ಶಾಲಾ ಕೊಠಡಿಗೆ 40 ಕೋಟಿ ಪ್ರಸ್ತಾವನೆ

ಹಾನಗಲ್ಲ: ತಾಲೂಕಿನಲ್ಲಿ 400 ಶಾಲಾ ಕೊಠಡಿ ನಿರ್ಮಾಣ ಕೈಗೊಳ್ಳಬೇಕಿದ್ದು, ಕೇಂದ್ರ ಸರ್ಕಾರದ ಸರ್ವಶಿಕ್ಷಾ ಅಭಿಯಾನದಡಿ 40 ಕೋಟಿ ರೂ. ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.

ತಾಲೂಕಿನ ಕಿರವಾಡಿ, ಹಳ್ಳಿಬೈಲ ಹಾಗೂ ಗೊಂದಿ ಗ್ರಾಮಗಳಲ್ಲಿ ಅಪ್ಪರ್ ತುಂಗಾ ಮೇಲ್ದಂಡೆ ಯೋಜನೆಯಡಿ ಮಂಜೂರಾದ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸಾಲ ಮನ್ನಾ ಕಾರಣದಿಂದ ಶಾಲಾ ಕೊಠಡಿಗಳ ನಿರ್ವಣಕ್ಕೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆಗೊಳಿಸುತ್ತಿಲ್ಲ. ಹೀಗಾಗಿ ಕೇಂದ್ರದ ಮೊರೆ ಹೋಗಬೇಕಾಗಿದೆ. ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ ಧೋರಣೆ ತಾಳಿದೆ ಎಂದರು.

ತಾಲೂಕಿನಲ್ಲಿ 2016ರಲ್ಲಿ 191 ಶಾಲಾ ಕೊಠಡಿ ನೆಲಸಮಗೊಳಿಸಲಾಗಿದೆ. ಇನ್ನೂ 214 ಕೊಠಡಿಗಳು ನೆಲಸಮಗೊಳ್ಳಬೇಕಿದೆ. ಆದರೆ, ಸರ್ಕಾರ ಹೊಸ ಕಟ್ಟಡ ನಿರ್ವಣಕ್ಕೆ ಅನುದಾನ ನೀಡುತ್ತಿಲ್ಲ ಎಂದರು.

ನೀರಾವರಿಗೆ 1000 ಕೋಟಿ ರೂ.: ತಾಲೂಕಿನ ಶಿರಗೋಡ, ಬಾಳಂಬೀಡ, ನರೇಗಲ್, ಶ್ಯಾಡಗುಪ್ಪಿ ಏತ ನೀರಾವರಿಗಳಿಗೆ 1000 ಕೋಟಿ ರೂ. ಅನುದಾನ ಅಗತ್ಯವಿದ್ದು, ರಾಜ್ಯ ಸರ್ಕಾರ ಯೋಜನೆ ಜಾರಿಗೆ ಹಿಂದೇಟು ಹಾಕಿದೆ. ಹೀಗಾಗಿ ಕೇಂದ್ರದ ಜಲ ಆಯೋಗಕ್ಕೆ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ. ಶೀಘ್ರದಲ್ಲಿ ಅನುದಾನ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ ಎಂದು ಶಾಸಕ ಉದಾಸಿ ಹೇಳಿದರು.

ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ಬಿಜೆಪಿ ಕಾರ್ಯದರ್ಶಿ ಶಿವಲಿಂಗಪ್ಪ ತಲ್ಲೂರ, ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಕರಬುಳ್ಳೇರ, ಪಿಎಲ್​ಡಿ ಬ್ಯಾಂಕ್ ನಿರ್ದೇಶಕಿ ಚಿನ್ನಮ್ಮ ಕಲ್ಲಣ್ಣನವರ, ಎಂ.ಎಸ್. ಪೂಜಾರ, ಕಾಂತನಗೌಡ ಪಾಟೀಲ, ಕುಮಾರ ಕೊರಗರ, ಗಣಪತಿ ಕಲ್ಲಣ್ಣನವರ ಇತರರು ಉಪಸ್ಥಿತರಿದ್ದರು.