ಚಿತ್ರದುರ್ಗ: ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಕಾರಣ ಶಿಕ್ಷಕರ ಸಮಸ್ಯೆಗಳನ್ನು ತುಂಬಾ ಹತ್ತಿರದಿಂದ ಕಂಡಿದ್ದೇನೆ. ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಆದ್ದರಿಂದ ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ಬೆಂಬಲಿಸಿ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸೈಯದ್ ಅಫಾಕ್ ಅಹಮದ್ ಮನವಿ ಮಾಡಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಕರ ಪರವಾಗಿ ಕೆಲಸ ಮಾಡಲು ಇದೊಂದು ಅವಕಾಶವೆಂದು ಭಾವಿಸಿ ಸ್ಪರ್ಧಿಸುತ್ತಿದ್ದೇನೆ. ಈಗಾಗಲೇ ಕ್ಷೇತ್ರದ ಹಲವೆಡೆ ಸಂಚರಿಸಿದ್ದು, ಸ್ಪರ್ಧೆ ಕುರಿತು ಅನೇಕ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.