More

  ಶಿಕ್ಷಕರಿಲ್ಲದೆ ಸೊರಗಿದ ಶಾಲೆ

  ಸಿದ್ದಾಪುರ: ಕರೊನಾ ಹಾವಳಿಯಿಂದ ಹಲವು ತಿಂಗಳುಗಳ ಕಾಲ ಸಂಪೂರ್ಣ ಬಾಗಿಲು ಮುಚ್ಚಿದ ತಾಲೂಕಿನ ಶಾಲೆಗಳು ಇದೀಗ ತೆರೆದುಕೊಂಡಿದ್ದು, ವಿದ್ಯಾದೇಗುಲದಲ್ಲಿ ವಿದ್ಯಾರ್ಥಿಗಳ ಕಲರವ ಶುರುವಾಗಿದೆ. ಆದರೆ, ಕೆಲ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಗುಣಾತ್ಮಕ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

  ತಾಲೂಕಿನ 13 ಸರ್ಕಾರಿ ಕಿರಿಯ ಪ್ರಾಥಮಿಕ ಹಾಗೂ ಒಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 122 ಶಿಕ್ಷಕರ ಹುದ್ದೆ ಖಾಲಿ ಇವೆ. ತಾಲೂಕಿನಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಸೇರಿದಂತೆ ಒಟ್ಟು 110 ಕಿರಿಯ ಪ್ರಾಥಮಿಕ ಶಾಲೆ, 104 ಹಿರಿಯ ಪ್ರಾಥಮಿಕ ಶಾಲೆ, 32 ಪ್ರೌಢಶಾಲೆ, 2 ಸಮಾಜ ಕಲ್ಯಾಣ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಪ್ರೌಢಶಾಲೆ ಸೇರಿದಂತೆ 248 ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, 12,807 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 10ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ತಾಲೂಕಿನ 27 ಸಕಿಪ್ರಾ ಶಾಲೆಗಳಲ್ಲಿ ತಲಾ ಒಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 3 ಹಾಗೂ 3ಕ್ಕಿಂತ ಕಡಿಮೆ ಶಿಕ್ಷಕರಿರುವ 56 ಸಹಿಪ್ರಾ ಶಾಲೆಗಳಿವೆ.

  ವಿದ್ಯಾಗಮ 2ರ ಪ್ರಕಾರ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ಪಾಲಕರ ನಿರ್ಧಾರಕ್ಕೆ ಬಿಡಲಾಗಿದೆ.

  ಕಾಯಂ ಶಿಕ್ಷಕರಿಲ್ಲದ ಶಾಲೆಗಳು: ಉಂಚಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 31 ವಿದ್ಯಾರ್ಥಿಗಳಿದ್ದರೂ ಕಾಯಂ ಶಿಕ್ಷಕರಿಲ್ಲ. ಮರಾಠಿಕೊಪ್ಪ, ಕೊಳಗಿಜಡ್ಡಿ, ಬಾಳೆಕೊಪ್ಪ, ವಡಗೇರಿ, ಹೆಬಳೆಗದ್ದೆ, ನರಮುಂಡಿಗೆ, ಗೊಂಟನಾಳ, ಇರಾಸೆ, ನೀರಗಾರ, ಐಗಳಕೊಪ್ಪ, ತಾರಗೋಡ, ದಮಡಿಕಲ್ಲಾಳ ಹಾಗೂ ಅಳವಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲದ ಕಾರಣ, ಈ ಎಲ್ಲ ಶಾಲೆಗಳಿಗೆ ಸ್ಥಳೀಯ ಸಹಿಪ್ರಾ ಶಾಲೆಯ ಶಿಕ್ಷಕರನ್ನು ಡೆಪ್ಯೂಟೇಶನ್ ಮಾಡಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.

  ಕರೊನಾದಿಂದ ಮಕ್ಕಳ ಶಿಕ್ಷಣದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಈ ನಡುವೆ ಶಿಕ್ಷಕರ ಕೊರತೆಯಿಂದ ಮತ್ತಷ್ಟು ತೊಂದರೆಯನ್ನು ಅನುಭವಿಸಬೇಕಾಗಿದೆ. ಎಲ್ಲ ಶಾಲೆಗಳಿಗೆ ಅವಶ್ಯ ಇರುವಷ್ಟು ಶಿಕ್ಷಕರನ್ನು ಸರ್ಕಾರ ಭರ್ತಿ ಮಾಡಬೇಕು ಅಥವಾ ಶೀಘ್ರವೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕು ಎನ್ನುವುದು ಪಾಲಕರ ಆಗ್ರಹವಾಗಿದೆ.

  ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇರುವುದು ನಿಜ. ಶಾಲೆ ಆರಂಭವಾದಾಗಿನಿಂದ ಯಾವ ಶಾಲೆಗೂ ಶಿಕ್ಷಕರಿಲ್ಲದಂತೆ ಮಾಡಿಲ್ಲ. ಸರ್ಕಾರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದರೆ ಶಿಕ್ಷಕರ ಕೊರತೆ ನೀಗಿದಂತಾಗುತ್ತದೆ. ಈಗಾಗಲೇ ಈ ಕುರಿತು ಇಲಾಖೆಗೆ ಮಾಹಿತಿ ನೀಡಲಾಗಿದೆ.
  | ಸದಾನಂದ ಸ್ವಾಮಿ ಬಿಇಒ ಸಿದ್ದಾಪುರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts