ರಿಪ್ಪನ್‌ಪೇಟೆ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ 1997-98ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಶನಿವಾರ ಗುರುವಂದನಾ ಮತ್ತು ಸ್ನೇಹ ಮಿಲನ ಕಾರ್ಯಕ್ರಮ ಆಯೋಜಿಸಿ ಶಾಲಾ ಆವರಣದಲ್ಲಿ ಒಂದೆಡೆ ಎಲ್ಲರೂ ಸೇರಿ ಸಂಭ್ರಮಿಸಿದರು.
ಅಂದಿನ ಶಿಕ್ಷಕರನ್ನು ಸನ್ಮಾನಿಸಿದ ವಿದ್ಯಾರ್ಥಿಗಳು ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. 28 ವರ್ಷಗಳ ಸ್ನೇಹ ಬಾಂಧವ್ಯವನ್ನು ನೆನಪಿಸಿ ಕುಶಲೋಪರಿ ನಡೆಸಿ ಭಾವುಕರಾದರು. ಎಸ್‌ಎಸ್‌ಎಲ್‌ಸಿ ನಂತರ ಕೆಲವರು ನೌಕರಿಯಲ್ಲಿದ್ದರೆ, ಇನ್ನೂ ಕೆಲವರು ಕೃಷಿ ಹಾಗೂ ಸ್ವಂತ ಉದ್ಯಮಗಳನ್ನು ನಡೆಸುತ್ತಿದ್ದಾರೆ.
ಜಾತಿ, ಮತ, ಅಂತಸ್ತು, ಅಧಿಕಾರ ಮುಖ್ಯವಾಗದೆ ಎಲ್ಲರಲ್ಲಿಯೂ ಸ್ನೇಹ ಭಾವ ವಿಶೇಷವಾಗಿತ್ತು. ಸನ್ಮಾನ ಸ್ವೀಕರಿಸಿದ ಅಣ್ಣಪ್ಪ ಮಾತನಾಡಿ, ಸುದೀರ್ಘ ಕಾಲದ ನಂತರವೂ ಗುರುಗಳನ್ನು ಆಹ್ವಾನಿಸಿ ಸಂಭ್ರಮಿಸುತ್ತಿರುವುದು ನಮ್ಮ ನೆಲದ ಸಂಸ್ಕಾರ ತೋರಿಸುತ್ತದೆ ಎಂದರು.
ಯಶೋದಾ, ಹೇಮಲತಾ, ಕುಮಾರಸ್ವಾಮಿ, ಆರ್.ಲತಾ, ದಾಮೋದರ, ನಾರಾಯಣಪ್ಪ, ಮಲ್ಲಿಕಾರ್ಜುನ, ಕೆಸಿನಮನೆ ರತ್ನಾಕರ ಅವರನ್ನು ಸನ್ಮಾನಿಸಲಾಯಿತು. ಗಣೇಶ್ ಕೆಂಚನಾಲ , ನಾಗೇಶ್ ಹೆಬ್ಬಾರ್, ಮಳವಳ್ಳಿ ಮಂಜುನಾಥ, ಬೆಳಕೋಡು ವೀರೇಶ, ಶ್ರೀನಿವಾಸಾಚಾರಿ, ಹರ್ಷ, ಗಣೇಶ, ರಹೀಂ ಇತರರಿದ್ದರು.
