ಶಾಲೆಯಲ್ಲಿ ಸ್ಕೌಟ್ಸ್-ಗೈಡ್ಸ್ ಕಡ್ಡಾಯ

ದೇವನಹಳ್ಳಿ: ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ದಳ ಪ್ರಾರಂಭಿಸಲು ಕ್ರಮಕೈಗೊಳ್ಳಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್​ನ ಜಿಲ್ಲಾ ಮುಖ್ಯ ಆಯುಕ್ತ, ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷ ಬಿ.ಕೆ.ಶಿವಪ್ಪ ತಿಳಿಸಿದರು.

ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಅಭಿವೃದ್ಧಿ ತಂತ್ರಾಂಶ ಮತ್ತು ಯೋಜನಾ ಕಾರ್ಯಾಗಾರವನ್ನು ಮಂಗಳವಾರ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸಂಸ್ಥೆಯು 2019-20ನೇ ಸಾಲಿಗೆ ಜಿಲ್ಲೆಗೆ 6000 ಸಾವಿರ ಸ್ಕೌಟ್ಸ್ ಮತ್ತು 5000 ಗೈಡ್ಸ್ ಸದಸ್ಯರ ಗುರಿ ನೀಡಿದ್ದು, ಗುರಿಗಿಂತ ಹೆಚ್ಚಾಗಿ ಗುಣಮಟ್ಟದ ದಳ ಪ್ರಾರಂಭಿಸಲು ಮತ್ತು ಕ್ರಿಯಾ ಯೋಜನೆಯಂತೆ ಪ್ರತಿ ತಾಲೂಕಿನಲ್ಲೂ ಚಟುವಟಿಕೆ ನಡೆಸಲು ಜಿಲ್ಲೆಯ ನಾಲ್ಕೂ ತಾಲೂಕುಗಳ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳಿಗೆ ಸಹಕಾರ ನೀಡಲಾಗುವುದು ಎಂದರು.

ನಿವೃತ್ತ ಪೊಲೀಸ್ ಸಬ್​ಇನ್ಸ್​ಪೆಕ್ಟರ್ ರಾಮಮೂರ್ತಿ ಮಾತನಾಡಿ, ಸಮಾಜದ ಸ್ವಾಸ್ಥ್ಯಕ್ಕಾಗಿ ಮಕ್ಕಳಿಗೆ ಸರಿಯಾದ ದಾರಿ ತೋರಿಸಿ ಅವರ ಉತ್ತಮ ಭವಿಷ್ಯ ರೂಪಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಗ್ರಾಮಾಂತರ ಜಿಲ್ಲೆಯ 2019-20ನೇ ಸಾಲಿನ ಕ್ರಿಯಾ ಯೋಜನೆಯನ್ವಯ ಪ್ರತಿ ತಾಲೂಕಿಗೂ ತಲಾ 1500 ಸ್ಕೌಟ್ಸ್ ಮತ್ತು 1250 ಗೈಡ್ಸ್ ಸದಸ್ಯ ಗುರಿ ನೀಡಲಾಯಿತು. ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ 2019-20ನೇ ಸಾಲಿನ ರಾಜ್ಯಮಟ್ಟದ ಕ್ರಿಯಾ ಯೋಜನೆಯನ್ನು ಏಕ ಕಾಲದಲ್ಲಿ ಜಿಲ್ಲಾಮಟ್ಟ ಮತ್ತು ಎಲ್ಲ ತಾಲೂಕುಮಟ್ಟದಲ್ಲೂ ಬಿಡುಗಡೆಗೊಳಿಸಲು ಕ್ರಿಯಾ ಯೋಜನೆ ನೀಡಲಾಯಿತು.

ಜಿಲ್ಲಾ ಉಪಾಧ್ಯಕ್ಷೆ ರಾಜಮ್ಮ, ಸ್ಕೌಟ್ಸ್ ಆಯುಕ್ತ ನಾಗರಾಜ, ಜಿಲ್ಲಾ ಗೈಡ್ಸ್ ಆಯುಕ್ತೆ ವಿಜಯಕುಮಾರಿ, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಪ್ರಸಾದ್, ಜಿಲ್ಲಾ ತರಬೇತಿ ಆಯುಕ್ತ ಶರಣಪ್ಪ ಕಂಬಳಿ, ಜಿಲ್ಲಾ ಸಂಘಟನಾ ಆಯುಕ್ತರಾದ ಗೀತಾ, ಜಿಲ್ಲಾ ಸಂಘಟನಾ ಆಯುಕ್ತ ಸ್ಕೌಟ್ಸ್ ಶಂಕರ್ ಕಾಂಬ್ಳಿ, ದೇವನಹಳ್ಳಿ ತಾಲೂಕು ಕಾರ್ಯದರ್ಶಿ ಸೀತಾರಾಮು, ದೊಡ್ಡಬಳ್ಳಾಪುರ ತಾಲೂಕು ಕಾರ್ಯದರ್ಶಿ ಆಂಜಿನಪ್ಪ, ಹೊಸಕೋಟೆ ತಾಲೂಕು ಅಧ್ಯಕ್ಷೆ ಗುಲಾಬ್ ಜಾನ್, ಕಾರ್ಯದರ್ಶಿ ದ್ರಾಕ್ಷಾಯಿಣಿದೇವಿ, ನೆಲಮಂಗಲ ತಾಲೂಕು ಕಾರ್ಯದರ್ಶಿ ಪ್ರಕಾಶ್, ಹಿಮಾಲಯ ವುಡ್ ಬ್ಯಾಡ್ಜ್ ಪದವೀಧರರಾದ ಮುದ್ದಪ್ಪ, ಮುನಿಸ್ವಾಮಿ, ವೆಂಕಟೇಶ್, ಈರಣ್ಣ, ಕುಮಾರ್, ಚಂದ್ರಶೇಖರ್, ಗೀತಾ, ಆಶಾಲತಾ ಇದ್ದರು.

Leave a Reply

Your email address will not be published. Required fields are marked *