ಶಾಲೆ ಪುನರಾರಂಭಿಸಿ ಸೌಲಭ್ಯ ನೀಡಿ

ಗದಗ: ನೆರೆ ಸಂತ್ರಸ್ತ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳನ್ನು ಪುನರಾರಂಭಿಸಿ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ಹಾಗೂ ಶೈಕ್ಷಣಿಕ ಸಾಮಗ್ರಿಗಳ ವಿತರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಪಿ. ಬಳಿಗಾರ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಜರುಗಿದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಲಪ್ರಭಾ ನದಿ ಹಾಗೂ ಬೆಣ್ಣಿ ಹಳ್ಳದ ಪ್ರವಾಹಕ್ಕೆ ತುತ್ತಾಗಿರುವ ಗ್ರಾಮಗಳಲ್ಲಿ ಆದಷ್ಟು ಬೇಗ ಶಾಲೆಗಳನ್ನು ತೆರೆದು ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಬೇಕು. ಮುಂಬರುವ ಪರೀಕ್ಷೆಗಳಿಗೆ ಸಜ್ಜುಗೊಳಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ನೇರ ಫೋನ್​ಇನ್ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಕೆಲಸವಾಗಿದೆ. ಪ್ರೌಢಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ವ್ಯಾಕರಣ ಸೇರಿ ಗುಣಮಟ್ಟದ ಕಲಿಕೆಗೆ ಒತ್ತು ನೀಡಬೇಕು ಎಂದು ಡಿಡಿಪಿಯು ಎನ್.ಎಚ್. ನಾಗೂರ ಅವರಿಗೆ ಸೂಚಿಸಿದರು.

ಜಿಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ಮಾತನಾಡಿ, ಜಿಲ್ಲೆಯ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ವಿತರಿಸಲಾಗುತ್ತಿರುವ ಆಹಾರದ ಗುಣಮಟ್ಟ ಮತ್ತು ಮಕ್ಕಳ ತೂಕವನ್ನು ಕಾಲಕಾಲಕ್ಕೆ ತಪಾಸಣೆ ನಡೆಸಬೇಕು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಸೌಲಭ್ಯಗಳ ಕೊರತೆಯಾಗದಂತೆ ಕ್ರಮ ಜರುಗಿಸಬೇಕು ಎಂದು ಹೇಳಿದರು.

ಡಿಡಿಪಿಐ ಎನ್.ಎಚ್. ನಾಗೂರ ಮಾತನಾಡಿ, ನರಗುಂದ ತಾಲೂಕಿನ ಲಕಮಾಪುರ ಗ್ರಾಮ ಹೊರತುಪಡಿಸಿ ನೆರೆಪೀಡಿತ ಗ್ರಾಮಗಳಲ್ಲಿ ಶಾಲೆ ತೆರೆದು ತರಗತಿ ಆರಂಭಿಸಲಾಗಿದೆ. ಸಮವಸ್ತ್ರ, ಶೂ-ಸಾಕ್ಸ್, ಪಠ್ಯಪುಸ್ತಕ, ಸೈಕಲ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 2 ಮತ್ತು 4ನೇ ಶನಿವಾರ ಪರೀಕ್ಷೆ ನಡೆಸಲಾಗುತ್ತಿದೆ. ಜೊತೆಗೆ ನೇರ ಫೋನ್​ಇನ್, ರಸಪ್ರಶ್ನೆ, ಸೆಮಿನಾರ್, ಗುಂಪು ಅಧ್ಯಯನ, ವಿಶೇಷ ತರಗತಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮಾತನಾಡಿ, ಜಿಲ್ಲೆಯ ರೈತರಿಗೆ ಸಿರಿಧಾನ್ಯ ಬೆಳೆಯಲು ಪ್ರಚಾರ ಕೈಗೊಳ್ಳಲಾಗಿದೆ. ಅಗತ್ಯ ಪ್ರಮಾಣದಲ್ಲಿ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಬೇಡಿಕೆ ಇರುವ ಬೀಜಗಳನ್ನು ರೈತರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ರೈತರಿಗೆ ತಾಡಪತ್ರಿ ವಿತರಣೆ, ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ, ನೆಡುತೋಪು ನಿರ್ವಣ, ಅಂಗವಿಕಲರಿಗೆ ಸಾಧನ ಸಲಕರಣೆ ವಿತರಣೆ, ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು.

ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಈರಪ್ಪ ನಾಡಗೌಡ್ರ, ಜಿಪಂ ಉಪಕಾರ್ಯದರ್ಶಿ ಪ್ರಾಣೇಶರಾವ್, ಜಿಪಂ ಯೋಜನಾ ನಿರ್ದೇಶಕ ಟಿ. ದಿನೇಶ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ನೆರೆ ಪೀಡಿತ ಗ್ರಾಮಗಳಲ್ಲಿನ ಶಾಲಾ ಕಟ್ಟಡಗಳ ಕುಸಿತ ಕುರಿತು ಪರಿಶೀಲಿಸಿ ತಾತ್ಕಾಲಿಕ ಶೆಡ್ಡುಗಳ ನಿರ್ವಣಕ್ಕೆ ತಾಲೂಕಾಡಳಿತ ವ್ಯವಸ್ಥೆ ಮಾಡಬೇಕು. ನೆರೆ ಪೀಡಿತ ಗ್ರಾಮಗಳಲ್ಲಿನ ಸ್ವಚ್ಛತೆ, ಆರೋಗ್ಯ ಹಾಗೂ ಮೂಲಸೌಕರ್ಯ ಒದಗಿಸುವುದರ ಜೊತೆಗೆ ಜಾನುವಾರುಗಳಿಗೆ ಮೇವು ವಿತರಣೆಗೆ ಕ್ರಮ ಕೈಗೊಳ್ಳಬೇಕು.

ಎಸ್.ಪಿ. ಬಳಿಗಾರ, ಜಿಪಂ ಅಧ್ಯಕ್ಷ.

ಅಂಗನವಾಡಿಗಳಲ್ಲಿ ಮಕ್ಕಳಿಗೆ ವಿತರಿಸುವ ಆಹಾರದಲ್ಲಿ ತರಕಾರಿ-ಸೊಪ್ಪುಗಳ ಬಳಕೆ ನಿಲ್ಲಿಸಲಾಗಿದ್ದು, ಕಳಪೆ ಮಟ್ಟದಿಂದ ಕೂಡಿದೆ. ಅದರಿಂದ ಮಕ್ಕಳ ತೂಕ ಕಡಿಮೆಯಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.

ಶಕುಂತಲಾ ಮೂಲಿಮನಿ, ಜಿಪಂ ಉಪಾಧ್ಯಕ್ಷೆ

Leave a Reply

Your email address will not be published. Required fields are marked *