ಹಿರೇಕೆರೂರ: ಆಕಸ್ಮಿಕವಾಗಿ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ಅಡಕೆ ತೋಟ ಹಾಗೂ ನೀರಾವರಿ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಲಾದ ಘಟನೆ ತಾಲೂಕಿನ ದೂದಿಹಳ್ಳಿ ಗ್ರಾಮದ ಸಮೀಪ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಪಟ್ಟಣದ ಜ್ಞಾನೇಶ ಅಬಲೂರು, ಪ್ರವೀಣ ಅಬಲೂರು ಅವರಿಗೆ ಸೇರಿದ 6 ಎಕರೆ ಅಡಕೆ ತೋಟದಲ್ಲಿ ಬೆಂಕಿ ಹತ್ತಿಕೊಂಡಿದೆ. ಇದರಿಂದಾಗಿ ತೋಟದಲ್ಲಿ ಅರ್ಧದಷ್ಟು ಅಡಕೆ ಮರ, ನೀರಾವರಿ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟಿವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
‘ವಿದ್ಯುತ್ ತಂತಿಗಳು ಜೋತು ಬಿದ್ದಿರುವ ಹಾಗೂ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಬರುವ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಅನೇಕ ಬಾರಿ ತಿಳಿಸಲಾಗಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಘಟನೆಗೆ ಹೆಸ್ಕಾಂ ಅಧಿಕಾರಿಗಳೇ ಕಾರಣರಾಗಿದ್ದಾರೆ. ಪರೀಶಿಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಜಮೀನಿನ ಮಾಲೀಕರು ಆಗ್ರಹಿಸಿದ್ದಾರೆ.