ಶಾಶ್ವತ ಕೆಲಸ ಮಾಡಿದ್ದು ಸಿಪಿವೈ

ರಾಮನಗರ: ನಿಮ್ಮ ಕಷ್ಟ ಕೇಳದವರ ಬಳಿ ನಿಮಗೇನು ಕೆಲಸ. ಕಾಂಗ್ರೆಸ್, ಇಲ್ಲವೇ ಜೆಡಿಎಸ್​ಗೆ ಬನ್ನಿ ಎನ್ನುವ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ಇದೀಗ ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅಭಿಮಾನಿಗಳನ್ನು ಕೆರಳಿಸಿದೆ.

ಚನ್ನಪಟ್ಟಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಚುನಾವಣೆಯಲ್ಲಿ ಸೋತ ಮೇಲೆ ಯೋಗೇಶ್ವರ್ ನಿಮ್ಮ ಕಷ್ಟ ಸುಖ ಕೇಳುತ್ತಿಲ್ಲ, ಸರ್ಕಾರ ಬೀಳಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ನೂರಾರು ಬಿಜೆಪಿ ಕಾರ್ಯಕರ್ತರು ಫೋನ್ ಮಾಡಿ ಎಚ್.ಡಿ. ಕುಮಾರಸ್ವಾಮಿ ಅವರೊಟ್ಟಿಗೆ ಮಾತನಾಡಿಸಿ ಎಂದು ಕೋರುತ್ತಿದ್ದಾರೆ. ತಮ್ಮ ಮತ್ತು ಎಚ್​ಡಿಕೆ ಇಬ್ಬರ ಮನೆ ಬಾಗಿಲು ಸದಾ ತೆರೆದಿರುತ್ತದೆ. ನಿಮಗೆ ಬೇಕಾದ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಡಿ.ಕೆ.ಶಿವಕುಮಾರ್ ಕರೆ ನೀಡಿದ್ದರು.

ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಶಾಸಕ ಯೋಗೇಶ್ವರ್ ಅಭಿಮಾನಿಗಳು ಡಿ.ಕೆ. ಶಿವಕುಮಾರ್ ಹೇಳಿಕೆಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಭಿಕ್ಷೆ ಬೇಡಿದ್ದು ನೀವು!: ನಿಮ್ಮ ಮನೆ ಬಾಗಿಲಿಗೆ ಬರಲು ನಾವೇನು ಭಿಕ್ಷುಕರಲ್ಲ. ನಿಮ್ಮ ಸಹೋದರನನ್ನು ಗೆಲ್ಲಿಸಿಕೊಳ್ಳಲು ಭಿಕ್ಷೆ ಬೇಡಿದ್ದು ನೀವು. 2013ರಲ್ಲಿ ನಡೆದ ಲೋಕಸಭೆ ಉಪಚುನಾವಣೆ ವೇಳೆ ಬಹಿರಂಗ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಯೋಗೇಶ್ವರ್ ಬೆಂಬಲ ಕೋರಿದ್ದನ್ನು ಸಿಪಿವೈ ಅಭಿಮಾನಿಗಳು ನೆನಪಿಸಿದ್ದಾರೆ. ಅಲ್ಲದೆ, ನಾವು ನಿಜವಾದ ಯೋಗೇಶ್ವರ್ ಅಭಿಮಾನಿಗಳು, ನಿಮ್ಮ ಎಂಜಲು ಕಾಸಿಗೆ ಆಸೆ ಪಡಲು ಭಿಕ್ಷುಕರಲ್ಲ. ನಮ್ಮ ನಿಷ್ಠೆ ಏನಿದ್ದರೂ ಯೋಗೇಶ್ವರ್​ಗೆ ಮಾತ್ರ ಎನ್ನುವ ಸಂದೇಶ ಹಾಕುವ ಮೂಲಕ ಡಿಕೆಶಿ ಅವರಿಗೆ ತಿರುಗೇಟು ನೀಡಿದ್ದಾರೆ.

ಒಟ್ಟಾರೆಯಾಗಿ ಚನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಸಚಿವ ಡಿ.ಕೆ.ಶಿವಕುಮಾರ್ ಆಹ್ವಾನ ನೀಡಿರುವುದು ಯೋಗೇಶ್ವರ್ ಅಭಿಮಾನಿಗಳು ಮತ್ತು ಡಿ.ಕೆ.ಶಿವಕುಮಾರ್ ಅವರ ಅಭಿಮಾನಿಗಳ ನಡುವಿನ ಜಾಲತಾಣ ಸಮರಕ್ಕೆ ಕಾರಣವಾಗಿದೆ.

