ಶಾಸಕರ ನಿಧಿ ಬಳಕೆ ವಿಳಂಬಕ್ಕೆ ತರಾಟೆ

ಕಾರವಾರ: ಶಾಸಕರ ನಿಧಿ ಬಳಕೆಗೆ ವಿಳಂಬ ಮಾಡುತ್ತಿರುವ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಜಿಪಂ ಸಭಾಭವನದಲ್ಲಿ ಶನಿವಾರ ಆಯೋಜನೆಯಾಗಿದ್ದ ತ್ರೖೆಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅರ್ಧ ಗಂಟೆ ಎದ್ದು ನಿಲ್ಲಿಸಿ ತರಾಟೆಗೆ ತೆಗೆದುಕೊಂಡರು.

ಶಾಸಕರು ಶಿಫಾರಸು ಮಾಡಿದರೂ ಅಧಿಕಾರಿಗಳ ವಿಳಂಬ ನೀತಿಯಿಂದ ಅನುದಾನ ಖರ್ಚಾಗದೇ ಉಳಿಯುತ್ತದೆ ಎಂಬ ದೂರಿದೆ ಎಂದ ಸಚಿವರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕರ ನಿಧಿ ಕಡತಗಳನ್ನು ನಿರ್ವಹಿಸುವ ಮಹಿಳಾ ಶಿರಸ್ತೇದಾರ ಅವರನ್ನು ಕರೆಸಿ ಮಾಹಿತಿ ಪಡೆದರು. ನಂತರ ಎಲ್ಲ ತಹಸೀಲ್ದಾರ್ ಹಾಗೂ ಜಿಪಂ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳನ್ನು ಸುಮಾರು ಅರ್ಧ ಗಂಟೆ ಕಾಲ ಎದ್ದು ನಿಲ್ಲಿಸಿ ಗದರಿಸಿದರು. ಶಾಸಕರ ನಿಧಿಯಡಿ ಕಾಮಗಾರಿ ಮುಗಿದ 15 ದಿನದೊಳಗೆ ತಹಸೀಲ್ದಾರ್ ಹಾಗೂ ಜಿಪಂ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಚೆಕ್ ಲಿಸ್ಟ್ ಕಳಿಸಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಐದು ದಿನದಲ್ಲಿ ಕಡತ ಸಿದ್ಧವಾಗಿ ಹಣ ಪಾವತಿಯಾಗಬೇಕು. ಕಾಮಗಾರಿ ಮುಗಿದ ನಂತರ ಚೆಕ್ ಲಿಸ್ಟ್ ಕಳಿಸದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಎಸಿಗಳೇ ಹೊಣೆ: ಅರಣ್ಯ ಹಕ್ಕು ಕಾಯ್ದೆಯಡಿ ಸ್ವೀಕರಿಸಿದ ಸಾವಿರಾರು ಅರ್ಜಿಗಳನ್ನು ಕೆಲವೇ ದಿನಗಳಲ್ಲಿ ಅರ್ಜಿದಾರರ ಹೇಳಿಕೆಯನ್ನೂ ಪಡೆಯದೇ ತಿರಸ್ಕರಿಸಿದ ಉಪವಿಭಾಗಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು. ನಿಯಮ ಮೀರಿ ಅರ್ಜಿಗಳ ತಿರಸ್ಕಾರವಾದ ಬಗ್ಗೆ ಎಲ್ಲ ಉಪವಿಭಾಗಾಧಿಕಾರಿಗಳಿಂದಲೇ ಹೇಳಿಕೆ ಪಡೆದ ದೇಶಪಾಂಡೆ, ಅದನ್ನು ಸಭೆಯ ನಿರ್ಣಯದಲ್ಲಿ ದಾಖಲಿಸುವಂತೆ ಸೂಚಿಸಿದರು. ಜೂನ್ 25 ರ ನಂತರ ಅರಣ್ಯ ಹಕ್ಕು ಕಾಯ್ದೆಯ ಸಂಬಂಧ ವಿಶೇಷ ಸಭೆ ನಡೆಸುವುದಾಗಿ ತಿಳಿಸಿದರು.

