ಶಾಲೆ ಕೊಠಡಿ ನಿರ್ಮಾಣಕ್ಕೆ 45 ಕೋಟಿ ರೂ.ಪ್ರಸ್ತಾವನೆ

ಹಾನಗಲ್ಲ: ತಾಲೂಕಿನ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಲ್ಲ. ಆದರೆ, ಕೊಠಡಿಗಳ ಸಮಸ್ಯೆಯಿದೆ. ಕೊಠಡಿ ನಿರ್ಮಾಣಕ್ಕೆ 45 ಕೋಟಿ ರೂ. ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.

ತಾಲೂಕಿನ ಹಿರೂರ ಗ್ರಾಮದ ಸಮೀಪದ ಗೊಲ್ಲರ ಬಿಡಾರದಲ್ಲಿ ಸೋಮವಾರ ಕಿರಿಯ ಪ್ರಾಥಮಿಕ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.

ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಲಾಗಿದೆ. ಅದರಿಂದ ಗ್ರಾಮದ ಅಭಿವೃದ್ಧಿಗೆ ಅನುದಾನ ದೊರಕಿಸಲಾಗುತ್ತದೆ. ಹಿಂದುಳಿದ ವರ್ಗಗಳ ಜನ ವಾಸಿಸುವ ಗ್ರಾಮಗಳಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಶಾಲೆಗಳನ್ನು ತೆರೆಯಲಾಗುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು ಎಂದರು.

ಶಿಕ್ಷಕರು ಶಾಲೆಯ ಸಮಯ ಪಾಲನೆ ಮಾಡಬೇಕು. ಶಿಕ್ಷಕರು ಶಾಲಾ ವಿಷಯದಲ್ಲಿ ಅಶಿಸ್ತು ತೋರಿದರೆ ಪಾಲಕರು ಅಥವಾ ಗ್ರಾಮಸ್ಥರು ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಬೇಕು. ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳೂ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಗಳಿಸಿರುವುದು ನಮ್ಮ ತಾಲೂಕಿನಲ್ಲಿ ಉದಾಹರಣೆಯಾಗಿದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಪ್ರಯತ್ನಶೀಲರಾಗಬೇಕು ಎಂದರು.

ಪ್ರತಿ ಮನೆಯಲ್ಲಿ ಪದವೀಧರರು..
ತಾಲೂಕಿನ ದಶರಥಕೊಪ್ಪ, ಕೊಂಡೋಜಿ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಜನತೆ ವಾಸಿಸುತ್ತಿದ್ದಾರೆ. ಈ ಗ್ರಾಮಗಳಲ್ಲಿ ಶಾಲೆಗಳಿರುವ ಕಾರಣದಿಂದಾಗಿ ಅಲ್ಲಿನ ವಾತಾವರಣವೇ ಬದಲಾಗಿದೆ. ಪ್ರತಿ ಮನೆಯಲ್ಲೂ ಪದವೀಧರರಿದ್ದಾರೆ ಎಂಬುದು ನಮ್ಮ ತಾಲೂಕಿನ ಹೆಮ್ಮೆ. ಇದರಂತೆ ಎಲ್ಲ ಗ್ರಾಮಗಳಲ್ಲಿಯೂ ಪದವೀಧರರನ್ನು ಕಾಣುವಂತಾಗಬೇಕು ಎಂದು ಶಾಸಕ ಉದಾಸಿ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ, ಸಮನ್ವಯಾಧಿಕಾರಿ ಬಿ.ಎಂ. ಬೇವಿನಮರದ, ಶಿವಲಿಂಗಪ್ಪ ತಲ್ಲೂರ, ರಾಜಣ್ಣ ಪಟ್ಟಣದ, ನಾಗನಗೌಡ ಪಾಟೀಲ, ಕಸ್ತೂರವ್ವ ವಡ್ಡರ, ಉಮೇಶ ಮೂಡಿ, ಅಜ್ಜಪ್ಪ ಗೊಲ್ಲರ, ರಾಮಣ್ಣ ಗೊಲ್ಲರ, ಕೆ.ಶಂಕ್ರಪ್ಪ, ಶೇಖರ ಹಂಚಿನಮನಿ, ದೀಪಾ ಮೇಸ್ತಿ, ವೆಂಕಟೇಶ ನಾಯಕ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *