ಶಾಂತಿದೂತ ಅಮೆರಿಕ ಶಸ್ತ್ರಾಸ್ತ್ರ ಮಾರಾಟದಲ್ಲಿ ಮುಂದು!

ಅಮೆರಿಕವನ್ನು ಸುಲಭವಾಗಿ ನಂಬಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದರ ಪ್ರತಿ ನಡೆಯೂ ನಿಗೂಢ ಮತ್ತು ಆಕ್ರಮಕ. ಬಾಯಲ್ಲಿ ಶಾಂತಿಮಂತ್ರ ಜಪಿಸುತ್ತಲೇ ಶಸ್ತ್ರಾಸ್ತ್ರ ಮಾರಾಟದ ಅತಿದೊಡ್ಡ ವ್ಯಾಪಾರಿ ರಾಷ್ಟ್ರವಾಗಿದೆ. ಆದರೆ, ಈ ನೀತಿ ಅಮೆರಿಕಕ್ಕೆ ಮುಂದೊಂದು ದಿನ ಮುಳುವಾಗಿ ಪರಿಣಮಿಸಿದರೂ ಅಚ್ಚರಿ ಇಲ್ಲ.

 ನಮ್ಮ ಗ್ರಾಮೀಣ ಭಾಗಗಳಲ್ಲಿ ಆಗಾಗ ಕೇಳಿಬರುವ ಒಂದು ಮಾತು-‘ಮಗುವನ್ನು ಚಿವುಟಿ ಮತ್ತೆ ತೊಟ್ಟಿಲು ತೂಗಿದಂತೆ ಮಾಡೋದು’! ಇದರರ್ಥ ಸ್ಪಷ್ಟ. ಮಗುವಿನೊಂದಿಗೆ ವಿನಾಕಾರಣ ಕೀಟಲೆ ಮಾಡಿ ಅದನ್ನು ಸಂತೈಸುವಂತೆ ನಟಿಸುವುದು. ಇದು ಸಿನಿಕ ಮತ್ತು ವಿಚಿತ್ರ ಮನಸ್ಥಿತಿಗೆ ಉದಾಹರಣೆ. ಜಾಗತಿಕವಾಗಿ ಕಣ್ಣು ಹಾಯಿಸಿದಾಗ ಅಮೆರಿಕ ಈ ಮಾನಸಿಕತೆಗೆ ನಿದರ್ಶನವಾಗಿ ಕಾಣಸಿಗುತ್ತದೆ. ವಿಶ್ವದ ದೊಡ್ಡಣ್ಣ ಎಂದು ಬೀಗುವ, ವಿವಾದಗಳೆಲ್ಲ ತನ್ನಿಂದಲೇ ಇತ್ಯರ್ಥಗೊಳ್ಳುತ್ತವೆ ಎಂದು ಕೊಚ್ಚಿಕೊಳ್ಳುವ ಅಮೆರಿಕ ಶಸ್ತ್ರಾಸ್ತ್ರ ಮಾರಾಟದಲ್ಲಿ ಚಾಂಪಿಯನ್ ಆಗಿದ್ದು, ಈ ಸ್ಥಾನಕ್ಕೆ ಮತ್ತೊಂದು ದೇಶ ಬರದಂತೆ ಎಚ್ಚರ ವಹಿಸುತ್ತಿದೆ.

