ಶಾಲೆಗಳಿಗೆ ನ್ಯಾಯಾಧೀಶರ ತಂಡ ಭೇಟಿ

ಹೊಳೆನರಸೀಪುರ: ಹಿರಿಯ ಸಿವಿಲ್ ನ್ಯಾಯಾಧೀಶ ರಂಗೇಗೌಡ, ಸಿವಿಲ್ ನ್ಯಾಯಾಧೀಶ ಆರ್. ಮಹೇಶ್ ಹಾಗೂ ಅಧಿಕ ಸಿವಿಲ್ ನ್ಯಾಯಾಧೀಶ ಅರುಣ್ ಚೌಗುಲೆ ಹಾಗೂ ತಂಡ ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮೂಲ ಸೌಕರ್ಯಗಳನ್ನು ಪರಿಶೀಲಿಸಿತು.

ಈ ವೇಳೆ ಕೆಲವು ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ ಶುಚಿತ್ವದ ಕೊರತೆ ಕಂಡುಬಂದಿದ್ದು, ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಇದೇ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶ ರಂಗೇಗೌಡ ಮಾತನಾಡಿ, ಹೈಕೋರ್ಟ್ ನಿರ್ದೇಶನದ ಮೇರೆಗೆ ನ್ಯಾಯಾಧೀಶರು ಹಾಗೂ ವಕೀಲರ ತಂಡಗಳನ್ನು ರಚಿಸಿಕೊಂಡು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದೇವೆ. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶುಚಿತ್ವ ಮತ್ತು ಸುಸ್ಥಿತಿಯ ಶೌಚಗೃಹವಿರಬೇಕು. ಇವುಗಳ ನ್ಯೂನತೆ ಕಂಡು ಬಂದಲ್ಲಿ ವರದಿ ಮಾಡುತ್ತೇವೆ ಎಂದು ತಿಳಿಸಿದರು. ವಕೀಲ ಶಿವಣ್ಣ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು.