ಶಾಶ್ವತ ಕುಡಿವ ನೀರು ಯೋಜನೆ ಸಿದ್ಧಪಡಿಸಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ 2050ರ ವೇಳೆ ಅಗತ್ಯವಿರುವ ಕುಡಿಯುವ ನೀರಿನ ಪೂರೈಕೆಗೆ ಅನುಗುಣ ಸಮಗ್ರ ಯೋಜನೆ ರೂಪಿಸಬೇಕೆಂದು ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್ ಸೂಚಿಸಿದ್ದಾರೆ.

ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಗುರುವಾರ ಕರ್ನಾಟಕ ಕೇಂದ್ರೀಯ ವಿವಿಗೆ ಕುಡಿಯುವ ನೀರು ಪೂರೈಕೆ, ವಿದ್ಯುತ್, ರಸ್ತೆ, ಕಾನೂನು ಸುವ್ಯವಸ್ಥೆ ಕುರಿತ ಮೇಲುಸ್ತುವಾರಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ವಿವಿಯಲ್ಲಿ ಐದು ವರ್ಷಕ್ಕೊಮ್ಮೆಯಂತೆ 2050ರವರೆಗೆ ಹೆಚ್ಚಾಗಬಹುದಾದ ವಿದ್ಯಾರ್ಥಿ ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಸಮಗ್ರ ವಿವರ ನೀಡಬೇಕು ಎಂದರು.

ಮುಂದಿನ ವರ್ಷಗಳಲ್ಲಿ ವಿವಿಯಲ್ಲಿ 15000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಬೋಧಕರು ವಾಸಿಸುವ ಸಾಧ್ಯತೆ ಇದ್ದು, ಅದಕ್ಕಾಗಿ 2.3 ಎಂಎಲ್ಡಿ ಕುಡಿಯುವ ನೀರು ಬೇಕಿದೆ ಎಂದು ಕುಲಪತಿ ತಿಳಿಸಿದ್ದಾರೆ. ಈಗಾಗಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀಡುತ್ತಿರುವ ಒಂದು ಎಂಎಲ್ಡಿ ನೀರು ಸಾಕಾಗುತ್ತಿಲ್ಲ. ವಿವಿಗಾಗಿಯೇ ಪ್ರತ್ಯೇಕ ಕುಡಿಯುವ ನೀರು ಸರಬರಾಜು ಯೋಜನೆ ರೂಪಿಸಲು ಕ್ರಿಯಾಯೋಜನೆ ಸಿದ್ಧಪಡಿಸಬೇಕೆಂದು ನಿದರ್ೇಶನ ನೀಡಿದರು.

ಕೇಂದ್ರೀಯ ವಿವಿಗೆ ಸಮಾನಾಂತರದಲ್ಲಿರುವ ಬೆಣ್ಣೆತೊರಾ ಅಥವಾ ಅಮರ್ಜಾ ಅಣೆಕಟ್ಟಿನಿಂದ ಕುಡಿಯುವ ನೀರು ಸರಬರಾಜಿಗೆ ಯೋಜನೆ ರೂಪಿಸಬೇಕು. ಈ ಎರಡೂ ಯೋಜನೆಗಳ ಸಾಧಕ ಬಾಧಕ ಪರಿಶೀಲಿಸಿ ಒಂದು ಯೋಜನೆ ಅಂತಿಮಗೊಳಿಸಿ ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸಬೇಕು. ಸೋಮವಾರದೊಳಗೆ ಕುಲಪತಿಗಳು 2050ರವರೆಗಿನ ಅವಶ್ಯಕತೆಗಳ ಕುರಿತು ವರದಿ ನೀಡಿದಲ್ಲಿ ವಾರದೊಳಗೆ ಕೆಯುಡಬ್ಲ್ಯುಡಿಬಿ ಅಧಿಕಾರಿಗಳು ಯೋಜನೆ ಸಿದ್ಧಗೊಳಿಸಬೇಕು ಎಂದರು.

ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ ಮಾತನಾಡಿ, 2014ರಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ ವೃಂದವನ್ನು ಕಡಗಂಚಿಯಲ್ಲಿ ನಿರ್ಮಿಸಿರುವ ವಿವಿಗೆ ಸ್ಥಳಾಂತರಿಸಲಾಗಿದೆ. ಆಗ ರಾಜ್ಯ ಸರ್ಕಾರ ಸಮರ್ಪಕ ಕುಡಿಯುವ ನೀರು ಪೂರೈಸುವ ಭರವಸೆ ನೀಡಿತ್ತು. ಆದರೆ ಇದುವರೆಗೆ ಯಾವುದೇ ಶಾಶ್ವತ ಯೋಜನೆಗಳು ಪ್ರಾರಂಭಿಸಿಲ್ಲ ಎಂದು ಹೇಳಿದರು.

ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಮುಖ್ಯ ಇಂಜಿನಿಯರ್ ದಿನೇಶ್ ಮಾತನಾಡಿ, ಅಮರ್ಜಾ ಅಣೆಕಟ್ಟಿನಲ್ಲಿ 1.4 ಟಿಎಂಸಿ ನೀರು ಲಭ್ಯವಿದೆ. ಕೇಂದ್ರೀಯ ವಿವಿಗೆ 2050ರ ವೇಳೆಗೆ 15000 ಜನಸಂಖ್ಯೆಗೆ ಅನುಗುಣ 2.3ರಿಂದ 3 ಎಂಎಲ್ಡಿ ನೀರು ಬೇಕಿದೆ. ಅಮರ್ಜಾದಿಂದ 0.04 ಟಿಎಂಸಿ ನೀರು ಪಡೆದಲ್ಲಿ ಸಾಕಾಗುತ್ತದೆ. ನೀರಾವರಿ ಇಲಾಖೆಯಿಂದ ಭೀಮಾ ನದಿಯಿಂದ 0.9 ಟಿಎಂಸಿ ನೀರು ಅಮಜರ್ಾ ಅಣೆಕಟ್ಟಿಗೆ ತುಂಬಿಸುವ ಯೋಜನೆ ಸಿದ್ಧವಾಗಿದೆ. ಅದು ಕಾರ್ಯಗತವಾದಲ್ಲಿ ವಿವಿಗೆ ನೀರು ಸರಬರಾಜು ಯೋಜನೆ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಎಸ್ಪಿ ಜಯಪ್ರಕಾಶ್, ಲೋಕೋಪಯೋಗಿ ಇಲಾಖೆ ಇಇ ಮುಕ್ತಾರ್, ಮಹಾನಗರ ಪಾಲಿಕೆ ಇಇ ಶಿವನಗೌಡ ಪಾಟೀಲ್ ಇತರರಿದ್ದರು.

ಸದ್ಯ ವಿವಿ ಕ್ಯಾಂಪಸ್ನಲ್ಲಿ 22 ರಾಜ್ಯಗಳ ವಿದ್ಯಾರ್ಥಿಗಳು ಒಳಗೊಂಡಂತೆ ಸುಮಾರು 1500 ಜನರಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೋರ್ಸ್​ಗಳು ಪ್ರಾರಂಭವಾಗಲಿದ್ದು, 15000 ಜನ ವಾಸಿಸುವ ಸಾಧ್ಯತೆಗಳಿವೆ. ಅವರಿಗೆ ಸಮರ್ಪಕ ಕುಡಿಯುವ ನೀರು ಪೂರೈಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿವಿಗೆ ಪ್ರತ್ಯೇಕ ಕುಡಿಯುವ ನೀರು ಯೋಜನೆ ರೂಪಿಸಬೇಕು.
| ಪ್ರೊ.ಎಚ್.ಎಂ.ಮಹೇಶ್ವರಯ್ಯ ಕೇಂದ್ರೀಯ ವಿವಿ ಕುಲಪತಿ

ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಭದ್ರತೆ ಅಗತ್ಯವಿದೆ. ವಿವಿ ಆವರಣದಲ್ಲಿ ತಾತ್ಕಾಲಿಕವಾಗಿ ಪೊಲೀಸ್ ಔಟ್ ಪೋಸ್ಟ್ ನಿರ್ಮಿಸಬೇಕು. ಸರ್ಕಾರದಿಂದ ಅನುಮೋದನೆ ದೊರೆತ ನಂತರ ಕಾಯಂ ಔಟ್ ಪೋಸ್ಟ್ ನಿರ್ಮಿಸಬೇಕು. ಉಳಿದಂತೆ ವಿದ್ಯುತ್, ಸಾರಿಗೆ, ರಸ್ತೆ, ಘನತ್ಯಾಜ್ಯ ಘಟಕಗಳ ತೊಂದರೆ ನಿವಾರಿಸಲಾಗುವುದು.
| ಸುಬೋಧ ಯಾದವ್ ಪ್ರಾದೇಶಿಕ ಆಯುಕ್ತ