ಶಿಕ್ಷಕರಿಂದ ವಿದ್ಯಾರ್ಥಿನಿಯರಿಗೆ ಕಿರುಕುಳ

ಕಾರವಾರ: ಶಿರವಾಡ ಬಂಗಾರಪ್ಪ ನಗರದಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಶಿಕ್ಷಕರು ಕಿರುಕುಳ ನೀಡುತ್ತಿರುವ ಬಗ್ಗೆ ಪಾಲಕರು ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಅವರಿಗೆ ಗುರುವಾರ ದೂರು ನೀಡಿದ್ದಾರೆ. ವಸತಿ ಶಾಲೆಯಲ್ಲಿ 60 ವಿದ್ಯಾರ್ಥಿನಿಯರಿದ್ದಾರೆ. ಹಿಂದೆ ಶಾಲೆಗೆ ಮಹಿಳಾ ವಾರ್ಡನ್ ಒಬ್ಬರು ಇದ್ದ ಸಂದರ್ಭದಲ್ಲಿ ಎಲ್ಲವೂ ಸರಿಯಾಗಿತ್ತು. ಅವರ ವರ್ಗಾವಣೆಯ ನಂತರ ಅಧಿಕಾರ ಪಡೆದ ಸಂತೋಷ ಹುಲಸ್ವಾರ ಹಾಗೂ ವರದ ನಾಯ್ಕ ವಿದ್ಯಾರ್ಥಿನಿಯರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಅಪಾರ್ಥ ಬರುವ ಮಾತುಗಳನ್ನು ಆಡುತ್ತಿದ್ದಾರೆ. ಊಟವನ್ನೂ ಸರಿಯಾಗಿ ನೀಡುತ್ತಿಲ್ಲ. ಅವರಿಗೆ ಇನ್ನಿಬ್ಬರು ಶಿಕ್ಷಕರೂ ಬೆಂಬಲ ನೀಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿನಿಯರು ತಾವು ಇಲ್ಲಿ ಉಳಿಯುವುದಿಲ್ಲ ಎಂದು ಹೇಳುತ್ತಿದ್ದಾರೆ. ಇಬ್ಬರು ಶಿಕ್ಷಕರನ್ನು ಬೇರೆಡೆ ವರ್ಗಾಯಿಸಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ನೇತೃತ್ವದಲ್ಲಿ ಪಾಲಕರಾದ ನೀಲ ಬಾಳಿಗೇರಿ, ಶಿವಬಸು ಕೋರೆನ್ನವರ್, ಪ್ರಕಾಶ ಹ.ಕುರಿಬಾಗಿ, ಸುಭಾಸ ಮಂಗಳಕೋಡ ಇತರರು ಇದ್ದರು. ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ತಕ್ಷಣ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಈ ಕುರಿತು ಗಮನ ಹರಿಸುವಂತೆ ಸೂಚನೆ ನೀಡಿದರು. ಮತ್ತೆ ಆರೋಪ ಬಂದಲ್ಲಿ ಕಾನೂನು ಕ್ರಮ ವಹಿಸುವುದಾಗಿ ಅಧಿಕಾರಿಗಳಿಗೆ ಸೂಚಿಸಿದರು.

Leave a Reply

Your email address will not be published. Required fields are marked *