ಶಾಸಕ ಜಾಧವ್ ಶೀಘ್ರ ಬಿಜೆಪಿ ಸೇರ್ಪಡೆ

ವಿಜಯವಾಣಿ ಸುದ್ದಿಜಾಲ ಗುರುಮಠಕಲ್
ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್ ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಗೊಳ್ಳುವ ಬಗ್ಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಸುಳಿವು ನೀಡಿದ್ದಾರೆ.

ಮಂಗಳವಾರ `ವಿಜಯವಾಣಿ’ ಜತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಲೋಕಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಾಧವ್ ಕಣಕ್ಕಿಳಿಯುವುದು ಖಚಿತವಾಗಿದೆ. ಶೀಘ್ರದಲ್ಲೇ ಜಾಧವ್ ಕಲಬುರಗಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಲೋಕಸಭೆ ಕಾಂಗ್ರೆಸ್ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಚಿಂಚನಸೂರ, ಪುತ್ರ ವ್ಯಾಮೋಹದಿಂದ ಕಾಂಗ್ರೆಸ್ನಲ್ಲಿದ್ದ ಹಿಂದುಳಿದ ವರ್ಗಗಳ ನಾಯಕರನ್ನು ಖರ್ಗೆ ನೇಪಥ್ಯಕ್ಕೆ ಸರಿಸಿದ್ದಾರೆ. 5 ಬಾರಿ ಗೆದ್ದಿದ್ದ ನನ್ನನ್ನು ಏಕಾಏಕಿ ಮಂತ್ರಿ ಸ್ಥಾನದಿಂದ ತೆಗೆದು ಪ್ರಿಯಾಂಕ್ ಅವರಿಗೆ ಸಚಿವ ಸ್ಥಾನ ಕೊಡಿಸಲಾಯಿತು. ಅಲ್ಪಸಂಖ್ಯಾತ ವರ್ಗದ ಪ್ರಶ್ನಾತೀತ ನಾಯಕರಾಗಿದ್ದ ದಿ. ಖಮರುಲ್ ಇಸ್ಲಾಂ ಅವರನ್ನು ಸಿದ್ದರಾಮಯ್ಯ ಸಂಪುಟದಿಂದ ಹೊರಹಾಕಲಾಯಿತು. ಬಂಜಾರ ಸಮಾಜದ ಬಾಬುರಾವ್ ಚವ್ಹಾಣ್, ಹಿಂದುಳಿದ ವರ್ಗದ ಮಾಲೀಕಯ್ಯ ಗುತ್ತೇದಾರ್ ಅವರನ್ನೂ ಪಕ್ಷದಲ್ಲಿ ಕಡೆಗಣಿಸಲಾಯಿತು. ಈ ಎಲ್ಲ ವಿದ್ಯಮಾನಗಳಿಂದ ಶಾಸಕ ಡಾ.ಜಾಧವ್ ತೀವ್ರ ಬೇಸತ್ತಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಗೃಹ ಸಚಿವ ರಾಜನಾಥ್ ಸಿಂಗ್ ಜತೆ ಈಗಾಗಲೇ ಶಾಸಕ ಉಮೇಶ ಜಾಧವ್ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ ಎಂದು ಹೇಳಿದ ಬಾಬುರಾವ್, ತಮ್ಮೊಡನೆ ಮಾಲೀಕಯ್ಯ ಗುತ್ತೇದಾರ್, ಜಾಧವ್ ಇದ್ದಾರೆ ಎಂದು ಖಚಿತಪಡಿಸಿದ್ದಾರೆ. ಗುರುಮಠಕಲ್ ಕ್ಷೇತ್ರದಿಂದಲೇ ಡಾ.ಖರ್ಗೆ ಅವರನ್ನು ಸೋಲಿಸಲು ಪಣ ತೊಟ್ಟಿರುವುದಾಗಿಯೂ ಹೇಳಿದ್ದಾರೆ.

ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ವ್ಯಾಮೋಹದಿಂದ ಕರ್ನಾಟಕದಲ್ಲಿ ಕೋಲಿ ಸಮಾಜ ಸರ್ವನಾಶವಾಗಿದೆ. ರಾಜ್ಯದಲ್ಲಿ 40 ಲಕ್ಷದಷ್ಟಿರುವ ಕೋಲಿ ಸಮಾಜವನ್ನು ಪ್ರತಿನಿಧಿಸುತ್ತಿದ್ದ ನನ್ನನ್ನು ರಾಜಕೀಯವಾಗಿ ತುಳಿಯಲಾಗಿದೆ. ಮುಂದಿನ ವಾರ ಯರಗೋಳದಿಂದ ಲೋಕಸಭಾ ಚುನಾವಣೆಯ ಕ್ಷೇತ್ರ ಪರ್ಯಟನೆ ಆರಂಭಿಸುವೆ.
| ಬಾಬುರಾವ್ ಚಿಂಚನಸೂರ ಮಾಜಿ ಸಚಿವ