ಶಿಕಾರಿಪುರ ಹುಚ್ಚರಾಯಸ್ವಾಮಿ ರಥೋತ್ಸವ

ಶಿಕಾರಿಪುರ: ಪುರಾಣ ಪ್ರಸಿದ್ಧ ಶಿಕಾರಿಪುರದ ಶ್ರೀ ಹುಚ್ಚರಾಯಸ್ವಾಮಿ ರಥೋತ್ಸವ ಹನುಮ ಜಯಂತಿ ದಿನವಾದ ಶುಕ್ರವಾರ ವೈಭವದಿಂದ ಜರುಗಿತು. ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು.

ಪ್ರಾತಃಕಾಲ ಗಣಪತಿ ಪೂಜೆ, ಅಷ್ಟದಿಕ್ಪಾಲಕರ ಮಹಾಬಲಿ, ವೇದಮಂತ್ರ ಘೊಷದೊಂದಿಗೆ ಹೋಮ ಹವನಗಳು ಜರುಗಿದವು. ಮಹಾರಥ ಪೂಜೆಯೊಂದಿಗೆ ಮೂರ್ತಿಯನ್ನು ಬೆಳಗ್ಗೆ 7.30ಕ್ಕೆ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸಕಲ ವಾದ್ಯ ಹಾಗೂ ವೇದಘೊಷದೊಂದಿಗೆ ಹೊರಟು ರಥಬೀದಿಯಲ್ಲಿರುವ ಮಾರಮ್ಮನ ಗದ್ದುಗೆಯನ್ನು ರಥ ತಲುಪಿತು. ಶನಿವಾರ ಸಂಜೆ 4 ಗಂಟೆಗೆ ಮಹಾರಥ ಸಕಲ ವಾದ್ಯಗಳೊಡನೆ ಹೊರಟು ಮೂಲಸ್ಥಾನದಲ್ಲಿ ನಿಲ್ಲಲಿದೆ. ನಂತರ ಶ್ರೀ ಹುಚ್ಚರಾಯಸ್ವಾಮಿ ಕೆರೆಯಲ್ಲಿ ಸಿಡಿಮದ್ದಿನ ಕಾರ್ಯಕ್ರಮದೊಡನೆ ಸ್ವಾಮಿಯ ತೆಪ್ಪೋತ್ಸವ ನಡೆಯಲಿದೆ. ಏ.15ರಿಂದ ಪ್ರತಿದಿನ ಸ್ವಾಮಿಗೆ ಪಲ್ಲಕ್ಕಿ ಉತ್ಸವ, ವಿಶೇಷ ಪೂಜೆ, ಅಲಂಕಾರ, ಅಷ್ಟಾವಧಾನಸೇವೆ ಮಹಾಮಂಗಳಾರತಿ ನಡೆದವು.

12ನೇ ಶತಮಾನದ ಇತಿಹಾಸವಿರುವ ಶ್ರೀ ಹುಚ್ಚರಾಯಸ್ವಾಮಿ ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುತ್ತಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ನಿರಂತರ ಬರಗಾಲ ಕಾಡುತ್ತಿದ್ದರೂ ಭಕ್ತರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಸ್ಥಳೀಯ ಭಕ್ತರ ಸಹಾಯದಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು ತಹಸೀಲ್ದಾರ್ ಎಂ.ಪಿ.ಕವಿರಾಜ್, ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸರು, ದೇವಸ್ಥಾನ ಸಮಿತಿಯವರು ರಥೋತ್ಸವದ ನೇತೃತ್ವ ವಹಿಸಿದ್ದರು.

ಬಿಎಸ್​ವೈ ಜತೆ ಸೆಲ್ಪಿಗೆ ಮುಗಿಬಿದ್ದ ಜನ: ಮುಂಜಾನೆ ಕುಟುಂಬ ಸಮೇತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೇವಸ್ಥಾನಕ್ಕೆ ಆಗಮಿಸಿ ಶ್ರೀ ಸ್ವಾಮಿಯ ದರ್ಶನ ಪಡೆದರು. ಆಗ ಬೇರೆ ಊರುಗಳಿಂದ ರಥೋತ್ಸವಕ್ಕೆ ಆಗಮಿಸಿದ್ದ ಜನರು ಯಡಿಯೂರಪ್ಪ ಜತೆ ಸೆಲ್ಪಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರು. ಕೆಲವರು ಅವರಿಗೆ ಹಸ್ತಲಾಘವ ಮಾಡಿ ಅವರನ್ನು ಮಾತನಾಡಿಸಿ ಸಂಭ್ರಮಿಸಿದರು. ಬಿಎಸ್​ವೈ ಎಲ್ಲರ ಜತೆ ಸಂತಸದಲ್ಲಿ ಬೆರೆತು ತಾವೂ ಖುಷಿಪಟ್ಟರು.

Leave a Reply

Your email address will not be published. Required fields are marked *