ಗುಳೇದಗುಡ್ಡ: ಜೀವನದಲ್ಲಿ ಉತ್ಸಾಹ ಮತ್ತು ದೃಢಸಂಕಲ್ಪ ಇಟ್ಟುಕೊಂಡಾಗ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ, ಬಿವಿವಿ ಸಂಘದ ಚೇರ್ಮನ್ ಡಾ. ವೀರಣ್ಣ ಚರಂತಿಮಠ ಹೇಳಿದರು.
ತೋಗುಣಸಿ ಗ್ರಾಮದ ಸಮೀಪದಲ್ಲಿರುವ ಬಸವೇಶ್ವರ ಇಂಟರ್‌ನ್ಯಾಶನಲ್ ಪಬ್ಲಿಕ್ ಶಾಲೆಯ ವಾರ್ಷಿಕ ಸಮ್ಮೇಳನ ಹಾಗೂ ನವಸಂಕಲ್ಪ ಸಮಾರಂಭವನ್ನು ಶನಿವಾರ ಉದ್ಘಾಟಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳಿಗೆ ಒಳ್ಳೆಯ, ಶಿಕ್ಷಣ ಸೌಲಭ್ಯಗಳನ್ನು ನೀಡಬೇಕೆಂಬ ಉದ್ದೇಶದಿಂದ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ತೆರೆಯಲಾಗಿದೆ. ಶಿಕ್ಷಣ ಸಂಸ್ಥೆಯ ಮೂಲಕ ಹಣ ಮಾಡದೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಪಾಲಕರು ಮಕ್ಕಳ ಚಲನವಲನಗಳ ಮೇಲೆ ನಿಗಾ ಇಡಬೇಕು ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿಡ್ಡಿ ಮಾತನಾಡಿ, ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕಾದರೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣ ನಮ್ಮನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದಷ್ಟೆ ಅಲ್ಲ, ಸಮಾಜದಲ್ಲಿ ಒಳ್ಳೆಯ ಆದರ್ಶ ವ್ಯಕ್ತಿಯನ್ನಾಗಿ ರೂಪಿಸಲು ಅವಶ್ಯವಿದೆ ಎಂದರು.
ಸಂಘದ ಕಾರ್ಯದರ್ಶಿ ಮಹೇಶ ಅಥಣಿ, ಹೈಸ್ಕೂಲ್ ಕಮಿಟಿ ಚೇರ್ಮನ್ ಮಹಾಂತೇಶ ಶೆಟ್ಟರ್, ಬಾಗಲಕೋಟೆಯ ಬಸವೇಶ್ವರ ಅಂತಾರಾಷ್ಟ್ರೀಯ ಶಾಲೆ ಪ್ರಾಚಾರ್ಯ ಸುರೇಶ ಹೆಗಡೆ, ಗುಳೇದಗುಡ್ಡದ ಬಸವೇಶ್ವರ ಅಂತರಾಷ್ಟ್ರೀಯ ಪ್ರಾಚಾರ್ಯ ರಾಜಶೇಖರ ಬೆಂಗೊಲಿ ಮತ್ತಿತರರಿದ್ದರು.