ಕೊಳ್ಳೇಗಾಲ: ತೆಳ್ಳನೂರು ಎಡ ಹಾಗೂ ಬಲದಂಡೆ ನಾಲೆಯನ್ನು ಭಾನುವಾರ ನೀರಾವರಿ ಅಧಿಕಾರಿಗಳೊಂದಿಗೆ ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ ವೀಕ್ಷಿಸಿದರು.
ಈ ಭಾಗದ 7 ಸಾವಿರ ಎಕರೆ ಪ್ರದೇಶಕ್ಕೆ ನಾಲೆಗಳ ನೀರು ತಲುಪುತ್ತಿದೆಯೇ, ನಾಲೆ ನಿರ್ಮಾಣಕ್ಕೆ ರೈತರು ನೀಡಿದ ಜಮೀನುಗಳ ಪರಿಹಾರ ಹಣ ಸಂದಾಯವಾಗಿದೆಯೇ, ನಾಲೆ ಸ್ಥಿತಿ-ಗತಿ, ಹೂಳು, ಈ ಭಾಗದ ರೈತರ ಸಮಸ್ಯೆಗಳ ಬಗ್ಗೆ ತಿಳಿದು ಕ್ರಮವಹಿಸುವ ಸಲುವಾಗಿ ಶಾಸಕರೇ ಖುದ್ದು ಭೇಟಿ ಮಾಡಿದ್ದಲ್ಲದೆ, ನಾಲೆಯ ಸಮಸ್ಯೆ, ರೈತರ ಸಮಸ್ಯೆಯನ್ನು ಅಧಿಕಾರಿಗಳ ಪಟ್ಟಿ ಮಾಡಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ರೈತರಿಗಾಗಿರುವ ತೊಂದರೆಗಳನ್ನು ಆಲಿಸಿದರು.
ನಂತರ, ಶ್ರೀಕ್ಷೇತ್ರ ಚಿಕ್ಕಲ್ಲೂರು ಹಳೇ ಮಠದ ಸಭಾಂಗಣದಲ್ಲಿ ತೆಳ್ಳನೂರು ಹಾಗೂ ಕೊತ್ತನೂರು ಭಾಗದ ಜನರ ಸಭೆ ನಡೆಸಿದರು. ನಾಲೆಗಳ ನೀರು ರೈತರಿಗೆ ಉಪಯೋಗವಾಗಬೇಕು. ಈ ಭಾಗದ ನೀರಿನ ಸಮಸ್ಯೆಯನ್ನು ಹೋಗಲಾಡಿಸಬೇಕು ಎಂಬ ನಿಟ್ಟಿನಲ್ಲಿ ನಾಲೆಗಳ ವೀಕ್ಷಣೆಯನ್ನು ಮಾಡಿದ್ದೇನೆ. ತೆಳ್ಳನೂರು ನಾಲೆಯ ಎಡ ಹಾಗೂ ಬಲ ದಂಡೆ ನಾಲೆಗಳ ಭೇಟಿ ವೇಳೆ ಸಮಸ್ಯೆಗಳನ್ನು ಅರಿತಿದ್ದೇನೆ. ಮುಂದಿನ ದಿನಗಳಲ್ಲಿ ನಾಲೆಗಳ ಅಭಿವೃದ್ಧಿ ಮಾಡಲಾಗುವುದು. ಅಲ್ಲದೆ, ರೈತರಿಗೆ ನಾಲೆಯ ಪರಿಹಾರ ಹಣವನ್ನು ಕೊಡಿಸಲು ಸೂಕ್ತ ದಾಖಲೆಗಳನ್ನು ಪಡೆಯಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಾನು ಚುನಾವಣೆ ಮೊದಲು ನೀಡಿದ ಭರವಸೆಗೆ ನಾನು ಬದ್ಧವಾಗಿದ್ದೇನೆ. ಎಲ್ಲ ಕಾರ್ಯಕ್ಕೂ ಜನರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಜನವರಿ ತಿಂಗಳಲ್ಲಿ ನಡೆಯುವ ಶ್ರೀಚಿಕ್ಕಲ್ಲೂರು ಜಾತ್ರೆಗೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸಲು ಸದ್ಯದಲ್ಲೇ ಸಭೆ ಕರೆದು ಚರ್ಚಿಸಿ ಕ್ರಮ ವಹಿಸುತ್ತೇನೆ ಎಂದರು. ತೆಳ್ಳನ್ನೂರಿನ ರವಿ ಮಾತನಾಡಿ, ಗ್ರಾಮಗಳಲ್ಲಿ ನಡೆದಿರುವ ಜೆಜೆಎಂ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲ ಕಡೆಗಳಿಗೆ ಪೈಪ್ ಹಾಕಿಲ್ಲ. ಮತ್ತು ಕೆಲವು ಕಡೆ ನಲ್ಲಿಗಳಿಲ್ಲ ಈ ಬಗ್ಗೆ ಕ್ರಮ ವಹಿಸಬೇಕು ಎಂದರು. ಸ್ಥಳದಲ್ಲಿದ್ದ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಪ್ರತಿಕ್ರಿಯಿಸಿ, ಜೆಜೆಎಂ ಕಾಮಗಾರಿಯನ್ನು ಒಂದು ಏಜೆನ್ಸಿ ಮಾಡುತ್ತಿದೆ. ನಮಗೆ ಆ ಕಾಮಗಾರಿ ಇನ್ನು ಹಸ್ತಾಂತರವಾಗಿಲ್ಲ. ಶಾಸಕರು ಈ ಬಗ್ಗೆ ಕ್ರಮ ವಹಿಸುವುದಾಗಿ ತಿಳಿಸಿದರು.
ಚಿಕ್ಕಲ್ಲೂರು ಕ್ಷೇತ್ರಕ್ಕೆ ಶೌಚಗೃಹಗಳನ್ನು ಹೆಚ್ಚಾಗಿ ನಿರ್ಮಿಸಬೇಕು. ಈಗಿರುವ 1 ಶುದ್ಧ ಕುಡಿಯುವ ನೀರಿನ ಘಟಕ ಜತೆಗೆ ಇನ್ನೆರಡು ಅಳವಡಿಸಬೇಕು. ಹನೂರು ಶಾಗ್ಯ ಕೊತ್ತನೂರು ಮಾರ್ಗವಾಗಿ ಬಸ್ ವ್ಯವಸ್ಥೆ ಆಗಬೇಕು ಎಂಬುದು ಸೇರಿದಂತೆ ಇನ್ನಿತರ ಬೇಡಿಕೆಗಳು ಸಭೆಯಲ್ಲಿ ಚರ್ಚೆಯಾದವು. ಚಿಕ್ಕಲ್ಲೂರು ರಸ್ತೆಗೆ ಒತ್ತಾಯ: ಮುಖಂಡ ಪುಟ್ಟಣ ಮಾತನಾಡಿ, ಚಿಕ್ಕಲ್ಲೂರು ಜಾತ್ರೆ ಸನಿಹಿತವಾಗುತ್ತಿದೆ. ತೆಳ್ಳನೂರು ಹಾಗೂ ಕೊತ್ತನೂರು 2 ಪಂಚಾಯಿತಿ ಜನರಿಗೆ ಸಮಸ್ಯೆ ಆಗಿರುವುದು. ಚಿಕ್ಕಲ್ಲೂರು ರಸ್ತೆ ಹದಗೆಟ್ಟಿದೆ. ಹಿಂದೆ ಶಾಸಕರು ನೀಡಿದ ಭರವಸೆಯಂತೆ ಮುತ್ತಯ್ಯನಕಟ್ಟೆಯಿಂದ ಕೊತ್ತನೂರು ವರೆಗಿನ 7 ಕಿ.ಮೀ ರಸ್ತೆಯನ್ನು ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು. ಕಬಿನಿ ಪ್ರಭಾರ ಇಇ ರಮೇಶ್, ಎಇಇ ರಾಮಕೃಷ್ಣ, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಮುಖಂಡ ಪುಟ್ಟಣ್ಣ, ಪುಟ್ಟಮಾದಯ್ಯ ಇತರರಿದ್ದರು.