ಹಾಗೇ ಒಮ್ಮೆ ಜಗತ್ತಿನ ರಾಜಕೀಯ ಮತ್ತು ಸೈನಿಕ ಸಂಘರ್ಷಗಳತ್ತ ಕಣ್ಣು ಹಾಯಿಸಿದರೆ ನಿಮಗೆ ಅಮೆರಿಕದ ವಾಸ್ತವ ಮುಖದ ದರ್ಶನವಾಗುತ್ತದೆ. ಎಲ್ಲೆಲ್ಲಿ ಸೈನಿಕ ಸಂಘರ್ಷಗಳು ನಡೆಯುತ್ತಿವೆಯೋ ಅಲ್ಲೆಲ್ಲ ಅಮೆರಿಕದ ಹಾಜರಾತಿ ಕಂಡುಬರುತ್ತದೆ. ಎರಡು ದೇಶಗಳ ನಡುವೆ ರಾಜಕೀಯ ವಿವಾದವಿರಲಿ ಅಥವಾ ಗಡಿವಿವಾದವೇ ಇರಲಿ ಅಮೆರಿಕ ಅಲ್ಲಿ ಹಾಜರಾಗಿ ಬಿಡುತ್ತದೆ. ವಿಪರ್ಯಾಸ ಎಂದರೆ, ಎರಡೂ ರಾಷ್ಟ್ರಗಳಿಗೆ ‘ನಾನು ನಿಮ್ಮ ಹಿತೈಷಿ, ನಿಮ್ಮ ವಿವಾದವನ್ನು ಬಗೆಹರಿಸುವುದು ನಮ್ಮ ಆದ್ಯತೆ’ ಎಂದು ಅಮೆರಿಕ ಹೇಳಿಕೊಳ್ಳುತ್ತದೆ. ಹಾಗಾಗಿ, ಬಿಕ್ಕಟ್ಟಿನಲ್ಲಿ ಸಿಲುಕಿದ ರಾಷ್ಟ್ರಗಳು ಅಮೆರಿಕ ತಮ್ಮ ಬೆನ್ನಿಗಿದೆ ಎಂದೇ ನಂಬುತ್ತವೆ. ಆದರೆ, ಹೀಗೆ ಮಧ್ಯಪ್ರವೇಶ ಮಾಡಿ, ಶಾಂತಿಸ್ಥಾಪನೆ ಬಗ್ಗೆ ಮಾತಾಡುವ ಅಮೆರಿಕದ ನೈಜ ಉದ್ದೇಶ-ಕಚ್ಚಾಡುತ್ತಿರುವ ಎರಡೂ ರಾಷ್ಟ್ರಗಳು ಹೆಚ್ಚೆಚ್ಚು ಪ್ರಮಾಣದಲ್ಲಿ ತನ್ನಿಂದ ಶಸ್ತ್ರಾಸ್ತ್ರ ಖರೀದಿಸಬೇಕೆಂಬುದು. ವಿಚಿತ್ರವೆಂದರೆ-ಸ್ನೇಹಿತ, ವೈರಿ ಈ ಎರಡೂ ಪಾತ್ರವನ್ನು ಅಮೆರಿಕವೇ ನಿರ್ವಹಿಸುತ್ತದೆ. ಹಾಗಾಗಿಯೇ, ಶಸ್ತ್ರಾಸ್ತ್ರಗಳ ತಯಾರಿಕೆ ಮತ್ತು ಮಾರಾಟ ಪ್ರಮಾಣವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ಳುತ್ತಿದೆ.

ಈ ಬೆಳವಣಿಗೆಗಳ ಪರಿಣಾಮ ಶಸ್ತ್ರಾಸ್ತ್ರ ಖರೀದಿಯ ಪೈಪೋಟಿಯೂ ಹೆಚ್ಚಿದ್ದು, ಜಗದ ಆಗಸದಲ್ಲಿ ಸದಾ ಸಮರದ ಕಾಮೋಡ ಕವಿಯುತ್ತಿದೆ. ಆದರೆ, ಇದ್ಯಾವುದನ್ನು ಪರಿಗಣಿಸದ ಅಮೆರಿಕ ಬೇಕಾಬಿಟ್ಟಿಯಾಗಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದೆ. ಇದರಿಂದ ಅದರ ವಿದೇಶಾಂಗ ನೀತಿಯೂ ಪ್ರಭಾವಿತವಾಗಿದೆ. ಯಾವ ರಾಷ್ಟ್ರ ತನ್ನಿಂದ ಹೆಚ್ಚು ಶಸ್ತ್ರಾಸ್ತ್ರ ಖರೀದಿ ಮಾಡುತ್ತದೋ ಅದೇ ಅಮೆರಿಕದ ಮಿತ್ರರಾಷ್ಟ್ರ ಎನ್ನುವಂತಾಗಿದೆ. ಸಂಘರ್ಷದಲ್ಲಿ ತೊಡಗಿರುವ ಯಾವುದೇ ಎರಡು ರಾಷ್ಟ್ರಗಳಿಗೆ ಮೊದಲು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿ, ಆ ರಾಷ್ಟ್ರಗಳ ಖಜಾನೆ ಖಾಲಿಯಾಗುವಂತೆ ಮಾಡುವುದು. ಬಳಿಕ, ‘ಸಂಘರ್ಷ ಸಮರಗಳು ಶಾಂತಿಗೆ ಪೂರಕವಲ್ಲ’ ಎಂದು ಹೇಳುತ್ತ ಸಂಧಾನ ಮಾಡಿಸುವುದು. ಹೀಗೆ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಅಮೆರಿಕ ಕಳೆದ 50 ವರ್ಷಗಳ ಇತಿಹಾಸದಲ್ಲಿ ಬಹುತೇಕ ಎಲ್ಲ ಸಮರಾಂಗಣಗಳಲ್ಲಿ ತನ್ನ ಹಾಜರಾತಿ ತೋರಿಸಿದೆ. ಇದರಿಂದ ಯಾವುದೇ ರಾಷ್ಟ್ರ ಗೆಲ್ಲಲಿ, ಸೋಲಲಿ ಕೊನೆಗೆ ಗೆಲ್ಲುವುದು ಮಾತ್ರ ಅಮೆರಿಕ ಮತ್ತು ಅದರ ಹಿತವೇ.

ಈ ಎಲ್ಲ ಸಂಗತಿಗಳು ಊಹಾಪೋಹಗಳಲ್ಲ ಅಥವಾ ಅಲ್ಲೋ ಇಲ್ಲೋ ಚರ್ಚೆಗೀಡಾದದ್ದಲ್ಲ. ಸ್ಟಾಕ್​ಹೋಮ್ ಇಂಟರ್​ನ್ಯಾಶನಲ್​ನ ಪೀಸ್ ರಿಸರ್ಚ್ ಇನ್​ಸ್ಟಿಟ್ಯೂಟ್ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯು ಬೆಚ್ಚಿಬೀಳುವ ಹಲವು ಸಂಗತಿಗಳನ್ನು ಒಳಗೊಂಡಿದೆ. ಕಳೆದ ವರ್ಷ ವಿಶ್ವದ ಎಲ್ಲ ರಾಷ್ಟ್ರಗಳ ಸೇನಾವೆಚ್ಚದ ಪೈಕಿ ಶೇ.48ನ್ನು ಅಮೆರಿಕ ಖರ್ಚು ಮಾಡಿದೆ ಎಂದರೆ ಅಲ್ಲಿನ ಸ್ಥಿತಿ ಮತ್ತು ಶಸ್ತ್ರಾಸ್ತ್ರಗಳ ಪೈಪೋಟಿಯ ಪರಿ ಹೇಗಿರಬಹುದು ಎಂಬುದನ್ನು ಊಹಿಸಿಕೊಳ್ಳಬಹುದು. ಕಳೆದ ವರ್ಷ ವಿಶ್ವದ ಬಹುತೇಕ ರಾಷ್ಟ್ರಗಳ ಒಟ್ಟು ಸೇನಾ ವೆಚ್ಚ 1.34 ಲಕ್ಷ ಡಾಲರ್. ಈ ಪೈಕಿ ಅಮೆರಿಕ ಮಾಡಿರುವ ವೆಚ್ಚ 50 ಲಕ್ಷ ಡಾಲರ್ಕ್ಕಿಂತಲೂ ಹೆಚ್ಚು. ವರದಿಯ ಪ್ರಕಾರ, ಅಮೆರಿಕ ತನ್ನ ಒಟ್ಟು ಬಜೆಟಿನ ಶೇಕಡ 48ರಷ್ಟು ಸೇನಾಖರ್ಚುಗಳಿಗೆ ವೆಚ್ಚ ಮಾಡುತ್ತದೆ. ಉಳಿದ ರಾಷ್ಟ್ರಗಳತ್ತ ಗಮನಿಸಿದಾಗ ಸೇನಾವೆಚ್ಚದ ವಿಷಯದಲ್ಲಿ ಅವು ಅಮೆರಿಕದ ಸನಿಹಕ್ಕೂ ತಲುಪಲಾರವು. ಚೀನಾ ಮತ್ತು ಬ್ರಿಟನ್ ತಮ್ಮ ಬಜೆಟಿನ ಶೇ.5, ಫ್ರಾನ್ಸ್, ಜಪಾನ್ ಶೇ.4, ಜರ್ಮನಿ, ಇಟಲಿ, ಫ್ರಾನ್ಸ್ ಶೇ.3 ಮತ್ತು ಭಾರತ ಕೇವಲ ಶೇ.2ರಷ್ಟನ್ನು ಸೇನಾಖರ್ಚುಗಳಿಗೆ ವೆಚ್ಚ ಮಾಡುತ್ತವೆ. ಈ ಎಲ್ಲ ಪ್ರಮುಖ ರಾಷ್ಟ್ರಗಳ ಸೇನಾವೆಚ್ಚವನ್ನು ಒಟ್ಟು ಮಾಡಿದರೂ ಶೇ.34ನ್ನು ಮೀರುವುದಿಲ್ಲ. ಆದರೆ, ಅಮೆರಿಕ ಬಜೆಟ್​ನ ಶೇ.48ರಷ್ಟ್ರನ್ನು ರಕ್ಷಣೆ, ಶಸ್ತ್ರಾಸ್ತ್ರ ಖರೀದಿಗೆ ವೆಚ್ಚ ಮಾಡುತ್ತಿದೆ ಎಂದರೆ ಇಡೀ ಜಗತ್ತನ್ನೇ ಅದು ಮಾರುಕಟ್ಟೆ ಆಗಿಸಿಕೊಂಡಿರುವ ಪರಿಯನ್ನು ಅರ್ಥಮಾಡಿಕೊಳ್ಳಬಹುದು.

ಒಂದು ರಾಷ್ಟ್ರಕ್ಕೆ ಮತ್ತೊಂದು ರಾಷ್ಟ್ರದ ಕುರಿತಂತೆ ಭಯ ಮೂಡಿಸುವುದು, ಆ ರಾಷ್ಟ್ರದಿಂದ ನಿಮ್ಮ ಭದ್ರತೆಗೆ ಬೆದರಿಕೆ ಇದೆ ಎಂದು ನಂಬಿಸುವುದು ಆ ಬಳಿಕ ಅವುಗಳನ್ನು ಸಮರಸನ್ನದ್ಧವಾಗಿಸಲು ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವುದು-ಇದು ಅಮೆರಿಕ ಕೆಲ ವರ್ಷಗಳಿಂದ ಅನುಸರಿಸುತ್ತಿರುವ ಕಾರ್ಯತಂತ್ರ. ಈ ತಂತ್ರಕ್ಕೆ ಹಲವು ರಾಷ್ಟ್ರಗಳು ಗಾಳವಾಗಿದ್ದು, ಅಮೆರಿಕದ ಉತ್ಸಾಹವನ್ನು ಹೆಚ್ಚಿಸಿದೆ.

ಯುದ್ಧಭೀತಿಯಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಈ ಎರಡೂ ರಾಷ್ಟ್ರಗಳು, ಹಾಗೆಯೇ ಇಸ್ರೇಲ್​ನಿಂದ ಭಯಭೀತಗೊಂಡಿರುವ ಅರಬ್ ರಾಷ್ಟ್ರಗಳು ಅಮೆರಿಕದಿಂದ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿಸಿವೆ. ಇದರಿಂದ ಅಮೆರಿಕದ ಖಜಾನೆಯಂತೂ ನಿರಾಯಾಸವಾಗಿ ಭರ್ತಿಯಾಗುತ್ತಿದೆ. 2016ರಲ್ಲಿ ಅಮೆರಿಕ ವಿಶ್ವದ ಬೇರೆ-ಬೇರೆ ದೇಶಗಳಿಗೆ 16 ಮಿಲಿಯನ್ ಡಾಲರ್ ಮೊತ್ತದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿದೆ. ಈ ಮೊತ್ತ ಪ್ರಪಂಚಾದ್ಯಂತ ಮಾರಾಟವಾಗುವ ಶಸ್ತ್ರಾಸ್ತ್ರಗಳ ಮೊತ್ತದ ಶೇ.42ರಷ್ಟಿದೆ. ಸ್ವಾರಸ್ಯಕರ ಸಂಗತಿಯೆಂದರೆ, ಅಮೆರಿಕ ಶಸ್ತ್ರಾಸ್ತ್ರಗಳ ತಯಾರಿಕೆಗಷ್ಟೇ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿಲ್ಲ. ಎರಡು ರಾಷ್ಟ್ರಗಳ ನಡುವೆ ವಿವಾದ ಹುಟ್ಟುಹಾಕಿ ಅಲ್ಲಿ ತನ್ನ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಭಾರಿ ಮೊತ್ತವನ್ನೇ ಖರ್ಚು ಮಾಡುತ್ತಿದೆ. ಹಾಗಾಗಿ, ಅದು ಸದಾ ವಿವಾದ, ಸಂಘರ್ಷ, ಅಶಾಂತಿಗಳಿಗಾಗಿ ಹುಡುಕಾಟ ನಡೆಸುತ್ತದೆ. ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಯುಗ ಮುಗಿದು ಹೋಗಿದೆ. ಯಾವುದೇ ಸಣ್ಣ ರಾಷ್ಟ್ರವಿರಲಿ, ದೊಡ್ಡ ರಾಷ್ಟ್ರವಿರಲಿ ಅದು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೇ ಬಯಸುತ್ತದೆ ಎಂಬ ವಾಸ್ತವವನ್ನು ಕಂಡುಕೊಂಡಿರುವ ಅಮೆರಿಕ ಈ ‘ಅವಕಾಶ’ವನ್ನು ಹುಲುಸಾಗಿಯೇ ಬಳಸಿಕೊಳ್ಳುತ್ತಿದೆ. ಇನ್ನು, ಹೆಚ್ಚು-ಹೆಚ್ಚು ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಲು ಶ್ರೀಮಂತ ರಾಷ್ಟ್ರಗಳಿಂದಲೇ ಸಾಧ್ಯ. ಈ ನಿಟ್ಟಿನಲ್ಲಿ ಅಮೆರಿಕದ ಗಮನ ನೆಟ್ಟಿದ್ದು ಪ್ರಮುಖ ತೈಲೋತ್ಪನ್ನ ರಾಷ್ಟ್ರಗಳ ಮೇಲೆ. ತೈಲೋತ್ಪನ್ನ ರಾಷ್ಟ್ರಗಳು ಆ ಆದಾಯದ ಬಲದ ಮೇಲೆಯೇ ಐಷಾರಾಮಿ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದು, ಇದರ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳ ಸೌಧವನ್ನೇ ನಿರ್ವಿುಸಿಕೊಂಡಿವೆ. ತೈಲೋತ್ಪನ್ನ ರಾಷ್ಟ್ರಗಳ ನಡುವೆಯೇ ಆಂತರಿಕ ