Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಶಿಕ್ಷಣ ಗ್ರಾಹಕ ಸೇವೆಯಲ್ಲ, ಶಿಕ್ಷಣ ಸಂಸ್ಥೆ ವ್ಯಾಪಾರಿ ಸಂಸ್ಥೆಯಲ್ಲ

Wednesday, 27.12.2017, 3:02 AM       No Comments

| ಸಜನ್​ ಪೂವಯ್ಯ

ಸಾರ್ವತ್ರಿಕ ಶಿಕ್ಷಣ ಕಡ್ಡಾಯವಾಗಬೇಕು ಮತ್ತು ಅದಕ್ಕೆ ಹೆಚ್ಚಿನ ಮಹತ್ವ ಸಿಗಬೇಕು ಎಂಬ ವಿಚಾರದ ಬಗ್ಗೆ ಕಳೆದ ಕಂತಿನಲ್ಲಿ ಒಂದಷ್ಟು ವಿಚಾರ ಪ್ರಸ್ತಾಪಮಾಡಲಾಗಿತ್ತು. ಸಂವಿಧಾನ ಅಳವಡಿಸಿಕೊಂಡು ದಶಕಗಳೇ ಕಳೆದರೂ, ಎಲ್ಲರಿಗೂ ಸಾರ್ವತ್ರಿಕ ಮತ್ತು ಗುಣಮಟ್ಟದ ಶಿಕ್ಷಣ ಒದಗಿಸುವುದು ಸಾಧ್ಯವಾಗಿಲ್ಲ ಯಾಕೆ ಎಂಬ ಚಿಂತನೆಯ ಮುಂದುವರಿದ ಭಾಗ ಇಲ್ಲಿದೆ. 

ಭಾರತದ ಸಂವಿಧಾನದ ವಿಧಿ 45ರಲ್ಲಿ ಅಂತರ್ಗತವಾಗಿರುವ ‘ಸರ್ಕಾರಿ ಕಾರ್ಯನೀತಿಯ ಮಾರ್ಗದರ್ಶಿ ಸೂತ್ರ’ದಲ್ಲಿ ಎಲ್ಲ ಮಕ್ಕಳಿಗೂ 14 ವರ್ಷ ವಯಸ್ಸಿನವರೆಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಒದಗಿಸಲು ಸರ್ಕಾರ ಪ್ರಯತ್ನಿಸಬೇಕು ಎಂಬ ಉಪಬಂಧವಿದೆ. ಎಲ್ಲರಿಗೂ ಸಾರ್ವತ್ರಿಕ ಹಾಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸಬೇಕೆಂಬುದೇ ಇದರ ಅಂತಿಮಗುರಿ. ಇದರ ಆಶಯ ಈಡೇರದ ಹಿನ್ನೆಲೆಯಲ್ಲಿ ವಿಧಿ 21ಎ ಅಡಿಯಲ್ಲಿ ಸುಸ್ಪಷ್ಟ ಉಪಬಂಧವೊಂದರ ಸೇರ್ಪಡೆಗೆ ಅನುವು ಮಾಡಿಕೊಡಲು, 2002ರ ವರ್ಷದಲ್ಲಿ ಸಂವಿಧಾನಕ್ಕೆ 86ನೇ ತಿದ್ದುಪಡಿ ಮಾಡಲಾಯಿತು; ಸರ್ಕಾರವು ಕಾನೂನಿನ ಮಾಗೋಪಾಯದ ಮೂಲಕ ನಿರ್ಷRಸಿದ ವಿಧಾನದಲ್ಲಿ, 6ರಿಂದ 14 ವರ್ಷ ವಯಸ್ಸಿನವರೆಗಿನ ಎಲ್ಲ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಸರ್ಕಾರ ಒದಗಿಸುವಂತಾಗಬೇಕು ಎಂಬ ಸ್ಪಷ್ಟ ಆದೇಶ ಈ ಉಪಬಂಧದಲ್ಲಿದೆ. ಇದರ ಪರಿಣಾಮ, ಆರರಿಂದ ಹದಿನಾಲ್ಕು ವರ್ಷಗಳವರೆಗಿನ ವಯೋಮಾನದ ಎಲ್ಲ ಮಕ್ಕಳ ಒಂದು ‘ಪರಿಪಕ್ವ/ಸುಸಜ್ಜಿತ ಸುಸ್ಪಷ್ಟ ಮೂಲಭೂತ ಹಕ್ಕಾಗಿ’ ಆ ಆದೇಶ ರೂಪಾಂತರಗೊಂಡಿತು.

ಅಲ್ಲದೆ, ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶಕ್ಕಾಗಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಮಕ್ಕಳ ಹಕ್ಕು ಕಾಯ್ದೆ 2009(ಆರ್​ಟಿಇ 2009)ಯನ್ನು ಕೂಡ ಸರ್ಕಾರ ಜಾರಿಗೆ ತಂದಿದೆ. ಆ ಮೂಲಕ ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಮತ್ತು ಎಲ್ಲರಿಗೂ ಸಮಾನ ಅವಕಾಶ ಒದಗಿಸುತ್ತ ಸಮಾಜವನ್ನು ಬಲಪಡಿಸುವ ಕೆಲಸವನ್ನು ಮಾಡತೊಡಗಿದೆ.

ಇದಕ್ಕೂ ಪೂರ್ವದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 1968,1986, 1992ರಲ್ಲೂ ಸರ್ಕಾರ ರೂಪಿಸಿತ್ತು. ಕೊನೆಗೆ ಅಂತಹ ವ್ಯವಸ್ಥೆಯನ್ನು 1997ರಲ್ಲಿ ಜಾರಿಗೊಳಿಸಲು ಯಶಸ್ವಿಯಾಯಿತು. ಆದಾಗ್ಯೂ, ಅಂತಹ ಪ್ರಯತ್ನಗಳು ವಿಫಲವಾದವು ಮತ್ತು ವಿಫಲವಾಗುತ್ತಲೇ ಇವೆ. ಇಷ್ಟಾದರೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒಂದು ಮೂಲಭೂತ ಹಕ್ಕಾಗಿ ನಮ್ಮ ಮಕ್ಕಳ ಪಾಲಿಗೆ ಖಾತ್ರಿಯಾಗಿದೆ. ಆದರೆ, ಆರ್​ಟಿಇ 2009ರ ಅನುಷ್ಠಾನದ ವೇಳೆ ನಿಯಮ ಎಷ್ಟು ಸಾಧ್ಯವೋ ಅಷ್ಟು ಸತ್ತ್ವಹೀನವಾಗಿ ಬಿಟ್ಟಿತು. ಸಾರ್ವತ್ರಿಕ ಮತ್ತು ಸಾಮಾನ್ಯ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಜಾರಿ ಕನಸು ಕನಸಾಗಿಯೇ ಉಳಿದುಬಿಟ್ಟಿತು.

ಪ್ರಾಥಮಿಕ ಶಿಕ್ಷಣ ಕಡ್ಡಾಯ ಮಾಡುವ ಪರಿಣಾಮಕಾರಿ ಕಾನೂನು ಜಾರಿಗೊಳಿಸುವಲ್ಲಿ ವಿವಿಧ ರಾಜ್ಯಗಳು ವಿಫಲವಾಗಿರುವ ಕುರಿತು ಶಾಸನಾತ್ಮಕ ಟಿಪ್ಪಣಿಯನ್ನು ರಾಜ್ಯಸಭೆಯ ಮಾನವ ಸಂಪನ್ಮೂಲ ಅಭಿವೃದ್ಧಿ ಕುರಿತ ಸಂಸದೀಯ ಸ್ಥಾಯಿ ಸಮಿತಿ ಗಂಭೀರವಾಗಿ ಪರಿಗಣಿಸಿತ್ತು. ಅದನ್ನು ಆರ್​ಟಿಇ 2009ರ ಕರಡು ಸಿದ್ಧಪಡಿಸುವ ವೇಳೆ ವಿಶ್ಲೇಷಣೆಗೊಳಪಡಿಸಿ ಸೇರಿಸಿತ್ತು ಕೂಡ. ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸುವ ಕಾನೂನು ಜಾರಿಗೊಳಿಸಿದ ರಾಜ್ಯಗಳು ಕೂಡ, ಕಾನೂನಾತ್ಮಕವಾಗಿ ದಾಖಲೆಗೆ ಮಕ್ಕಳ ಹಾಜರಾತಿ ಇದ್ದರೆ ಸಾಕು ಎಂದು ಭಾವಿಸಿ ಆ ಕಡೆಗೆ ಹೆಚ್ಚು ಗಮನಹರಿಸಿದ್ದವು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರದಲ್ಲಿ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಗೊಳ್ಳಬೇಕು ಎಂಬ ಕನಸು ಬಿತ್ತಿದ್ದು, ಆ ಬಹುಕಾಲದ ಕನಸು ನನಸಾಗಿಸಲು ಆಗಿರುವ ಕೆಲಸ ಮಾತ್ರ ಅತ್ಯಲ್ಪ ಎಂಬ ಭಾವನೆ ಕಾಡುತ್ತಿದೆ.

ಹೀಗಾಗಿ, ಶಿಕ್ಷಣ ವ್ಯವಸ್ಥೆಯ ಸಾರ್ವತ್ರೀಕರಣದ ಉದ್ದೇಶದೊಂದಿಗೆ ಆರ್​ಟಿಇ 2009ರ ಕಾಯ್ದೆ ಸಂವಿಧಾನದ ಅನುಚ್ಛೇದ 21ಎ ಪ್ರಕಾರ ಸೇರ್ಪಡೆಗೊಂಡಿತು. ಕೊನೆಗೆ ಈ ಕಾಯ್ದೆಯ ಸೆಕ್ಷನ್ 7(6)(ಎ) ಪ್ರಕಾರ ದೇಶದ ಶಿಕ್ಷಣ ವ್ಯವಸ್ಥೆಯ ಚೌಕಟ್ಟು ರೂಪಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದು. ಇದಕ್ಕಾಗಿ ಸೆಕ್ಷನ್ 29ರ ಪ್ರಕಾರ ಸರ್ಕಾರ ನಿಗದಿತ ಶೈಕ್ಷಣಿಕ ಪ್ರಾಧಿಕಾರದ ನೆರವು ಪಡೆದುಕೊಳ್ಳಬಹುದು. ಸೆಕ್ಷನ್ 29 ಕೂಡ ಅದೇ ಉದ್ದೇಶವನ್ನು ಸಾರುತ್ತದೆ. ಅಲ್ಲದೆ, (1) ಸಾಂವಿಧಾನಿಕ ಮೌಲ್ಯಗಳನ್ನು ಖಾತ್ರಿ ಪಡಿಸುವುದು (2) ಮಗುವಿನ ಸರ್ವಾಂಗೀಣ ಅಭಿವೃದ್ಧಿ; (3) ಶಾರೀರಿಕ ಮತ್ತು ಬೌದ್ಧಿಕ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸುವುದು ಇತ್ಯಾದಿ ಸೇರಿ ಸಾಂವಿಧಾನಿಕ ಮೌಲ್ಯಗಳ್ನು ಖಾತ್ರಿಗೊಳಿಸುವಂತಹ ರಾಷ್ಟ್ರೀಯ ಶೈಕ್ಷಣಿಕ ಚೌಕಟ್ಟು ರೂಪಿಸುವಂತಹ ಬಾಧ್ಯತೆಯನ್ನು ಅದು ಪ್ರತಿಧ್ವನಿಸುತ್ತದೆ.