ನಿಜವಾದ ಭಗೀರಥ: ಚನ್ನಪಟ್ಟಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಆಧುನಿಕ ಭಗೀರಥ ಎಂದು ಯೋಗೇಶ್ವರ್ ಅವರನ್ನು ಟೀಕಿಸಿದ್ದ ಸಿಎಂ ಕುಮಾರಸ್ವಾಮಿ ಮತ್ತು ಸಚಿವ ಶಿವಕುಮಾರ್ ಅವರನ್ನು ತರಾಟೆಗೆಗೆ ತೆಗೆದುಕೊಂಡಿರುವ ಅಭಿಮಾನಿಗಳು, ಹೌದು ಯೋಗೇಶ್ವರ್ ನಿಜವಾದ ಆಧುನಿಕ ಭಗೀರಥ ಎಂದು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಅಧಿಕಾರ ಶಾಶ್ವತ ಅಲ್ಲ, ನಮ್ಮ ಕೆಲಸಗಳಷ್ಟೇ ಶಾಶ್ವತ ಎಂದು ಹೇಳಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಹೌದು ಸಚಿವರೇ ನೀವು ಸತ್ಯವನ್ನೇ ಹೇಳಿದ್ದೀರಿ. ಸಚಿವರಾಗಿ, ಶಾಸಕರಾಗಿ ಇದ್ದ ಅವಧಿಯಲ್ಲಿ ಯೋಗೇಶ್ವರ್ ಅವರು, ಕೆರೆ ಕಟ್ಟೆಗಳನ್ನು ತುಂಬಿಸುವ ಮೂಲಕ ತಾಲೂಕಿನ ರೈತರು ಸ್ವಾವಲಂಬಿಗಳಾಗಿ ಬದುಕುವಂತೆ ಮಾಡಿದ್ದಾರೆ. ದಶಕಗಳಿಂದ ಬರಿದಾಗಿದ್ದ ಕಣ್ವ ನದಿಯನ್ನು ತುಂಬುವಂತೆ ಮಾಡಿದ್ದಾರೆ. ಹೈಕೋರ್ಟ್ ಮಾದರಿಯಲ್ಲಿಯೇ ಕೋರ್ಟ್ ನಿರ್ವಣ, ಸರ್ಕಾರಿ ಬಸ್ ನಿಲ್ದಾಣ, ಅಂಬೇಡ್ಕರ್ ಭವನ ನಿರ್ವಣ, ಹಳ್ಳಿಗಳಲ್ಲಿ ದೇವಾಲಯ ನಿರ್ಮಾಣ ಮಾಡುವ ಮೂಲಕ ಶಾಶ್ವತ ಕೆಲಸವನ್ನೇ ಮಾಡಿದ್ದಾರೆ. ಆದರೆ, ರಾಮನಗರ ಸ್ಥಿತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ: ಚನ್ನಪಟ್ಟಣ: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಬಿ.ಪಿ. ಮುದ್ದುಕೃಷ್ಣೇಗೌಡ ಭಾನುವಾರ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ವೈಯಕ್ತಿಕ ಕಾರಣಗಳಿಂದ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ಇನ್ನು ಮುಂದೆ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷದಲ್ಲಿ ಮುಂದುವರಿಯುತ್ತೇನೆ ಎಂದು ತಿಳಿಸಿದ್ದಾರೆ. ನಗರ ಪ್ರದೇಶದಲ್ಲಿ ಪ್ರಭಾವಿ ಮುಖಂಡ ಎನಿಸಿಕೊಂಡಿರುವ ಮುದ್ದುಕೃಷ್ಣೇಗೌಡ ಹಾಲಿ ನಗರಸಭಾ ಸದಸ್ಯ. ಯೋಗೇಶ್ವರ್ ಆಪ್ತರಾಗಿದ್ದ ಮುದ್ದುಕೃಷ್ಣೇಗೌಡ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್​ನಲ್ಲೇ ಉಳಿದು ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶನಿವಾರ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮದ ಬೆನ್ನಲ್ಲೇ ರಾಜೀನಾಮೆ ಸಲ್ಲಿಸಿರುವುದು ಹಲವು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ.