ಶಿಕಾರಿ ಚೋರ ಶಿಕ್ರಾ

| ಸುನೀಲ್ ಬಾರ್ಕರು

ತನ್ನ ಶಿಕಾರಿಯ ಕಲೆಗಾರಿಕೆಯಿಂದ ಶಿಕ್ರಾ ಎಂಬ ಹೆಸರನ್ನು ಸಂಪಾದಿಸಿರುವ ಈ ಹಕ್ಕಿಗೆ ಕನ್ನಡದಲ್ಲಿ ಬಿಜ್ಜು ಎಂದೂ ಹೆಸರಿದೆ. ಈ ಹಕ್ಕಿಯ ಚಹರೆ ಕೋಗಿಲೆ ಚಾಣ ಮತ್ತು ಕರಿಗುಬ್ಬಿ ಗಿಡುಗ ಹಕ್ಕಿಗಳಿಗೆ ಹೋಲಿಕೆ ಆಗುವುದರಿಂದ ಹಲವು ಬಾರಿ ನೋಡುಗರಿಗೆ ಗೊಂದಲವನ್ನುಂಟು ಮಾಡುತ್ತದೆ. ಆಫ್ರಿಕಾ ಮತ್ತು ಏಷ್ಯಾದೆಲ್ಲೆಡೆ ವ್ಯಾಪಕವಾಗಿ ಕಂಡುಬರುವ ಈ ಪಕ್ಷಿಗಳು 25-30 ಸೆಂ.ಮೀ.ನಷ್ಟು ಉದ್ದವಿದ್ದು ಬಿಳಿಯ ಎದೆಯ ಮೇಲೆ ಕಂದು ಬಣ್ಣದ ಪಟ್ಟಿಗಳಿರುತ್ತವೆ. ಬೆನ್ನು ಬೂದು ಬಣ್ಣದ್ದಾಗಿದ್ದು ಗಂಡು ಹಕ್ಕಿಯ ಕಣ್ಣುಗಳ ಬಣ್ಣ ರಕ್ತ ಕೆಂಪಾಗಿದ್ದರೆ, ಹೆಣ್ಣಿನ ಕಣ್ಣುಗಳು ಹಳದಿ ಮಿಶ್ರಿತ ಕಿತ್ತಳೆ ಬಣ್ಣದ್ದಾಗಿರುತ್ತದೆ. ಹೆಚ್ಚು ವಿಸ್ತಾರವಾದ ಭೂಭಾಗದಲ್ಲಿ ಇವು ಚದುರಿ ಹೋಗಿದ್ದು, ಸ್ಥಳೀಯವಾಗಿ ಇವುಗಳ ಅಂಗರಚನೆ ಮತ್ತು ಬಣ್ಣಗಳಲ್ಲಿ ಅಲ್ಲಲ್ಲಿ ವ್ಯತ್ಯಾಸ ಇದೆ. ಇವುಗಳಿಂದಲೇ ಶಿಕ್ರಾಗಳಲ್ಲಿನ ಪ್ರಜಾತಿಗಳನ್ನು ನಿರ್ಧರಿಸಲಾಗಿದೆ. ಬೇಟೆಯಲ್ಲಿ ನಿಷ್ಣಾತನಾಗಿರುವುದಕ್ಕೆ ಈ ಪಕ್ಷಿಯನ್ನು ಪಳಗಿಸಿ ಬೇಟೆಯಾಡಿ ಬೇರೆ ಹಕ್ಕಿಗಳನ್ನು ಮಾಂಸಕ್ಕಾಗಿ ಕೊಲ್ಲಲು ಅನಾದಿ ಕಾಲದಿಂದಲೂ ಭಾರತ ಭೂಖಂಡದಲ್ಲಿ ಬಳಸಲಾಗುತ್ತಿತ್ತು. ತನ್ನ ಗಾತ್ರ ಮತ್ತು ತೂಕಕ್ಕಿಂತ ಹಲವು ಪಟ್ಟು ಹೆಚ್ಚಾಗಿರುವ ನವಿಲಿನ ಮರಿಗಳನ್ನೂ ಇವು ಬೇಟೆಯಾಡಿ ಕೊಲ್ಲುತ್ತವೆ. ಪುಟ್ಟ ಸರೀಸೃಪಗಳು, ಬಾವಲಿಗಳು, ಗೆದ್ದಲುಹುಳಗಳು ಇವುಗಳ ನೆಚ್ಚಿನ ಆಹಾರ. ಮಾರ್ಚ್​ನಿಂದ ಜೂನ್​ವರೆಗಿನ ಬೇಸಿಗೆ ಸಮಯ ಬಿಜ್ಜುಗಳಿಗೆ ವಂಶಾಭಿವೃದ್ಧಿ ಕಾಲ. ಗಂಡು ಮತ್ತು ಹೆಣ್ಣೆರಡೂ ಸೇರಿ ಒಣಗಿದ ಹುಲ್ಲು ಮತ್ತು ತಂತಿಗಳಿಂದ ಗೂಡು ಕಟ್ಟುತ್ತವೆ. ಆ ಗೂಡಿನಲ್ಲಿ ತಾಯಿ ಶಿಕ್ರಾ 3-4 ಮೊಟ್ಟೆಗಳನ್ನಿಟ್ಟು ಕಾವು ಕೊಟ್ಟು ಮರಿ ಮಾಡುತ್ತದೆ. ಸಿಂಗಾಪುರದ ವಾಯುಪಡೆಯ ತಂಡವೊಂದಕ್ಕೆ ಶಿಕ್ರಾವೇ ಲಾಂಛನ. ಮುಂಬೈನ ಕೊಲಾಬಾದಲ್ಲಿರುವ ಭಾರತೀಯ ವಾಯುಪಡೆಯ ನೆಲೆಗೆ ಐಎನ್​ಎಸ್ ಶಿಕ್ರಾ ಎಂದು ಹೆಸರಿಡಲಾಗಿದೆ.

Leave a Reply

Your email address will not be published. Required fields are marked *