ಶಾಸ್ತ್ರೀಯ ನೃತ್ಯ ಕಲಿಕೆಗೆ ಪ್ರತಿಭೆ ಇರಬೇಕು

ಹುಬ್ಬಳ್ಳಿ :ನಗರದ ಸುಜಾತಾ ಭರತನಾಟ್ಯ ಸ್ಕೂಲ್ ವಿದ್ಯಾರ್ಥಿನಿಯರಾದ ವಿಶಾರದಾ ಮುಳಗುಂದ, ಅನಘಾ ಶಿರಹಟ್ಟಿ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಭಾನುವಾರ ಸವಾಯಿ ಗಂಧರ್ವ ಹಾಲ್​ನಲ್ಲಿ ನಡೆಯಿತು.

ವಿಶಾರದಾ, ಅನಘಾ ಅವರು ಒಂದು ಗಂಟೆ ಕಾಲ ನೃತ್ಯ ಮಾಡಿ ಸಭಿಕರಿಂದ ಸೈ ಎನಿಸಿಕೊಂಡರು. ಮೊದಲಿಗೆ ಲಾಲ್ಗುಡಿ ಪುಷ್ಪಾಂಜಲಿ, ಅಲಿರಿಪು, ಜತೀಶ್ವರಂ, ವರ್ನಂ ನೃತ್ಯ ಪ್ರದರ್ಶಿಸಿದರು. ಸ್ಕೂಲ್​ನ ಸಂಸ್ಥಾಪಕಿ, ಅಧ್ಯಕ್ಷೆ ಸುಜಾತಾ ರಾಜಗೋಪಾಲ ಅವರು ನಟುವಾಂಗಮ್ ಡಾ. ಸುಶೇರಾಜ ಗಾಯನ, ತಿರುಮುಡಿ ಅರುಣ ಮೃದಂಗಮ್ ಹಾಗೂ ಡಾ. ವಿನೋತ್​ಕುಮಾರ ಕೊಳಲು ವಾದನದ ಸಾಥ್ ನೀಡಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಬೆಳಗಾವಿಯ ರವಿ ನೃತ್ಯ ಕಲಾ ಮಂದಿರದ ನಿರ್ದೇಶಕ ಟಿ. ರವೀಂದ್ರ ಶರ್ಮಾ ಮಾತನಾಡಿ, ಶಾಸ್ತ್ರೀಯ ನೃತ್ಯ ಬಹಳ ಶ್ರೀಮಂತವಾಗಿದೆ. ಇದನ್ನು ಕಲಿಯುವುದಕ್ಕೆ ಪ್ರತಿಭೆ ಮತ್ತು ಪಾಂಡಿತ್ಯ ಬೇಕು ಎಂದರು.

ರಂಗಪ್ರವೇಶ ಎನ್ನುವುದು ಸಾಮಾನ್ಯ ರೀತಿಯಲ್ಲಿ ನಡೆಯಬಾರದು. ವಿಶಾರದಾ, ಅನಘಾ ಅವರು ರಂಗಪ್ರವೇಶ ನೃತ್ಯ ಕಾರ್ಯಕ್ರಮವನ್ನು ಚೆನ್ನಾಗಿ ಮಾಡಿದ್ದಾರೆ. ಆದರೆ, ಇದು ಪೂರ್ಣ ಪ್ರಮಾಣ ರಂಗಪ್ರವೇಶ ಎಂದು ಅನಿಸಲಿಲ್ಲ. ಅವರ ನೃತ್ಯದಲ್ಲಿ ಕೆಲವು ದೋಷಗಳು ಕಂಡು ಬಂದಿವೆ. ಸರಿಪಡಿಸಿಕೊಂಡು ಮುನ್ನಡೆಯಬೇಕೆಂದು ಸಲಹೆ ನೀಡಿದ ಅವರು, ಗುರುಗಳು ವಿದ್ಯಾರ್ಥಿಗಳನ್ನು ಹೊಗಳಿದರೆ ಅವರ ಕಲೆಯ ಗುಣಮಟ್ಟ ಕಡಿಮೆಯಾಗುತ್ತದೆ ಎಂದರು.

ತುಮಕೂರಿನ ಸಾಯಿರಾಮನ್ ನೃತ್ಯ ಕಲಾ ಕೇಂದ್ರದ ನಿರ್ದೇಶಕ ನಾಟ್ಯಶ್ರೀ ಸಾಗರ ಟಿ.ಎಸ್ ಮಾತನಾಡಿ, ನೃತ್ಯ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಿ ಕಲಿಸಬೇಕು ಅಂದಾಗ, ಗುಣಮಟ್ಟ ಬರುತ್ತದೆ ಎಂದರು.

ರಾಘವೇಂದ್ರ ರಾಮದುರ್ಗ ಮಾತನಾಡಿದರು. ಇದೇ ವೇಳೆ ಸುಜಾತಾ ರಾಜಗೋಪಾಲ ಅವರಿಗೆ ಗುರುವಂದನೆ ನಡೆಯಿತು. ವಿದುಷಿ ಡಾ. ಸಹನಾ ಭಟ್, ಶೈಲಾ ಹುಟಗಿ ಅವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *