ಶಾಸಕಿ ವಿದ್ಯಾಭ್ಯಾಸ ಕೇವಲ 9ನೇ ತರಗತಿ!: ಅಸ್ನೋಟಿಕರ್ ಲೇವಡಿ

ಕಾರವಾರ:  ಅಂಕೋಲಾ-ಕಾರವಾರ ಕ್ಷೇತ್ರದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ದುರ್ಬಲರಾಗಿದ್ದಾರೆ. ಅವರಿಗೆ ಶಿಕ್ಷಣವಿಲ್ಲ. ಕೇವಲ 9ನೇ ತರಗತಿ ಕಲಿತಿದ್ದಾರೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಲೇವಡಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಶಾಸಕಿಯ ಬಳಿ ಯಾವುದೇ ಕೆಲಸವಾಗುತ್ತಿಲ್ಲ. ಜನರು ನನ್ನ ಬಳಿ ಬರುತ್ತಾರೆ. ಕ್ಷೇತ್ರದ ಹಿತ ದೃಷ್ಟಿಯಿಂದ ಕೆಲವು ಉತ್ತಮ ಅಧಿಕಾರಿಗಳನ್ನು ಜಿಲ್ಲೆಗೆ ಕರೆತರುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದೇನೆ. ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಗೆ ಬಂದು, ಎರಡು ದಿನ ವಾಸ್ತವ್ಯ ಹೂಡಿ ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

 ಶವದ ಮೇಲೆ ರಾಜಕೀಯ

ಬಿಜೆಪಿಯು ಪರೇಶ ಮೇಸ್ತ ಶವದ ಮೇಲೆ ರಾಜಕೀಯ ಮಾಡುತ್ತಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬಿಐ ಪರೇಶ ಮೇಸ್ತ ಸಾವಿನ ತನಿಖೆ ಮಾಡುತ್ತಿಲ್ಲ. ಬಿಜೆಪಿಯು ಮುಂದಿನ ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಆ ವಿಷಯವನ್ನು ಜೀವಂತವಾಗಿಡಲು ಹೊರಟಿದೆ. ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರಿನ ರೀತಿಯಲ್ಲಿ ಕೋಮು ಸೂಕ್ಷ್ಮ ಜಿಲ್ಲೆಯನ್ನಾಗಿ ಮಾಡಲು ಬಿಜೆಪಿಗರು ಹೊರಟಿದ್ದಾರೆ. ನಮ್ಮ ಜಿಲ್ಲೆಯ ಜನರಿಗೆ ಅಭಿವೃದ್ಧಿ ಬೇಕು. ಹಿಂದುತ್ವದ ವಿಷಯದ ಕಚ್ಚಾಟ ಬೇಡ ಎಂದು ಆನಂದ ಅಸ್ನೋಟಿಕರ್ ಹೇಳಿದರು.