ಸಂಡೂರು: ಜೀವನದಲ್ಲಿ ಗುರಿ ಅತ್ಯಂತ ಮುಖ್ಯವಾಗಿದ್ದು. ಗುರಿಯಿಲ್ಲದ ಜೀವನ ನಾವಿಕನಿಲ್ಲದ ಹಡಗಿನಂತೆ. ಜೀವನದಲ್ಲಿ ಹಲವು ಸವಾಲುಗಳು ಎದುರಾಗಬಹುದು, ಕೆಲವೊಮ್ಮೆ ಕಠಿಣ ಸಂದರ್ಭಗಳು ನಾವು ಗುರಿಯತ್ತ ಮುನ್ನಡೆಯುವುದನ್ನು ಕಷ್ಟಕರವಾಗಿಸುತ್ತವೆ ಎಂದು ಬಿಕೆಜಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ರುದ್ರಗೌಡ ಹೇಳಿದರು.
ಬಿಕೆಜಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಂಕಲ್ಪ ದಿನದ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಸನ್ಮಾನ ಸ್ವೀಕರಿಸಿ ಶನಿವಾರ ಮಾತನಾಡಿದರು. ಕಷ್ಟದ ಸಮಯದಲ್ಲಿ ಧೈರ್ಯ ಕಳೆದುಕೊಳ್ಳದೆ ಗುರಿಯ ಮೇಲೆ ಅಚಲವಾದ ನಂಬಿಕೆ ಇಟ್ಟುಕೊಂಡು ಪರಿಶ್ರಮ ಪಡುವುದೇ ಯಶಸ್ಸಿನ ಗುಟ್ಟು ಆಗಿದೆ ಎಂದು ತಿಳಿಸಿದರು.
ಯುವ ಪೀಳಿಗೆಗೆ ಶಿಕ್ಷಕರು ಮತ್ತು ಪಾಲಕರು ಸರಿ ದಾರಿ ತೋರಿಸುತ್ತಾರೆ. ಶಿಕ್ಷಕರೊಂದಿಗೆ ಪಾಲಕರಿಂದಲೂ ಸುವಿಚಾರಗಳು ಹಾಗೂ ಪ್ರೇರಣೆಗಳು ವಿದ್ಯಾರ್ಥಿಗಳಿಗೆ ದೊರೆಯುವುದರಿಂದ ಅವರ ಮಾರ್ಗದರ್ಶನವಿಲ್ಲದೆ ಸಾಧನೆ ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಕರು ಮತ್ತು ಪಾಲಕರಿಗೆ ಸದಾ ಗೌರವ ನೀಡಬೇಕು ಹಾಗೂ ಅವರ ಮಾತುಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಭಾರತೀಯರು ಅತ್ಯಂತ ಪುಣ್ಯಶಾಲಿಗಳಾಗಿದ್ದು, ಭಾರತ ಸನಾತನ ಧರ್ಮದ ಪರಂಪರೆ ಹೊಂದಿದೆ. ನಮ್ಮ ದೇಶ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಶಕ್ತಿಯ ಮೂಲವಾಗಿದೆ. ಈ ಧರ್ಮವನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಾವು ನಮ್ಮ ಸಂಸ್ಕೃತಿಯನ್ನು ಗೌರವಿಸಬೇಕು ಹಾಗೂ ನಮ್ಮ ಹಿಂದಿನ ಪೀಳಿಗೆಗಳು ಕೊಟ್ಟಿರುವ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಳಿಗೆ ಸರಿಯಾಗಿ ತಲುಪಿಸಬೇಕೆಂದು ಬಿ.ರುದ್ರಗೌಡ ತಿಳಿಸಿದರು.