ಶಾಲಾ ದಾಖಲಾತಿ ಸಂಖ್ಯೆ ಹೆಚ್ಚಳಕ್ಕೆ ಕ್ರಮ

ಹಿರಿಯೂರು: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಇಒ ಸಿ.ವಿ.ನಟರಾಜ್ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಗುರಭವನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕಿನಲ್ಲಿ 150 ಮಕ್ಕಳು ಶಾಲೆಯಿಂದ ಹೊರ ಉಳಿದಿದ್ದು, ಅವರನ್ನು ಮುಖ್ಯವಾಹಿನಿಗೆ ತರಲು ವಿಶೇಷ ದಾಖಲಾತಿ ಆಂದೋಲನ ಆಯೋಜಿಸಲಾಗಿದೆ ಎಂದರು.

ಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಶೈಕ್ಷಣಿಕ ಯೋಜನೆ ಅನುಷ್ಠಾನಗೊಳಿಸುವ ಜತೆ ಮೂಲ ಸೌಲಭ್ಯ ಕಲ್ಪಿಸಿದೆ. ಸರ್ಕಾರಿ ಶಾಲೆಗಳಲ್ಲಿ ಅನುಭವಿ ಶಿಕ್ಷಕರಿದ್ದು, ಕಲಿಕೆಗೆ ಪೂರಕ ವಾತಾವರಣವಿದೆ. ಪಾಲಕರು, ಖಾಸಗಿ ಶಾಲೆಗಳ ಮೋಹ ತೊರೆದು ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಬೇಕು ಎಂದು ಮನವಿ ಮಾಡಿದರು.

ತಾಲೂಕಿನ ಹೊಸಯಳನಾಡು, ಮರಡಿಹಳ್ಳಿಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ನಗರ ಸೇರಿ ಹರಿಯಬ್ಬೆ, ಯರಬಳ್ಳಿ ಮರಡಿಹಳ್ಳಿ, ಹೊಸಯಳನಾಡು ಗ್ರಾಮದಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಹೊಸಯಳನಾಡು ಗ್ರಾಮದ ಹಳೇ ವಿದ್ಯಾರ್ಥಿಗಳ ಸಂಘದಿಂದ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮೇ 29ರಿಂದ ಶಿಕ್ಷಣ ಇಲಾಖೆಯ 8 ತಂಡಗಳು ಮಿಂಚಿನ ಸಂಚಾರ ಅಭಿಯಾನ ನಡೆಸಲಿದ್ದು, ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಾಲೆ ಪುನರಾರಂಭ ಸಿದ್ಧತೆ, ಅಕ್ಷರ ದಾಸೋಹ, ವಿಶೇಷ ದಾಖಲಾತಿ ಆಂದೋಲನ, ಮೂಲ ಸೌಲಭ್ಯದ ಪರಿಶೀಲನೆ ನಡೆಸುವರು ಎಂದರು.

ಅಕ್ಷರ ದಾಸೋಹ ಅಧಿಕಾರಿ ನಾಗರಾಜಾಚಾರಿ ಮಾತನಾಡಿ, ಶೇ.80ರಷ್ಟು ಶಾಲೆಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಸರಬರಾಜು ಮಾಡಲಾಗಿದ್ದು, ಶಾಲೆ ಪುನರಾರಂಭದ ದಿನ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *