ಶಿಂಷಾ-ಕಾವೇರಿ ಸಂಗಮಕ್ಕೆ ಕಾಲ

ಚನ್ನಪಟ್ಟಣ: ಮಳೆಗಾಲದಲ್ಲಿ ಮಾತ್ರ ಹರಿಯುವ ಶಿಂಷಾ ನದಿಯನ್ನು ಜೀವನದಿಯಾಗಿಸುವ ಪ್ರಯತ್ನಕ್ಕೆ ಇದೀಗ ಮುಹೂರ್ತ ಕೂಡಿ ಬಂದಿದ್ದು, ಕಾವೇರಿ-ಶಿಂಷಾ ನದಿ ಜೋಡಣೆ ಕಾಮಗಾರಿಗೆ ಶನಿವಾರ ಸಿಎಂ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ ನದಿ ಜೋಡಣೆ ಪ್ರಯತ್ನ ಇದೇ ಮೊದಲು ಎನ್ನಲಾಗಿದೆ.

ಕುಮಾರಸ್ವಾಮಿ ಸ್ವಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದರೂ, ಕಾವೇರಿ-ಶಿಂಷಾ ನದಿ ಜೋಡಣೆ ಯೋಜನೆ ಪ್ರಮುಖ ಆಕರ್ಷಣೆಯಾಗಿದೆ. ಕುಮಾರಸ್ವಾಮಿ ಈ ಹಿಂದೆಯೇ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರು. ಇದೀಗ ಅಧಿಕೃತ ಮುದ್ರೆ ಬಿದ್ದಿರುವುದು ಜಿಲ್ಲೆಯ ಜನರ ಸಂಭ್ರಮಕ್ಕೆ ಕಾರಣವಾಗಿದೆ.

ಏನಿದು ಯೋಜನೆ..?: ಮಳೆಗಾಲದಲ್ಲಿ ಅಬ್ಬರದಿಂದ, ಬೇಸಿಗೆಯಲ್ಲಿ ಸಹಜವಾಗಿ ಹರಿಯುವ ಕಾವೇರಿ ನದಿ ನೀರನ್ನು ಮಳವಳ್ಳಿ ತಾಲೂಕಿನ ಸತ್ತೇಗಾಲದಿಂದ ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಸಮೀಪ ಶಿಂಷಾ ನದಿಗೆ ಅಡ್ಡಲಾಗಿ ನಿರ್ವಿುಸಿರುವ ದೇವೇಗೌಡ ಬ್ಯಾರೇಜ್​ಗೆ ಸ್ವಾಭಾವಿಕವಾಗಿ ಹರಿಸುವ ಯೋಜನೆ ಇದಾಗಿದೆ.

ಕಾವೇರಿ ಮತ್ತು ಕಬಿನಿ ನದಿಗಳು ಟಿ.ನರಸೀಪುರ ಬಳಿ ಸಂಗಮವಾಗಿ ಸತ್ತೇಗಾಲ ಬಳಿ ಹರಿದು ಬರುತ್ತವೆ. ಹೀಗಾಗಿ ವರ್ಷ ಪೂರ್ತಿ ಇಲ್ಲಿ ನೀರು ಹರಿಯುತ್ತಿರುತ್ತದೆ. ನದಿ ಬತ್ತಿರುವ ಉದಾಹರಣೆ ತೀರಾ ಕಡಿಮೆ. ಸತ್ತೇಗಾಲದಿಂದ ಇಗ್ಗಲೂರು 15 ಮೀಟರ್ ಕೆಳಮಟ್ಟದಲ್ಲಿ ಇರುವುದರಿಂದ ಪಂಪು, ಮೋಟರ್ ಅಗತ್ಯವಿಲ್ಲದೆ ಸ್ವಾಭಾವಿಕವಾಗಿ ನೀರನ್ನು ಹರಿಸಬಹುದಾಗಿದೆ. ಸುಮಾರು 27 ಕಿ.ಮೀ. ಪೈಪ್ ಅಳವಡಿಸಿ ಬ್ಯಾರೇಜ್​ಗೆ ನೀರು ಹರಿಸಲಾಗುತ್ತದೆ.

4 ತಾಲೂಕಿಗೆ ಅನುಕೂಲ: ಶಿಂಷಾಗೆ ಬರುವ ಕಾವೇರಿ ನೀರನ್ನು ಕಣ್ವ ಏತನೀರಾವರಿ ಯೋಜನೆಯ ಪಂಪು, ಮೋಟರ್ ಬಳಸಿಕೊಂಡು ಜಲಾಶಯಕ್ಕೆ ತುಂಬಿಸಲಾಗುವುದು. ಕಣ್ವ ಜಲಾಶಯದ ಬಳಿ ಮತ್ತೊಂದು ಪಂಪ್ ಹೌಸ್ ನಿರ್ವಿುಸಿ ರಾಮನಗರ ತಾಲೂಕಿನ ಮಂಚನಬೆಲೆ ಮತ್ತು ಮಾಗಡಿ ತಾಲೂಕಿನ ವೈ.ಜಿ.ಗುಡ್ಡ ಜಲಾಶಯಕ್ಕೂ ನೀರನ್ನು ತುಂಬಿಸಲಾಗುವುದು. ಮತ್ತೊಂದೆಡೆ 1.1 ಟಿಎಂಸಿ ನೀರನ್ನು ನದಿಯಲ್ಲಿ ಹರಿಸಿ ಕನಕಪುರ ತಾಲೂಕಿನ ವಿವಿಧ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತದೆ. ಈ ಯೋಜನೆಯಿಂದ ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ಅನುಕೂಲವಾಗಲಿದೆ.

3.30 ಟಿಎಂಸಿ ನೀರು ನಿಗದಿ: ಅಂದಾಜು 540 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಯೋಜನೆಗೆ ಕಾವೇರಿ ನ್ಯಾಯಾಧಿಕರಣದಿಂದ ಯಾವುದೇ ತೊಡಕು ಎದುರಾಗದ ರೀತಿಯಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ. ಯೋಜನೆಗೆ ಒಟ್ಟು 3.30 ಟಿಎಂಸಿ ನೀರನ್ನು ನಿಗದಿಪಡಿಸಲಾಗಿದೆ.

ಜಿಲ್ಲೆಯ ಶಾಶ್ವತ ನೀರಾವರಿ ಕೂಗಿಗೆ ಇದು ಆಶಾದಾಯಕ ಯೋಜನೆಯಾಗಿದೆ. ಯಾವುದೇ ಮೂಲೆಯಿಂದ ನೀರು ತಂದರು ಸ್ವಾಗತಿಸುತ್ತೇವೆ. ಆದರೆ ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಒಳಪಡಿಸಲು ಇದರ ಜತೆಗೆ ಇನ್ನಷ್ಟು ಯೋಜನೆಗಳ ಅಗತ್ಯವಿದೆ.

| ಧರಣೀಶ್ ರಾಂಪುರ ಸಂಚಾಲಕ, ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ

ರಾಮನಗರ ಜಿಲ್ಲೆಯ ಜನಸಂಖ್ಯೆ 10.8 ಲಕ್ಷ ಇದೆ. ಒಬ್ಬರಿಗೆ ದಿನಕ್ಕೆ 85 ಲೀಟರ್ ನೀರಿನಂತೆ ವರ್ಷಕ್ಕೆ 3.30 ಟಿಎಂಸಿ ನೀರು ಬೇಕು. ಈ ಪ್ರಮಾಣದ ನೀರನ್ನು ಕಾವೇರಿ ನದಿಯಿಂದ ಇಗ್ಗಲೂರಿನ ದೇವೇಗೌಡ ಬ್ಯಾರೇಜ್​ಗೆ ಸ್ವಾಭಾವಿಕವಾಗಿ ತಂದು ಅಲ್ಲಿಂದ ಇತರೆಡೆಗೆ ಪಂಪ್ ಮಾಡುವ ಈ ಯೋಜನೆಯಿಂದ ಇಡೀ ಜಿಲ್ಲೆಗೆ ಅನುಕೂಲವಾಗಲಿದೆ.

| ವೆಂಕಟೇಗೌಡ ಎಇಇ, ಕಾವೇರಿ ನೀರಾವರಿ ನಿಗಮ