ಶಾಸಕ ಸಿ.ಟಿ. ರವಿ ವಿರುದ್ಧದ ಪ್ರಕರಣ ರದ್ದು

ಬೆಂಗಳೂರು: ಕರ್ನಾಟಕ ಗೃಹ ಮಂಡಳಿಯಿಂದ (ಕೆಎಚ್​ಬಿ) 3 ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿಸಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ, ಪತ್ನಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತ ಕೋರ್ಟ್​ನಲ್ಲಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಪ್ರಕರಣ ರದ್ದು ಕೋರಿ ರವಿ, ಪತ್ನಿ ಪಲ್ಲವಿ, ತಂಗಿ ತೇಜಸ್ವಿನಿ ಹಾಗೂ ಬಾಮೈದ ಸುದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ ಗುರುವಾರ ಮಾನ್ಯ ಮಾಡಿದೆ. ನಿಯಮಗಳ ಪ್ರಕಾರ ಅರ್ಜಿದಾರರ ವಿಚಾರಣೆಗೆ ಪೂರ್ವಾನುಮತಿ ಪಡೆದಿಲ್ಲ ಹಾಗೂ ಒಮ್ಮೆ ಬಿ ರಿಪೋರ್ಟ್ ತಿರಸ್ಕೃತಗೊಂಡ ನಂತರ ಪ್ರಮಾಣೀಕೃತ ಹೇಳಿಕೆ ಪಡೆದು ಮುಂದುವರಿಯಬೇಕೇ ಹೊರತು ಮತ್ತೆ ಸಮನ್ಸ್ ಜಾರಿಗೊಳಿಸುವಂತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಅರ್ಜಿದಾರರು ಮತ್ತು ಅವರ ಕುಟುಂಬದವರ ವಿರುದ್ಧ ಆಧಾರರಹಿತ ಆರೋಪ ಮಾಡಲಾಗಿದ್ದು, ಪ್ರಕರಣದಲ್ಲಿ ಕೆಎಚ್​ಬಿ ಅಧಿಕಾರಿಗಳನ್ನು ಆರೋಪಿಗಳನ್ನಾಗಿಸಿಲ್ಲ. ರವಿ ಅವರನ್ನು ವಿಚಾರಣೆಗೊಳಪಡಿಸಲು ಪೂರ್ವಾನುಮತಿ ಪಡೆದಿಲ್ಲ. ಆದ್ದರಿಂದ ಪ್ರಕರಣ ರದ್ದುಪಡಿಸಬೇಕೆಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.