ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಅನಾಹುತ

ಗದಗ: ಶಾರ್ಟ್ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ ತಗುಲಿದ ಪರಿಣಾಮ ಮದುವೆಗೆ ತಂದಿದ್ದ 50 ಸಾವಿರ ರೂ. ಗಿಂತ ಹೆಚ್ಚು ಮೌಲ್ಯದ ವಸ್ತುಗಳು ಭಸ್ಮವಾದ ಘಟನೆ ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ಬುಧವಾರ ತಡರಾತ್ರಿ ಜರುಗಿದೆ.

ಗ್ರಾಮದ ಮಾಬುಸಾಬ್ ಪೆಂಡಾರಿ ಅವರ ಮನೆಗೆ ಬೆಂಕಿ ತಗುಲಿದ್ದು, ಮದುವೆಗೆ ತಂದ ಬಟ್ಟೆ ಮತ್ತಿತರ ವಸ್ತುಗಳು, 35 ಸಾವಿರ ರೂ. ನಗದು ಸೇರಿ 50 ಸಾವಿರ ರೂ. ಗಿಂತ ಹೆಚ್ಚು ಮೌಲ್ಯದ ವಸ್ತುಗಳು ನಾಶವಾಗಿವೆ.

ಗಾರೆ ಕೆಲಸ ಮಾಡುತ್ತಿದ್ದ ಮಾಬುಸಾಬ್ ಪೆಂಡಾರಿ ಅವರು ಸೊಸೆಯ ಮದುವೆಗಾಗಿ ದುಡಿದ ಹಾಗೂ ಸಾಲದ ಹಣದಲ್ಲಿ ಬಟ್ಟೆ, ಬಾಂಡೆ ಸಾಮಾನುಗಳನ್ನು ಖರೀದಿಸಿದ್ದರು. ಮಾ. 10ರಂದು ಮದುವೆ ಕೂಡ ನಿಶ್ಚಯವಾಗಿತ್ತು. ಏಕಾಏಕಿ ಬುಧವಾರ ತಡರಾತ್ರಿ ಶಾರ್ಟ್ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ಮದುವೆ ಸಾಮಗ್ರಿ ಸುಟ್ಟು ಕರಕಲಾಗಿವೆ. ಬೆಂಕಿ ತಗುಲುತ್ತಿದ್ದಂತೆ ನಿದ್ರೆಯಿಂದ ಎಚ್ಚೆತ್ತ ಮಾಬುಸಾಬ್ ಪೆಂಡಾರಿ ಅವರು ಮನೆಯಲ್ಲಿದ್ದವರನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ. ಅದೃಷ್ಟವಶಾತ್ ಪ್ರಾಣ ಹಾನಿಯಾಗಿಲ್ಲ. ಮನೆಯ ಸದಸ್ಯರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿದ್ಯುತ್ ಅನಾಹುತದಿಂದ ಬಾಳೆ ಬೆಳೆ ಹಾನಿ

ಶಿರಹಟ್ಟಿ: ಶಾರ್ಟ್ ಸರ್ಕ್ಯೂಟ್​ನಿಂದ ಅಪಾರ ಪ್ರಮಾಣದ ಬಾಳೆ ಬೆಳೆ ಹಾನಿಗೀಡಾದ ಘಟನೆ ತಾಲೂಕಿನ ಹೊಸೂರ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.

ಮಾಜಿ ಸೈನಿಕ ಎಚ್.ಎಂ. ಪಾಟೀಲ ಅವರ 5 ಎಕರೆ ಭೂಮಿಯಲ್ಲಿ ಬೆಳೆದ ಬಾಳೆಬೆಳೆ, ಪೈಪ್​ಗಳು, ಸ್ಪ್ರಿಂಕ್ಲರ್ ಇತ್ಯಾದಿ ವಸ್ತುಗಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ 15 ಲಕ್ಷ ರೂ. ಗಿಂತ ಹೆಚ್ಚು ಹಾನಿಯಾಗಿದೆ. ಗಾಳಿ ರಭಸಕ್ಕೆ ವಿದ್ಯುತ್ ತಂತಿಗಳು ಪರಸ್ಪರ ತಾಗಿ ಒಣಗಿದ ಗರಿ ಮೇಲೆ ತುಂಡಾಗಿ ಬಿದ್ದ ಪರಿಣಾಮ ಅನಾಹುತವಾಗಿದೆ ಎನ್ನಲಾಗಿದೆ.

ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರು. ಅಷ್ಟರಲ್ಲಾಗಲೇ ಅಪಾರ ಪ್ರಮಾಣದ ಬಾಳೆ ಹಾನಿಗೀಡಾಗಿದೆ.