ಶಿಕ್ಷಣದಲ್ಲಿ ನಂಬಿಕೆ ಕಳೆದುಕೊಳ್ಳದಿರಿ

ಕೋಲಾರ: ಶಿಕ್ಷಣ ಸರಿಯಾಗಿದ್ದರೆ ವ್ಯವಸ್ಥೆಯನ್ನು ತಾನಾಗಿಯೇ ಸರಿಪಡಿಸಲು ಸಾಧ್ಯ. ಶಿಕ್ಷಣದಲ್ಲಿ ನಂಬಿಕೆ ಕಳೆದುಕೊಳ್ಳದಂತೆ ಯುವಜನತೆ ಎಚ್ಚರವಹಿಸಬೇಕು ಎಂದು ಜಿಪಂ ಸಿಇಒ ಜಿ. ಜಗದೀಶ್ ಹೇಳಿದರು.

ನಗರದ ಶ್ರೀ ದಾನಮ್ಮ ಚನ್ನಬಸವಯ್ಯ ಕಾಲೇಜಿನಲ್ಲಿ ಯುವಸ್ಪಂದನ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ಯುವ ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷ ಕಳೆದಿದೆ. ಕಾರಣಾಂತರಗಳಿಂದ ಈಗಿನ ವ್ಯವಸ್ಥೆ ಕೆಟ್ಟಿದ್ದರೂ ಅಭಿವೃದ್ಧಿಯಲ್ಲಿ ಮುನ್ನಡೆಯುತ್ತಿದೆ. ವಿದೇಶಗಳಲ್ಲಿ ಅವರ ಕೆಲಸಗಳನ್ನು ಭಾರತೀಯರು ಕಿತ್ತುಕೊಳ್ಳುತ್ತಿದ್ದಾರೆ. ಅಂತಹ ದೇಶ ಮತ್ತು ವ್ಯವಸ್ಥೆಯ ಬಗ್ಗೆ ನಾವು ನಕಾರಾತ್ಮಕವಾಗಿ ಮಾತನಾಡುವುದು ಸರಿಯಲ್ಲ. ಶಿಕ್ಷಣದಲ್ಲಿ ನಂಬಿಕೆ ಇಟ್ಟು ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರು

ಐಎಎಸ್, ಕೆಎಎಸ್ ಅಧಿಕಾರಿಗಳಾದರೆ ಸಾರ್ವಜನಿಕ ಜೀವನದಲ್ಲಿ ರೈತ, ಬಡವರ ಅನೇಕ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಅವಕಾಶ ಸಿಗುವುದರಿಂದ ಅಂತಹ ಅಧಿಕಾರಿಯಾಗಲು ವಿದ್ಯಾರ್ಥಿಗಳು ಪಣತೊಡಬೇಕು ಎಂದರು.

ವಿದ್ಯಾರ್ಥಿಗಳು ಗುರಿ ನಿಗದಿ ಮಾಡಿಕೊಳ್ಳದಿದ್ದರೆ ಸಾಧನೆ ಸಾಧ್ಯವಾಗದು. ಗುರಿ ತಲುಪಲು ಅಗತ್ಯ ಸಹಕಾರ, ಮಾರ್ಗದರ್ಶನವನ್ನು ತಂದೆ-ತಾಯಿ, ಗುರು-ಹಿರಿಯರು ನೀಡುತ್ತಾರೆ. ಆದರೆ, ಗುರಿಯನ್ನು ನೀವೇ ತಲುಪಬೇಕು ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ ಮಾತನಾಡಿ, ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಯುವಜನರ ಸಮಾಲೋಚನಾ ಕೇಂದ್ರ ತೆರೆಯಲಾಗಿದ್ದು, ಯಾವುದೇ ಸಮಸ್ಯೆಗಳಿದ್ದರೂ ಆಗಮಿಸಿ ಉಚಿತವಾಗಿ ಸಲಹೆ ಪಡೆಯಬಹುದು ಎಂದರು.

ಕಾಲೇಜು ಮುಖ್ಯಸ್ಥರಾದ ಉಷಾಗಂಗಾಧರ್, ತಾಪಂ ಅಧಿಕಾರಿ ಚಂದ್ರಪ್ಪ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಮಾನಸಿಕ ಆರೋಗ್ಯತಜ್ಞ ಡಾ.ಶ್ರೀನಾಥ್, ನಿಮ್ಹಾನ್ಸ್​ನ ಕ್ಷೇತ್ರ ಸಂಪರ್ಕಾಧಿಕಾರಿ ಆರ್.ನಾಗರಾಜು, ಯುವ ಸ್ಪಂದನದ ಯುವ ಸಮಾಲೋಚಕಿ ಚಂದನ, ಪರಿವರ್ತಕರಾದ ಮುನಿರಾಜು, ಚೇತನ್

ಸಕ್ಬಾಲ್, ಶ್ರುತಿ ಉಪಸ್ಥಿತರಿದ್ದರು.

ಆಪ್​ಗೆ ಫೋಟೋ ಕಳುಹಿಸಿ: ಏ.18ರಂದು ನಡೆಯುವ ಲೋಕಸಣೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ನೈತಿಕ ಮತ್ತು ಕಡ್ಡಾಯ ಮತದಾನ ಮಾಡಬೇಕು. ಮತ ಬೆಲೆ ಕಟ್ಟಲಾಗದ ಹಕ್ಕು. ಅದನ್ನು 500 ರೂ.ಗಳಿಗೆ ಮಾರಿಕೊಳ್ಳಬೇಡಿ. ಮತಯಾಚನೆಗೆ ಬಂದಾಗ ಹಣ, ಸೀರೆ ಮತ್ತಿತರ ಉಡುಗೊರೆ ನೀಡಲು ಮುಂದಾದರೆ ಸಿ.ವಿಸಿಲ್ ಆಪ್​ಗೆ ಫೋಟೋ ಹಿಡಿದು ಕಳುಹಿಸಿ, ಮಾಹಿತಿದಾರರ ಹೆಸರು ಗೌಪ್ಯವಾಗಿಟ್ಟು ಆಮಿಷ ಒಡ್ಡಿದವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಸಿಇಒ ಜಿ. ಜಗದೀಶ್ ತಿಳಿಸಿದರು.