ಅಧಿಕಾರಿಗಳಿಗೆ ಕ್ಲಾಸ್: ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಂದ ತಲಾ ಐದು ಸಾವಿರ ರೂ. ಲಂಚ ಪಡೆದು, ಶಾಸಕರನ್ನೂ ಕರೆಯದೇ ರಾತ್ರೋ ರಾತ್ರಿ ಬೋರ್​ವೆಲ್ ಪಂಪ್ ಅನ್ನು ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಜಿಲ್ಲಾ ವ್ಯವಸ್ಥಾಪಕ ಡಿ.ಡಿ. ನಾಯ್ಕ ವಿತರಿಸಿದ್ದಾರೆ ಎಂದು ಶಾಸಕ ಸುನೀಲ ನಾಯ್ಕ ಆರೋಪಿಸಿದರು. ಅಧಿಕಾರಿಯನ್ನು ದೇಶಪಾಂಡೆ ತರಾಟೆಗೆ ತೆಗೆದುಕೊಂಡರು. ನೀರು ಹರಿದು ಹೋಗಲು ವ್ಯವಸ್ಥೆ ಮಾಡದ ಬಗ್ಗೆ ಕಾರವಾರ ನಗರಸಭೆ ಎಇಇ ಮೋಹನರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸಚಿವರ ಸಭೆಯಲ್ಲೂ

ಕೈಕೊಟ್ಟ ಕರೆಂಟ್!: ಸಚಿವರ ಸಭೆಗೆ ಕರೆಂಟ್ ತೊಂದರೆ ಕೊಟ್ಟಿದ್ದರಿಂದ ಹೆಸ್ಕಾಂ ಎಇ ಪೇಚಿಗೆ ಸಿಲುಕಿದರು. ವೋಲ್ಟೇಜ್ ಡ್ರಾಪ್ ಆಗಿದ್ದರಿಂದ ಸಭೆಯಲ್ಲಿ ಎಸಿಗಳು ಬಂದಾಗಿದ್ದವು. ಕಾರವಾರದಲ್ಲಿ ನಾಲ್ಕು ದಿನದಿಂದ ವಿದ್ಯುತ್ ಇಲ್ಲದ ಬಗ್ಗೆ ಪ್ರಸ್ತಾಪಿಸಿದ ದೇಶಪಾಂಡೆ, ಹೆಸ್ಕಾಂ ಎಇ ರೋಶನಿ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ರೀತಿ ಮಾಡುವುದರಿಂದ ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಕಡಿಮೆಯಾಗುತ್ತದೆ ಎಂದು ನಾಜೂಕಾಗಿ ಗದರಿಸಿದರು.

ನಿರ್ಣಯ ಬದಲಿಸುವ ಅಧಿಕಾರ ಜಿಲ್ಲಾಧಿಕಾರಿಗೂ ಇಲ್ಲ: ಖನಿಜ ಪ್ರತಿತಿಷ್ಠಾನದಲ್ಲಿ ಕೈಗೊಂಡ ನಿರ್ಣಯ ಬದಲಿಸುವ ಅಧಿಕಾರ ಜಿಲ್ಲಾಧಿಕಾರಿಗೂ ಇಲ್ಲ. ಸಭೆಗಳಲ್ಲಿ ನಿರ್ಣಯವಾದಂತೆ ವಿಳಂಬವಾಗದಂತೆ ಗಣಿ ಮತ್ತಿತರ ಸಂತ್ರಸ್ತ ಪ್ರದೇಶದ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ಜಿಲ್ಲಾ ಖನಿಜ ಪ್ರತಿಷ್ಠಾನದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಾಮಗಾರಿಯ ಉಸ್ತುವಾರಿ ವಹಿಸಬೇಕು ಎಂದರು.

Leave a Reply

Your email address will not be published. Required fields are marked *