ಸಿನಿಮಾ

ಶಾಸಕ ಪ್ರೀತಂ ಜೆ.ಗೌಡ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಗುಡುಗು

ಗಲ್ಲಿ ರಸ್ತೆಗಳನ್ನು ದುರಸ್ತಿ ಮಾಡುವುದೇ ಅಭಿವೃದ್ಧಿಯಲ್ಲ. ದೇವೇಗೌಡರು ಈ ಕ್ಷೇತ್ರ ಒಳಗೊಂಡಂತೆ ಜಿಲ್ಲೆಗೆ ನೀಡಿರುವ ಕೊಡುಗೆಗಳೇನು ಎಂಬುದರ ಬಗ್ಗೆ ದಾಖಲೆಗಳನ್ನು ತೆಗೆದು ನೋಡಲಿ ಎಂದು ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ.ಗೌಡ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಗುಡುಗಿದರು.
ಕಮಿಷನ್ ಹೆಸರಿನಲ್ಲಿ ಅಭಿವೃದ್ಧಿ ಜಪ ಮಾಡಿರುವ ಸ್ಥಳೀಯ ಶಾಸಕರು ನಮ್ಮ ಅಭ್ಯರ್ಥಿ ಸ್ವರೂಪ್ ಅವರಿಗೆ ಮತ ನೀಡಲು ಸಿದ್ಧ ಇರುವವರನ್ನು ಹಾದಿ ತಪ್ಪಿಸಲು ಯಾವೆಲ್ಲ ತಂತ್ರ ರೂಪಿಸುತ್ತಿದ್ದಾರೆ ಎಂಬುದು ಗೊತ್ತಿದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಜಿಲ್ಲೆಗೆ ನೀಡಿರುವ ಕೊಡುಗೆಗಳನ್ನು ಜನರು ಮರೆತಿಲ್ಲ. ಬಿಜೆಪಿಯವರ ಯಾವುದೇ ಪ್ರಯತ್ನಗಳು ಫಲಿಸುವುದಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೊಸಕೊಪ್ಪಲು ಭಾಗದಿಂದ ಹಾಸನ ನಗರಕ್ಕೆ 170 ಕೋಟಿ ರೂ. ವೆಚ್ಚದ ಕಾಂಕ್ರಿಟ್ ರಸ್ತೆ, ಸಾಲಗಾಮೆ ರಸ್ತೆ ಅಭಿವೃದ್ಧಿ, ಡೇರಿ ವೃತ್ತದಿಂದ ಹೊರ ವರ್ತುಲ ರಸ್ತೆ, ಜಿಲ್ಲಾ ನ್ಯಾಯಾಲಯ, ಜಿಪಂ ಕಟ್ಟಡ, ಬಸ್ ನಿಲ್ದಾಣ, ನಗರ ಸಾರಿಗೆ ಬಸ್ ನಿಲ್ದಾಣ, ಪ್ರವಾಸಿ ಮಂದಿರಗಳ ನಿರ್ಮಾಣ ದೇವೇಗೌಡರ ಕೊಡುಗೆ. ಚನ್ನಪಟ್ಟಣ ಕೆರೆ ಅಭಿವೃದ್ಧಿಗೊಳಿಸಿ ಹೈಟೆಕ್ ಪಾರ್ಕ್ ನಿರ್ಮಿಸಲು 144 ಕೋಟಿ ರೂ.ಬಿಡುವಡೆ ಮಾಡಿದ್ದೆವು. ಟೆಂಡರ್ ಆಗಿ ವರ್ಕ್ ಆರ್ಡರ್ ಸಹ ಆಗಿದ್ದರೂ ಆ ಯೋಜನೆಯನ್ನು ರದ್ದುಗೊಳಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೂವನಹಳ್ಳಿಯಿಂದ ದೇವರಾಜಪಟ್ಟಣದ ವರೆಗೆ ರಸ್ತೆ ಮಾಡಿಸಲು ಸಾಧ್ಯವಾಗದ ಸ್ಥಳೀಯ ಶಾಸಕರು ಲೆಕ್ಚರ್ ಹೊಡೆಯುತ್ತಾರೆ. ಅವರದ್ದೇ ಸರ್ಕಾರ ಕೇಂದ್ರ ಹಾಗೂ ರಾಜ್ಯದಲ್ಲಿದ್ದರೂ ಸರಿಯಾಗಿ ಕೆಲಸ ಮಾಡಲು ಇವರಿಂದ ಆಗಲಿಲ್ಲ. ನಮ್ಮ ಸಾಧನೆಗಳನ್ನು ಪ್ರತಿಷ್ಠೆಗೆ ಹೇಳುತ್ತಿಲ್ಲ. ಎಲ್ಲದಕ್ಕೂ ದಾಖಲೆಗಳಿವೆ. ಬಡ ಮತ್ತು ಸಾಮಾನ್ಯ ಕುಟುಂಬದ ಮಕ್ಕಳಿಗೆ ಶಿಕ್ಷಣ ನೀಡಿದ ತೃಪ್ತಿ ಜೆಡಿಎಸ್‌ಗಿದೆ. ವರ್ಷಕ್ಕೆ ಕನಿಷ್ಠ 10 ಸಾವಿರ ಹೆಣ್ಣು ಮಕ್ಕಳು ಜಿಲ್ಲೆಯ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಪದವಿ ಶಿಕ್ಷಣ ಪೂರೈಸಿ ಹೊರ ಬರುತ್ತಿದ್ದಾರೆ. ಜಿಲ್ಲೆಯಲ್ಲಿ 20 ಪ್ರಥಮ ದರ್ಜೆ, 3 ಇಂಜಿನಿಯರಿಂಗ್, 5 ಪಾಲಿಟೆಕ್ನಿಕ್, 25 ಐಟಿಐ ಕಾಲೇಜು, 25 ಮುರಾರ್ಜಿ ಶಾಲೆ, 15 ಕೆಪಿಎಸ್‌ಸಿ ಶಾಲೆಗಳು ನಮ್ಮ ಕೊಡುಗೆಯಾಗಿದೆ ಎಂದು ವಿವರಿಸಿದರು.
ಮೊಸಳೆ ಹೊಸಹಳ್ಳಿ, ದುದ್ದ, ಶಾಂತಿಗ್ರಾಮ, ಜೆ.ಸಿ.ಪುರ, ಜಾವಗಲ್, ಹಳ್ಳಿ ಮೈಸೂರು ಸೇರಿ ಹಲವು ಸಮುದಾಯ ಆಸ್ಪತ್ರೆಗಳನ್ನು ಸ್ಥಾಪಿಸಿದ್ದೇವೆ. ಅಲ್ಪ ಸಂಖ್ಯಾತರು, ಪರಿಶಿಷ್ಠ ಸಮುದಾಯದ ಮಕ್ಕಳಿಗೆ ಅನುಕೂಲವಾಗುವಂತೆ ಮುರಾರ್ಜಿ ಶಾಲೆಗಳನ್ನು ತೆರೆದಿದ್ದು, ಸಾವಿರಾರು ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಇದ್ಯಾವುದನ್ನೂ ಜಿಲ್ಲೆಯ ಜನರು ಮರೆತಿಲ್ಲ ಎಂದರು.
ಶಿಕ್ಷಣ, ಆರೋಗ್ಯಕ್ಕೆ ಜೆಡಿಎಸ್ ಹೆಚ್ಚಿನ ಒತ್ತು ನೀಡಿದರೆ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರ ಅವುಗಳನ್ನು ವ್ಯಾಪರ ಕೇಂದ್ರಗಳನ್ನಾಗಿ ಮಾಡಿಕೊಂಡಿವೆ. 50 ವರ್ಷದ ಆಡಳಿತ ಅವಧಿಯಲ್ಲಿ ಕಾಂಗ್ರೆಸ್‌ನವರು ಮಾಡಲಾಗದ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು 1983ರಲ್ಲಿ ದೇವೇಗೌಡರು ಸಚಿವರಾಗಿದ್ದಾಗ ಕ್ರಾಂತಿಕಾರಿ ಬದಲಾವಣೆ ತಂದಿದ್ದರು. 4800 ಕಾಲೇಜುಗಳಿಗೆ ಉಪನ್ಯಾಸಕರ ನೇಮಕಾತಿ ಮಾಡಲು ಕುಮಾರಸ್ವಾಮಿ ಬರಬೇಕಾಯಿತು. ರಾಷ್ಟ್ರೀಯ ಪಕ್ಷಗಳು ಶಿಕ್ಷಣವನ್ನೂ ಕೊಡಲಿಲ್ಲ, ಬಡವರ ಆರೋಗ್ಯದ ಕಾಳಜಿಯನ್ನೂ ಮಾಡಲಿಲ್ಲ ಎಂದು ಆರೋಪಿಸಿದರು.

