ಶಾಲೆ ಅಂಗಳದಲ್ಲಿ ಅರಳಿತು ಸಸ್ಯಕಾಶಿ!

ಕುದೂರು: ಕಣ್ಣು ಹಾಯಿಸಿದ ಕಡೆಯಲೆಲ್ಲ ಹಸಿರು, ಕೋಟೆಯಂತೆ ಕಾಣುವ ಕಾಂಪೌಂಡ್, ಎತ್ತಿನ ಬಂಡಿಯ ಗಾಲಿಗಳಿಂದ ನಿರ್ವಿುತವಾದ ಪ್ರವೇಶದ್ವಾರ, ಆವರಣದೊಳಗೆ ಕಾಲಿಡುತ್ತಿದ್ದಂತೆ ಗ್ರಾಮೀಣ ಸೊಗಡನ್ನು ಬಿಂಬಿಸುವ ಸುಂದರ ಕಲಾಕೃತಿಗಳು… ಇದೆಲ್ಲ ಯಾವುದೇ ಉದ್ಯಾನವನದಲ್ಲಿ ಕಂಡಿದ್ದಲ್ಲ, ಸರ್ಕಾರಿ ಶಾಲೆಯೊಂದರಲ್ಲಿ ಕಂಡ ಸೌಂದರ್ಯ ಸಂಗಮ!

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಇಂದಿನ ದಿನಮಾನದಲ್ಲಿ ಮಾಗಡಿ ತಾಲೂಕಿನ ಕುದೂರು ಹೋಬಳಿ ಬೆಟ್ಟಹಳ್ಳಿ ಕಾಲನಿ ಸರ್ಕಾರಿ ಶಾಲೆ ಅದಕ್ಕೆ ಅಪವಾದದಂತಿದೆ. ಶಿಕ್ಷಕರೊಬ್ಬರ ಜತೆ 10 ಮಕ್ಕಳ ಪರಿಶ್ರಮದಿಂದ ನಿರ್ವಣವಾಗಿರುವ ಈ ಶಾಲೆ ಪ್ರವಾಸಿ ತಾಣದಂತೆ ಆಕರ್ಷಣೀಯವಾಗಿದೆ.

10 ವರ್ಷದ ತಪಸ್ಸು: ಸುಂದರ ಪರಿಸರದ ಮೂಲಕ ಆಕರ್ಷಿಸಬಲ್ಲ ಈ ಶಾಲೆಯ ಉದ್ಯಾನ ನಿರ್ವಣದ ಹಿಂದ ಶಾಲೆ ಮುಖ್ಯಶಿಕ್ಷಕ ರಘುಪತಿ ಅವರ ಶ್ರಮ ಪ್ರಧಾನವಾಗಿ ಎದ್ದು ಕಾಣುತ್ತದೆ. ಇವರ ಕನಸಿಗೆ ಕೈಗೂಡಿಸಿರುವ ಶಾಲೆಯ ಮಕ್ಕಳು ಒಂದು ಎಕರೆ ಪ್ರದೇಶದಲ್ಲಿ ವೈವಿದ್ಯಮಯ ಸಸ್ಯಗಳನ್ನು ಬೆಳೆಸಿದ್ದು, ಶಾಲಾ ಆವರಣ ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ. ಇದು ಕೇವಲ ಒಂದೆರಡು ತಿಂಗಳ ಪರಿಶ್ರಮವಲ್ಲ. ಶಿಕ್ಷಕ ರಘುಪತಿ ಅವರ 10 ವರ್ಷದ ತಪಸ್ಸು. ಶಾಲಾ ಅವಧಿ ಮತ್ತು ರಜೆ ದಿನಗಳಲ್ಲೂ ಬಿಡುವು ಸಿಕ್ಕಾಗಲೆಲ್ಲ ಪರಿಸರ ಅಭಿವೃದ್ಧಿಯತ್ತ ಗಮನಹರಿಸಿದ್ದಾರೆ. ಇದಕ್ಕಾಗಿ ಸ್ವಂತ ಹಣವನ್ನೂ ವ್ಯಯಿಸಿದ್ದಾರೆ. ಶಾಲೆಗೆ ಭೇಟಿ ನೀಡಿ ಅಭಿಪ್ರಾಯ ವ್ಯಕ್ತಪಡಿಸಿರುವ ಗಣ್ಯರು ಮತ್ತು ಅಧಿಕಾರಿಗಳ ಅಭಿಪ್ರಾಯಗಳನ್ನು ಶಾಲಾ ಆವರಣದಲ್ಲಿ ಅಡುಗೆ ಕೋಣೆ ಗೋಡೆಯ ಮೇಲೆ ಕಾಣಬಹುದಾಗಿದೆ.

ಶಾಲೆಯ ವಿದ್ಯಾರ್ಥಿ ಗಳು ಹಾಗೂ ಪಾಲಕರು ಇಂತಹ ಸುಂದರ ಪರಿಸರ ನಿರ್ವಣದಲ್ಲಿ ಕೈಜೋಡಿಸಿದ್ದಾರೆ. ಎಲ್ಲರ ಪರಿಶ್ರಮದಿಂದಾಗಿ ಹಸಿರಿನಿಂದ ಕಂಗೊಳಿಸುತ್ತಿದೆ.

| ಡಿ. ರಘುಪತಿ ಮುಖ್ಯಶಿಕ್ಷಕ, ಬೆಟ್ಟಹಳ್ಳಿ ಕಾಲನಿ ಸರ್ಕಾರಿ ಶಾಲೆ

ಶಾಲೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಅಧಿಕಾರಿಗಳು ಶಾಲೆಯತ್ತ ಗಮನ ಹರಿಸಿ ಇಲ್ಲಿನ ವಾತಾವರಣವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಮಕ್ಕಳು, ಶಿಕ್ಷಕರ ಶ್ರಮಕ್ಕೆ ಸಾರ್ಥಕತೆ ತರಬೇಕು.

| ಪಾತರಾಜು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