರಾಮ, ಶಿವ, ವಿಷ್ಣು ಸೇರಿ ಅನೇಕ ದೇವರ ದೇಗುಲಗಳನ್ನು ಊರುಗಳಲ್ಲಿ ನಿರ್ಮಿಸುತ್ತಾರೆ. ಆದರೆ, ಸರಸ್ವತಿ ಮಂದಿರ ಯಾರು ಕಟ್ಟಿಸುವುದಿಲ್ಲ. ವಿದ್ಯೆ ನೀಡುವ ಶಿಕ್ಷಣ ಸಂಸ್ಥೆಗಳೇ ಶಾರದಾ ಮಾತೆಯ ವಾಸಸ್ಥಳ ಎಂದು ಬಣ್ಣಿಸಿದರು.
ಕತೆ, ಕವನ, ವಚನ, ಹಾಡು, ಹೊಗಳಿಕೆ, ಬೈಗುಳ ಸೇರಿ ಎಲ್ಲವನ್ನೂ ಒಳಗೊಂಡ ಪ್ರಾಚೀನ ಮತ್ತು ಅತ್ಯಂತ ಸುಂದರವಾದ ಭಾಷೆ ಕನ್ನಡ. ಇದನ್ನು ಭಾವನೆಗಳ ಜೊತೆ ಮಾತನಾಡಿದರೆ ತುಂಬಾ ಚೆಂದ. ಭಾರತೀಯ ಶಿಕ್ಷಣ ಸಂಸ್ಥೆಗೆ ತನ್ನದೇ ಆದ ಘನತೆ ಇದೆ. ವಿದೇಶ ಮಾದರಿ ಇಲ್ಲಿಗೆ ಖಂಡಿತ ಅಗತ್ಯವಿಲ್ಲ. ಗುರಿ ಇಲ್ಲದೆ ಸಾಧನೆಯೂ ಸಾಧ್ಯವಿಲ್ಲ ಎಂದರು.
ದೈಹಿಕ ಸದೃಢತೆ, ವಿದ್ಯೆ, ನಂತರ ಉದ್ಯೋಗ ಮನುಷ್ಯನ ಶಕ್ತಿ ಎಂದು ಹಿಂದೆಲ್ಲ ಹೇಳಲಾಗುತ್ತಿತ್ತು. ಆದರೆ, ಮುಂಬರುವ ದಿನಗಳಲ್ಲಿ ವಿದ್ಯೆಯ ಜೊತೆ ಕೌಶಲವಿದ್ದರೆ, ಮನೆಗೆ ಅವಕಾಶ ಹುಡುಕಿಕೊಂಡು ಬರಲಿವೆ. ಆ ನಿಟ್ಟಿನಲ್ಲಿ ಈ ಶಿಕ್ಷಣ ಸಂಸ್ಥೆ ಕೌಶಲ ಒದಗಿಸುವ ಭರವಸೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಹೆಸರಿನಲ್ಲಿ ಚಿತ್ರದುರ್ಗದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಡಾ.ಎಂ.ಚಂದ್ರಪ್ಪ ಅವರ ಕುಟುಂಬ ಕಾರಣವಾಗಿದೆ. ಇಲ್ಲಿ ಶಿಕ್ಷಣ ಪಡೆದವರೂ ದೇಶ ಮತ್ತು ಸಮಾಜಕ್ಕೆ ಆಸ್ತಿಯಾಗಲಿ. ನಾಡಿಗೆ ಕೀರ್ತಿ ತರಲಿ ಎಂದು ಆಶಿಸಿದರು.
ಕೌಶಲದ ಭರವಸೆ: ಸಂಸ್ಥೆಯ ಸಿಇಒ ಎಂ.ಸಿ.ರಘುಚಂದನ್ ಮಾತನಾಡಿ, ಸಂಸ್ಥೆಯೂ 42 ವಸಂತ ಕಳೆದಿದೆ. 5 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮತ್ತೊಂದು ಶಾಲೆ ತೆರೆಯುವ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದು, ಚಂದ್ರಪ್ಪ ಅವರೂ ಇದನ್ನು ಊಹಿಸಿರಲಿಲ್ಲ. ಇದಕ್ಕೆ ಶಿಕ್ಷಕರು, ಪಾಲಕರು ಹಾಲೆರೆದು ಬೆಳೆಸಿದ್ದೀರಿ. 3ಸಾವಿರ ಶಿಕ್ಷಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ನೂತನವಾಗಿ ಆರಂಭಗೊಂಡ ಪ್ರಕೃತಿ ಆಯುರ್ವೇದಿಕ್ ಕಾಲೇಜಿನ ಸೀಟುಗಳು ಪೂರ್ಣಗೊಂಡಿವೆ. ಶಿಕ್ಷಣದ ಜೊತೆ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಒಂದೇ ಶುಲ್ಕದಲ್ಲಿ ನೃತ್ಯ, ಸಂಗೀತ, ಕಲೆ, ಕ್ರೀಡೆ ಸೇರಿ ಕೌಶಲ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ಎಂ.ಚಂದ್ರಪ್ಪ ಮಾತನಾಡಿ, ನಮ್ಮಲ್ಲಿ ಈವರೆಗೂ 40ರಿಂದ 50ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದಾರೆ. ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ವಿದ್ಯೆಯಿಂದ ವಂಚಿತರಾಗಬಾರದೆಂಬ ಕಾರಣ ಸಂಸ್ಥೆ ಆರಂಭಿಸಿ, ಮುನ್ನಡೆಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದು ಭರವಸೆ ನೀಡಿದರು.
ಡೀಮ್ಡ್ ವಿವಿ ಆಗಲಿ: ಹಾಸ್ಯ ಕಲಾವಿದೆ ಸುಧಾ ಬರಗೂರು ಮಾತನಾಡಿ, ಈ ಶಿಕ್ಷಣ ಸಂಸ್ಥೆಗೆ ಶಿಕ್ಷಣದ ಕುರಿತು ಇರುವ ಕಾಳಜಿ ಗಮನಿಸಿದರೆ, ಮುಂಬರುವ ದಿನಗಳಲ್ಲಿ ಡೀಮ್ಡ್ ವಿಶ್ವವಿದ್ಯಾಲಯ ಆಗುವುದರಲ್ಲಿ ಅನುಮಾನವಿಲ್ಲ. ಕೆಜಿಯಿಂದ ಪಿಜಿವರೆಗೂ ಕಲಿಕೆಗೆ ಅವಕಾಶ ಕಲ್ಪಿಸಿದೆ. ಜೀವನದಲ್ಲಿ ಸಾಧನೆಗೈಯಲು ಕೌಶಲ ಮುಖ್ಯ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಆಡಳಿತಾಧಿಕಾರಿ ಎಚ್.ಚಂದ್ರಕಲಾ, ಅಧ್ಯಕ್ಷೆ ಎಂ.ಸಿ.ಯಶಸ್ವಿನಿ ಕಿರಣ್, ಡಿಡಿಪಿಐ ಎಂ.ಆರ್.ಮಂಜುನಾಥ್ ಇತರರಿದ್ದರು.