ಈ ವಿಷಯದಲ್ಲಿ ಸಹಕಾರ ನೀಡಲು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಮಿತಿ(ಎನ್​ಸಿಇಆರ್​ಟಿ)ಯನ್ನು ಸೆಕ್ಷನ್ 29ರ ಪ್ರಕಾರ ಸರ್ಕಾರ ನೇಮಿಸಿದೆ. ಆದಾಗ್ಯೂ, ಎನ್​ಸಿಇಆರ್​ಟಿ 2005ರಲ್ಲಿ ಸಿದ್ಧಪಡಿಸಿದ ರಾಷ್ಟ್ರೀಯ ಶೈಕ್ಷಣಿಕ ನೀತಿಯನ್ನು ಅನ್ವಯಿಸಿಕೊಂಡ ಸರ್ಕಾರ, ಆರ್​ಟಿಇ 2009ರ ಹಿಂದಿನ ಪ್ರಶಂಸಾರ್ಹ ಉದ್ದೇಶವನ್ನೇ ನಿರ್ಲಕ್ಷಿಸಿದೆ. ಅದೂ, ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ರೂಪಿತವಾಗಿರದೇ ಇದ್ದ ಹಳೇ ಶೈಕ್ಷಣಿಕ ನೀತಿಯನ್ನು ಅನ್ವಯಿಸುವ ಮೂಲಕ ಆರ್​ಟಿಇ 2009ನ್ನು ಕಡೆಗಣಿಸಿದೆ. ಕಣ್ಣಿಗೆ ರಾಚುವಂಥ ವಿಷಯ ಏನೆಂದರೆ, ದೇಶದ ವಿವಿಧ ಶೈಕ್ಷಣಿಕ ಮಂಡಳಿಗಳ ಮೇಲೆ ಎನ್​ಸಿಇಆರ್​ಟಿಗೆ ಯಾವುದೇ ರೀತಿಯ ಹಿಡಿತವಾಗಲೀ, ಅವುಗಳ ಶಿಕ್ಷಣ ನೀತಿ ಮೇಲೆ ನಿಗಾ ಇರಿಸುವ ಕೆಲಸವಾಗಲೀ ಇಲ್ಲ. ಎನ್​ಸಿಇಆರ್​ಟಿ ಅಧೀನದಲ್ಲಿ ಕೆಲಸ ಮಾಡುವ ಶಿಕ್ಷಣ ಮಂಡಳಿ ಸಿಬಿಎಸ್​ಇ ಮಾತ್ರವೇ. ಐಸಿಎಸ್​ಇ ಅಥವಾ ಹಲವು ರಾಜ್ಯಗಳ ಶಿಕ್ಷಣ ಮಂಡಳಿಗಳ ಶಿಕ್ಷಣ ನೀತಿಯ ವಿಚಾರದಲ್ಲಿ ಯಾವುದೇ ಸಾಮ್ಯತೆ ಅಥವಾ ಒಂದೇ ಮೂಲದ ಪಠ್ಯಕ್ರಮವಾಗಲೀ ಇಲ್ಲ ಎಂಬುದು ವಾಸ್ತವ.

ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವ ಸಲುವಾಗಿ ಸರ್ಕಾರ ಪರಿಣಾಮಕಾರಿ ನೀತಿಯನ್ನು ರೂಪಿಸುತ್ತ ಬಲಗೊಳಿಸುತ್ತಿರುವಂತೆ ಕಂಡರೂ, ಪೂರ್ವನಿಶ್ಚಿತ ನೀತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಈ ರೀತಿ ಮಾಡುವ ಮೂಲಕ ಸೆಕ್ಷನ್ 7 ಮತ್ತು 29ಕ್ಕೆ ಹೆಚ್ಚಿನ ಮಹತ್ವ ನೀಡಿದಂತಾಗಿದೆ. ಒಂದೊಮ್ಮೆ ಇದುವೇ ಮುಂದುವರಿದರೆ ಆರ್​ಟಿಇ 2009ರ ಸೆಕ್ಷನ್ 7 ಮತ್ತು 29 ರದ್ದುಗೊಂಡರೂ ಯಾವುದೇ ವ್ಯತ್ಯಾಸವಾಗದು. ಇಂತಹ ಸಾಮಾಜಿಕ ನ್ಯಾಯ ಮತ್ತು ಸಮಾಜ ಕಲ್ಯಾಣ ಶಾಸನ ಇನ್ನೂ ಅನುಷ್ಠಾನಗೊಳ್ಳದಿರುವುದು ಅಪಾಯಕಾರಿ ಬೆಳವಣಿಗೆಯೇ ಸರಿ.

ದೇಶಾದ್ಯಂತ ಹಲವು ಪಠ್ಯ ಕ್ರಮಗಳಿಗೆ ಉತ್ತೇಜನ ಸಿಗುತ್ತಿರುವ ಕಾರಣ, ಕನಿಷ್ಠ ಒಂದು ಸಾಮಾನ್ಯ ನಿಯಮ ಇರಬೇಕಾದು ಅತೀ ಅವಶ್ಯ. ಈ ರೀತಿ ನಿಯಮ ಇದ್ದಾಗಲಷ್ಟೇ ಎಲ್ಲ ಮಕ್ಕಳಿಗೂ ಸಮಾನ ಅವಕಾಶವನ್ನು ಖಾತ್ರಿಗೊಳಿಸುವುದು ಸಾಧ್ಯ. ಸೆಕ್ಷನ್ 7 ಮತ್ತು 29ರ ಮೂಲ ಉದ್ದೇಶವೂ ಇದೇ ಆಗಿದೆ. ಇಂತಹ ಸಮಾನತೆ ಸಮಾಜದಲ್ಲಿನ ಎಲ್ಲ ವರ್ಗಗಳ ನಡುವಿನ ಬಲವನ್ನು ಇನ್ನಷ್ಟು ಹೆಚ್ಚಿಸಲಿದೆ ಮತ್ತು ಸಾಮಾಜಿಕ, ಆರ್ಥಿಕ ಸೇರಿ ಹಲವು ಅಂತರಗಳನ್ನು ತಗ್ಗಿಸಲಿದೆ. ಮೂಲಭೂತ ಹಕ್ಕಾಗಿರುವ ಸಮಾನ ಮತ್ತು ಗುಣಮಟ್ಟದ ಶೈಕ್ಷಣಿಕ ಅವಕಾಶಗಳನ್ನು ಎಲ್ಲರಿಗೂ ಪರಿಣಾಮಕಾರಿಯಾಗಿ ನೀಡದ ವ್ಯವಸ್ಥೆಯನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಅಲ್ಲದೆ, ಅಂತಹ ವ್ಯವಸ್ಥೆಯಿಂದ ಅವಕಾಶ ನಿರಾಕರಿಸಲ್ಪಟ್ಟವರಿಗೆ ಅನ್ಯಾಯವಾಗುತ್ತದೆ.

ಜಾಗತಿಕ ಮಾರುಕಟ್ಟೆಯ ಕೆಲಸಗಳನ್ನು ನಮ್ಮ ಯುವ ತಲೆಮಾರು ನಿರ್ವಹಿಸಬೇಕಾಗಿದೆ. ಭಾರತ ಯುವಜನರ ದೇಶ ಮತ್ತು ಯುವಜನರೇ ದೇಶದ ಭವಿಷ್ಯ ಕೂಡ. ಹೀಗಿರುವಾಗ ಯಾವುದೇ ಮಗುವಿಗೆ ಬಾಲ್ಯದಲ್ಲಿ ಮೂಲ ಶಿಕ್ಷಣ ಸಿಗುವ ಹಂತದಲ್ಲೇ ಆತ/ಆಕೆಯ ವ್ಯಕ್ತಿತ್ವವೂ ರೂಪುಗೊಳ್ಳುತ್ತದೆ ಎಂಬುದನ್ನೂ ಗಮನಿಸಬೇಕಾಗುತ್ತದೆ. ಶಿಕ್ಷಣ ಎನ್ನುವಂಥದ್ದು ಯಾವುದೋ ಗ್ರಾಹಕ ಸೇವೆಯೂ ಅಲ್ಲ, ಶೈಕ್ಷಣಿಕ ಸಂಸ್ಥೆಗಳು ವಾಣಿಜ್ಯ ಸಂಸ್ಥೆಗಳಂತೆ ಕೆಲಸ ಮಾಡುವುದಕ್ಕೆ ಅವಕಾಶವೂ ಸಿಗಬಾರದು ಎಂಬುದು ಸದ್ಯದ ತುರ್ತ.

( ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top