ಶಿಕ್ಷಣ ಕ್ರಾಂತಿಗೆ ಶಾಲೆ ದತ್ತು

ರಾಮನಗರ: ಜಿಲ್ಲೆಯ ಶೈಕ್ಷಣಿಕ ಏಳಿಗೆಗೆ ಜಿಲ್ಲಾಮಟ್ಟದ ಪ್ರತಿಯೊಬ್ಬ ಅಧಿಕಾರಿಯೂ ಒಂದೊಂದು ಸರ್ಕಾರಿ ಶಾಲೆ ದತ್ತು ಪಡೆದು ಆ ಮೂಲಕ ಶೈಕ್ಷಣಿಕ ಉನ್ನತಿಗಾಗಿ ಪರಿಪೂರ್ಣ ಫಲಿತಾಂಶದತ್ತ ನಮ್ಮ ಹೆಜ್ಜೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಗಣನೀಯ ಸುಧಾರಣೆ ಕಂಡುಕೊಳ್ಳುವ ನಿಟ್ಟಿನಲ್ಲಿ ಹಲವು ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ, ಅದರ ಅಂಗವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಪವಿಭಾಗಾಧಿಕಾರಿ ಸೇರಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಪ್ರೌಢಶಾಲೆಗಳನ್ನು ದತ್ತು ನೀಡಲಾಗುವುದು ಎಂದರು.

ಸಂಕ್ಷಿಪ್ತ ಪಠ್ಯ ಮುದ್ರಣ: ಟೊಯೋಟಾ ಸಂಸ್ಥೆಯ ಸಿಎಸ್​ಆರ್ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಈ ಬಾರಿ ಸಂಕ್ಷಿಪ್ತ ಉತ್ತರ ಒದಗಿಸುವ ಪಠ್ಯ ಮುದ್ರಿಸಿ ನೀಡಲಾಗುತ್ತಿದೆ. 107 ಪ್ರೌಢಶಾಲೆಗಳಲ್ಲಿ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯುತ್ತಿದೆ. ದತ್ತು ಪಡೆದ ಶಾಲೆಗಳಿಗೆ ಉಸ್ತುವಾರಿ ಅಧಿಕಾರಿಗಳು ತಿಂಗಳಲ್ಲಿ ಕನಿಷ್ಠ ಎರಡು ಬಾರಿ ತೆರಳಿ ಮಕ್ಕಳಲ್ಲಿ ಆತ್ಮವಿಶ್ವಾಶ ತುಂಬಲಿದ್ದಾರೆ. ತಾವು ನಡೆದು ಬಂದ ದಾರಿ, ಸಾಧನೆಗಳ ಕುರಿತು ವಿವರಿಸುವ ಮೂಲಕ ಮಕ್ಕಳನ್ನು ತಮ್ಮಂತಾಗಲು ಪ್ರೇರೇಪಿಸಲಿದ್ದಾರೆ ಎಂದು ತಿಳಿಸಿದರು.

ಜಿಪಂ ಉಪಾಧ್ಯಕ್ಷೆ ವೀಣಾ ಕುಮಾರಿ ಮಾತನಾಡಿ, ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ದೂರು ಬಂದಿದೆ. ಕಾರ್ವಿುಕ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳ 10ರೊಳಗೆ ಕಡ್ಡಾಯವಾಗಿ ಸಂಬಂಧಿಸಿದ ಏಜೆನ್ಸಿಗಳು ವೇತನ ಪಾವತಿಸಬೇಕು ಎಂದರು.

ಜಿಪಂ ಅಧ್ಯಕ್ಷ ಎಂ.ಎನ್.ನಾಗರಾಜ್ ಮಾತನಾಡಿ, ಜನರಿಗೆ ಕುಡಿಯುವ ನೀರು ಪೂರೈಸುವುದು ಜಿಪಂ ಪ್ರಮುಖ ಕಾರ್ಯ, ಈ ದಿಸೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಿವಿಧ ಇಲಾಖೆಗಳ ಪ್ರಗತಿ ಕುರಿತು ಚರ್ಚೆ ನಡೆಯಿತು. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್ ಮತ್ತಿತರರು ಇದ್ದರು.

ಡಂಗುರದ ಮೂಲಕ ಮಾಹಿತಿ: ಕೆರೆಗಳಲ್ಲಿ ಮೀನು ಸಾಗಾಣಿಕೆ ಟೆಂಡರ್ ಸೇರಿದಂತೆ ಗ್ರಾಪಂ ಪ್ರಕಟಣೆಯನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿ ಪ್ರತಿಯೊಬ್ಬರಿಗೂ ತಲುಪುವ ಉದ್ದೇಶದಿಂದ ಹಳ್ಳಿಗಳಲ್ಲಿ ಡಂಗೂರ ಹೊಡೆಯಬೇಕು ಎಂದು ಜಿಪಂ ಉಪಾಧ್ಯಕ್ಷೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಮೀನುಗಾರಿಕೆ ಇಲಾಖೆ ಅಧಿಕಾರಿ ಪ್ರತಿಕ್ರಿಯಿಸಿ, ಸ್ಥಳೀಯ ದಿನ ಪತ್ರಿಕೆ ಮೂಲಕ ಮಾಹಿತಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಡಂಗೂರ ಸಾರಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಹಾಜರಾತಿ ನೀಡದಿದ್ರೆ ಕ್ರಮ: ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ಬಿಸಿಯೂಟದ ಫಲಾನುಭವಿ ವಿದ್ಯಾರ್ಥಿಗಳ ಹಾಜರಾತಿ ಎಸ್​ಎಂಎಸ್ ಮಾಡದ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡುವಂತೆ ಜಿಪಂ ಸಿಇಒ ಎಂ.ಪಿ. ಮುಲ್ಲೈ ಮುಹಿಲನ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

Leave a Reply

Your email address will not be published. Required fields are marked *