ಸಿರಗುಪ್ಪ: ತಾಲೂಕಿನ ಕೆ.ಸೂಗೂರು ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ನಿರ್ಮಾಣಕ್ಕೆ ಸಿದ್ದಲಿಂಗೇಶ್ವರ ಮಠದ ಪೀಠಾಧಿಪತಿ ಶಿವಯೋಗಿ ಮಲ್ಲಿಕಾರ್ಜುನ ಸ್ವಾಮಿಗಳು ಎರಡು ಎಕರೆ ಜಮೀನು ದಾನ ಮಾಡಿದ್ದಾರೆ.
ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ಪೂರೈಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗುರಪ್ಪ ಅವರಿಗೆ ಹಕ್ಕು ಪತ್ರವನ್ನು ಹಸ್ತಾಂತರಿಸಿದರು. ಕೆ.ಸೂಗೂರು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು 2015ರಲ್ಲಿ ಉನ್ನತೀಕರಿಸಲಾಗಿತ್ತು. ಹೊಸ ಕಟ್ಟಡ ನಿರ್ಮಿಸಲು ಜಾಗದ ಅವಶ್ಯ ಇತ್ತು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಲವು ಬಾರಿ ಶಿಕ್ಷಣ ಇಲಾಖೆಯಿಂದ ಸಾರ್ವಜನಿಕ ಸಂಪರ್ಕ ಸಭೆ ಏರ್ಪಡಿಸಿತ್ತು. ಆದರೆ, ಯಾರೊಬ್ಬರೂ ಜಮೀನು ನೀಡಲು ಮುಂದೆ ಬಂದಿರಲಿಲ್ಲ.
ಇತ್ತೀಚೆಗೆ 2 ಕಿ.ಮೀ.ದೂರದಲ್ಲಿರುವ ಸರ್ಕಾರಿ ಜಾಗದಲ್ಲಿ ಶಾಲೆ ನಿರ್ಮಿಸಿದರೆ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಗ್ರಾಮಸ್ಥರು ತಡೆದಿದ್ದರು. ಇದನ್ನು ಮನಗೊಂಡು ಮಲ್ಲಿಕಾರ್ಜುನ ಸ್ವಾಮೀಜಿ ಶಾಲೆ ನಿರ್ಮಿಸಲು ಎರಡು ಎಕರೆ ಜಮೀನು ದಾನ ನೀಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗುರಪ್ಪ ತಿಳಿಸಿದರು. ಪ್ರಮುಖರಾದ ದಿಗಂಬರ ಸ್ವಾಮಿ, ರಾಮಣ್ಣ, ಹುಲುಗಪ್ಪ, ಗಾದಿಲಿಂಗಪ್ಪ, ದೇವೇಂದ್ರಪ್ಪ, ಲಂಕೇಶ್ ಇದ್ದರು.