ಶಿಕ್ಷಕರಿಂದ ವಿದ್ಯಾರ್ಥಿ ಜೀವನ ಉಜ್ವಲ

ನೆಲಮಂಗಲ: ಜಗತ್ತನ್ನು ಬೆಳಗುವ ಸೂರ್ಯನಂತೆ ವಿದ್ಯಾರ್ಥಿ ಜೀವನವನ್ನು ಶಿಕ್ಷಕರು ಬೆಳಗುತ್ತಿದ್ದಾರೆ ಎಂದು ವನಕಲ್ಲುಮಠದ ಶ್ರೀ ಬಸವರಮಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಬೈರಶೆಟ್ಟಿಹಳ್ಳಿಯ ಶ್ರೀ ಬೈಲಾಂಜನೇಯ ಸ್ವಾಮಿ ಪ್ರೌಢಶಾಲೆಯಲ್ಲಿ ಶನಿವಾರ ಹಳೇ ವಿದ್ಯಾರ್ಥಿ ಸಂಘ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳನ್ನು ರಾಜಕಾರಣಿ, ವಿಜ್ಞಾನಿ, ವೈದ್ಯ ಇಂಜಿನಿಯರ್, ಉದ್ಯಮಿಗಳನ್ನಾಗಿ ಪರಿವರ್ತಿಸುವ ಮೂಲಕ ರಾಷ್ಟ್ರದ ಪ್ರಗತಿಗೆ ಶಿಕ್ಷಕರು ಶ್ರಮಿಸುತ್ತಿದ್ದಾರೆ. ಶಿಕ್ಷಕ ವೃತ್ತಿ ಪ್ರಾಮಾಣಿಕ ಹಾಗೂ ಶ್ರೇಷ್ಠವಾದದ್ದು. ಬಿಚ್ಚಿಟ್ಟ ಜ್ಞಾನ ಹೊಳೆಯುವಂತೆ ಮುಕ್ತ ಮನಸ್ಸಿನಿಂದ ಶಿಕ್ಷಣವನ್ನು ಕಲಿಸಿ ಪ್ರತಿಯೊಬ್ಬ ದ್ಯಾರ್ಥಿ ಜೀವನವನ್ನು ರೂಪಿಸಿದ ಕೀರ್ತಿ ಶಿಕ್ಷಕರಿಗೆ ಸಲ್ಲುತ್ತದೆ ಎಂದರು.
ಸಮಾಜದ ಅಭಿವೃದ್ಧಿಯಲ್ಲಿ ಬಹುದೊಡ್ಡ ಪಾತ್ರವಹಿಸಿದ ಹಿಂದಿನ ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ಎಪಿಜೆ ಅಬ್ದುಲ್ ಕಲಾಂ, ಆಧುನಿಕ ಕಾಲಘಟ್ಟದಲ್ಲಿ ಸಿದ್ಧಗಂಗಾ ಶ್ರೀಗಳನ್ನು ನಿರ್ಮಿಸಿದ್ದು ಒಬ್ಬ ಆದರ್ಶ ಶಿಕ್ಷಕರೆಂದರೆ ತಪ್ಪಾಗಲಾರದು ಎಂದರು.
80ರ ದಶಕದಲ್ಲಿ ಶಿಕ್ಷಣ ಕಲಿಸಿದ ಶಿಕ್ಷಕ ವೃಂದವನ್ನು ಒಂದೆಡೆ ಸೇರಿಸಿ ಸನ್ಮಾನಿಸಿ ಗೌರವಿಸುತ್ತಿರುವ ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯ ಅರ್ಥಪೂರ್ಣ ಎಂದರು.
ಗುರುವಂದನೆ ಸ್ವೀಕರಿಸಿದ ನಿವೃತ್ತ ಹಿರಿಯ ಶಿಕ್ಷಕ ಎಚ್.ಟಿ.ಕೇಶವ ಅವಧಾನಿ ಮಾತನಾಡಿ, ಸಮಾಜದಲ್ಲಿ ಸ್ಥಾನಮಾನ ತಂದು ಕೊಡುವ ವಿನಯವನ್ನು ವಿದ್ಯೆ ಹೇಳಿಕೊಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ದುಡಿದ ಹಣದಲ್ಲಿ ಸಮಾಜದಲ್ಲಿ ಕಷ್ಠದಲ್ಲಿರುವ ಮಂದಿಗೂ ಸಹಾಯ ಮಾಡಿ ಸಂತೋಷ ಹಂಚಬೇಕು. ಸಮಾಜದಿಂದ ಎಲ್ಲವನ್ನು ಪಡೆದಿರುವ ನಾವು ಸಮಾಜಕ್ಕೆ ಹಿಂತಿರುಗಿಸಿ ಕೊಡಬೇಕಿದೆ ಎಂದರು.
ಕಾರ್ಯಕ್ರಮದ ನೆನಪಿಗಾಗಿ 1986-87 ಸಾಲಿನ ಹಳೆಯ ವಿದ್ಯಾರ್ಥಿಗಳ ಸಂಘ ಹೊರತಂದಿರುವ ‘ನಮ್ಮ ಮೇಷ್ಟ್ರು ನಮ್ಮ ಶಾಲೆ’ ಸ್ಮರಣ ಸಂಚಿಕೆಯನ್ನು ಕರ್ನಾಟಕ ಜನಸೈನ್ಯಸಂಘದ ಅಧ್ಯಕ್ಷ ಬಿ.ನರಸಿಂಹಯ್ಯ ಬಿಡುಗಡೆಮಾಡಿದರು.
1986-87ನೇ ಸಾಲಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ಶಿಕ್ಷಕ ಕೇಶವಅವಧಾನಿ, ರಾಮಮೂರ್ತಿ, ನರಸಿಂಹಯ್ಯ, ಉಮಾದೇವಿ, ರಾಘವೇಂದ್ರ, ಪರಿಮಳಾ, ಚಂದ್ರಶೇಖರ್, ಗುಮಾಸ್ತ ಚೆನ್ನಪ್ಪ ಮತ್ತು ಆನಂದ್, ಶಾಲೆಯ ಹಾಲಿ ಶಿಕ್ಷಕರನ್ನು ಗೌರವಿಸಲಾಯಿತು.
ಬೈಲಾಂಜನೇಯ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಶಿವಕುಮಾರ್, ಶಾಲೆ ಮುಖ್ಯಶಿಕ್ಷಕ ಎಂ.ಟಿ.ರಮೇಶ್, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ನರಸಿಂಹಯ್ಯ, ಹಳೆಯ ವಿದ್ಯಾರ್ಥಿ ನಟೇಶ್, ನಾಗರತ್ನಾ, ಹೇಮಲತಾ, ಉಮಾದೇವಿ, ರಮೇಶ್, ಬೈಲಪ್ಪ, ತಿಮ್ಮೇಗೌಡ, ವೆಂಕಟೇಶ್, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *