ಶಾಸಕರ ಭವನದಲ್ಲಿ ಕಂಡಕ್ಟರ್ ಸಾವು: 5 ನೇ ಮಹಡಿಯಿಂದ ಬಿದ್ದ ಕೆಎಸ್​ಆರ್​ಟಿಸಿ ಬಸ್ ನಿರ್ವಾಹಕ ದುರ್ಮರಣ

ಬೆಂಗಳೂರು: ಶಾಸಕರ ಭವನದ 5ನೇ ಮಹಡಿಯಿಂದ ಬಿದ್ದು ಕೆಎಸ್​ಆರ್​ಟಿಸಿ ಬಸ್ ನಿರ್ವಾಹಕ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಮಾವಳ್ಳಿಯ ನಿವಾಸಿ ಶಿವಶಂಕರ್ (55) ಮೃತಪಟ್ಟವರು.

ಭಾನುವಾರ (ಏ.14) ಮಧಾಹ್ನ 2.30ರಲ್ಲಿ ಶಾಸಕರ ಭವನದ ಒಳಾಂಗಣದಲ್ಲಿ ಈ ದುರ್ಘಟನೆ ನಡೆದಿದೆ. ಶಿವಶಂಕರ್ ನಿರ್ವಾಹಕರಾಗಿ 18 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಪ್ರತಿ ಭಾನುವಾರ ಶಾಸಕರ ಭವನದಲ್ಲಿರುವ ಕೆಎಸ್​ಆರ್​ಟಿಸಿ ಕಚೇರಿಯಲ್ಲಿ ಟಿಕೆಟ್ ನೋಂದಣಿ ಮಾಡುವ ಕೆಲಸ ಮಾಡುತ್ತಿದ್ದರು. ಎಂದಿನಂತೆ ಭಾನುವಾರ ಬೆಳಗ್ಗೆಯೂ ಮಾವಳ್ಳಿಯಿಂದ ಶಾಸಕರ ಭವನಕ್ಕೆ ಬಂದು ಕರ್ತವ್ಯದಲ್ಲಿ ತೊಡಗಿದ್ದರು. ಮಧ್ಯಾಹ್ನ 2.25ರಲ್ಲಿ ಊಟ ಮುಗಿಸಿದ ಬಳಿಕ ಲಿಫ್ಟ್​ನಲ್ಲಿ ಐದನೇ ಮಹಡಿಗೆ ಹೋಗಿದ್ದು, ಅಲ್ಲಿಂದ ನೆಲಮಹಡಿಗೆ ಬಿದ್ದು ಮೃತಪಟ್ಟಿದ್ದಾರೆ.

ಶಾಸಕರ ಭವನದಲ್ಲಿ ಮೆಟ್ಟಿಲುಗಳ ಭಾಗದ ನೆಲಮಹಡಿಯಲ್ಲಿ ತಗಡನ್ನು ಅಳವಡಿಸಲಾಗಿದೆ. ಶಿವಶಂಕರ್ ಬಿದ್ದ ರಭಸಕ್ಕೆ ತಗಡು ಕಿತ್ತುಹೋಗಿದೆ. ಶಬ್ದ ಕೇಳಿ ಪಕ್ಕದಲ್ಲಿದ್ದ ಹೋಟೆಲ್ ಸಿಬ್ಬಂದಿ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿರುವುದು ಕಂಡು ಬಂದಿದೆ. ವಿಧಾನಸೌಧ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಯಾವುದೇ ಕೌಟುಂಬಿಕ ಕಲಹ ಇರಲಿಲ್ಲ. ಎಂದಿನಂತೆ ಬೆಳಗ್ಗೆ ತಿಂಡಿ ತಿಂದು ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಪತಿ ಐದನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ವಿಚಾರ ಕೇಳಿ ಆಘಾತವಾಗಿದೆ ಎಂದು ಪತ್ನಿ ಹೇಳಿಕೆ ನೀಡಿದ್ದಾರೆಂದು ವಿಧಾನಸೌಧ ಪೊಲೀಸರು ವಿಜಯವಾಣಿಗೆ ತಿಳಿಸಿದ್ದಾರೆ.

ತಲೆ ಸುತ್ತಿ ಬಿದ್ದು ದುರಂತ?

ಶಿವಶಂಕರ್ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಏನಾದರೂ ಸಮಸ್ಯೆಗಳಿದ್ದರೆ ಗೆಳೆಯರ ಬಳಿ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ. ಭಾನುವಾರವಾದ ಹಿನ್ನೆಲೆಯಲ್ಲಿ ಶಾಸಕರ ಭವನದಲ್ಲಿರುವ ಹೆಚ್ಚಿನ ಕಚೇರಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಐದನೇ ಮಹಡಿಯಲ್ಲಿ ಇವರಿಗೆ ಏನಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಕಾಲುಜಾರಿ ಅಥವಾ ತಲೆಸುತ್ತಿ ಬಿದ್ದಿರುವ ಸಾಧ್ಯತೆಗಳಿವೆ.

ಎಲ್ಲ ಆಯಾಮದಲ್ಲೂ ತನಿಖೆ

ಶಿವಶಂಕರ್​ಗೆ ಮೇಲಧಿಕಾರಿಗಳಿಂದ ಅಥವಾ ಕಚೇರಿಯಲ್ಲಿ ಯಾರಾದರೂ ಕಿರುಕುಳ ನೀಡುತ್ತಿದ್ದರೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಶಿವಶಂಕರ್ ಮೊಬೈಲ್ ಸಂಭಾಷಣೆ ಮಾಹಿತಿ ಪಡೆಯಲಾಗುವುದು. 5ನೇ ಮಹಡಿಗೆ ಏಕೆ ಹೋಗಿದ್ದರು ಎಂಬುದೇ ಗೊತ್ತಾಗಿಲ್ಲ. ಶಿವಶಂಕರ್ 5ನೇ ಮಹಡಿಗೆ ಹೋದಾಗ ಅಲ್ಲಿ ಇವರನ್ನು ಯಾರೂ ನೋಡಿರಲಿಲ್ಲ. ಈ ಸಾವಿನ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 

ಮಧ್ಯಾಹ್ನ 12.20 ರಲ್ಲಿ ಶಿವಶಂಕರ್​ಗೆ ಕರೆ ಮಾಡಿದ್ದೆ. ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್)ದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಲ್ಲಿಗೆ ಬರುವುದಿಲ್ಲವೇ ಎಂದು ಕೇಳಿದ್ದೆ. ನನಗೆ ಅನಾರೋಗ್ಯವಿದ್ದು ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಎಂದು ಹೇಳಿದ್ದರು.
| ಸಿದ್ದಪ್ಪ ನೇಗಲಾಲ್ ಶಿವಶಂಕರ್ ಸ್ನೇಹಿತ