ಡಿವೈಎಸ್‌ಪಿ ವಿರುದ್ಧ ಮತ್ತೆ ವಾಗ್ದಾಳಿ:
ಚುನಾವಣೆ ಸಂದರ್ಭ ಅನಗತ್ಯವಾಗಿ ಕೆಲವರನ್ನು ಗಡಿಪಾರು ಮಾಡುತ್ತಿದ್ದಾರೆ. ರೌಡಿಗಳನ್ನು ರಸ್ತೆಗೆ ಬಿಟ್ಟು ಅಮಾಯರನ್ನು ಕಟ್ಟಿ ಹಾಕುವ ಪ್ರಯತ್ನದ ಹಿಂದೆ ಹಾಸನದ ಡಿವೈಎಸ್‌ಪಿ ಕೈವಾಡವಿದೆ. ಆತನ ತಪ್ಮ್ಪಗಳನ್ನು ನಾನು ಎತ್ತಿ ಹಿಡಿದಾಗ ಪೊಲೀಸ್ ಅಧಿಕಾರಿಗಳೇ ಆತನನ್ನು ರಜೆಯಲ್ಲಿ ಕಳಿಸಿ ರಕ್ಷಿಸುವ ಪ್ರಯತ್ನ ಮಾಡಿದರು. ಎಸ್‌ಪಿ ಬಗ್ಗೆ ನನಗೆ ನಂಬಿಕೆ ಇದೆ. ನಿರ್ಭಯವಾಗಿ ಚುನಾವನೆ ನಡೆಸುತ್ತಾರೆ ಎಂದುಕೊಂಡಿದ್ದೇನೆ. ರೌಡಿ ಶೀಟರ್‌ಗಳ ಮೇಲೆ ಕ್ರಮ ಕೈಗೊಳ್ಳಲಿ. ಆದರೆ ರಾಜಕೀಯಕ್ಕೆ ಯಾರನ್ನೂ ಬಳಸಿಕೊಳ್ಳುವುದು ಬೇಡ ಎಂದರು.

ನಾನೇ ಸಾಕಿದ ಗಿಣಿ ಕಾಂಗ್ರೆಸ್ ಕಡೆ ಹಾರಿತ್ತು:
ಹದಿನೈದು ವರ್ಷ ನಾನೇ ಸಾಕಿದ ಗಿಣಿಯನ್ನು ಕಾಂಗ್ರೆಸ್‌ನವರು ಹಾರಿಸಿಕೊಂಡು ಹೋದರು. ಆತನ ಬಳಿ ಅಷ್ಟೋ ಇಷ್ಟೋ ಹಣವಿದೆ, ಆತ ಗೆಲ್ಲುತ್ತಾನೆ ಎಂದು ಭಾವಿಸಿ ಹೀಗೆ ಮಾಡಿದ್ದಾರೆ. ಇದೇ ಕಾರಣಕ್ಕೆ ಎನ್.ಆರ್.ಸಂತೋಷ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸಿ ನಮ್ಮ ಗಿಣಿಗೆ ಬಲೆ ಬೀಸಿದರು. ಈಗ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿದ್ದು ಸಂತೋಷ್ ಅವರನ್ನು ದೇವರೇ ನಮ್ಮ ಬಳಿಗೆ ಕಳಿಸಿದಂತಿದೆ. ನಾನು ಸಾಕಿದ ಗಿಣಿ(ಕೆಎಂಶಿ) ಎಲ್ಲೂ ಹಾರಾಡುವುದು ಬೇಡ, ಸ್ವಲ್ಪ ದಿನ ಒಳಗಿರಲಿ ಎಂದು ತೀರ್ಮಾನಿಸಿರುವ ಅರಸೀಕೆರೆ ಜನರು ಜೆಡಿಎಸ್ ಅಭ್ಯರ್ಥಿಯನ್ನು ಈ ಬಾರಿ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂಚಾಯಿತಿ ಸದಸ್ಯನಾಗಲೂ ಯೋಗ್ಯತೆ ಇಲ್ಲದ ವ್ಯಕ್ತಿಯನ್ನು 3 ಬಾರಿ ಶಾಸಕರನ್ನಾಗಿ ಮಾಡಿದೆವು. ಎಸ್ಟಿಮೇಟ್ ಕಮಿಟಿ ಸದಸ್ಯರನ್ನಾಗಿ ಮಾಡಿದರೆ ಆತ ಮುಖ್ಯಮಂತ್ರಿಯನ್ನೇ ಬ್ಲಾಕ್ ಮೇಲ್ ಮಾಡಿದ್ದ. ಯಾವುದೇ ಕಾರಣಕ್ಕೂ ಜೆಡಿಎಸ್ ಬಿಡುವುದಿಲ್ಲ ಎಂದು ದೇವೇಗೌಡರು ಹಾಗೂ ಕುಮಾರಣ್ಣನ ಮುಂದೆ ಪ್ರಮಾಣ ಮಾಡಿ ಈಗ ಜಾಗ ಖಾಲಿ ಮಾಡಿದ್ದಾರೆ ಎಂದು ಕೆ.ಎಂ.ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

Latest Posts

ಲೈಫ್‌ಸ್ಟೈಲ್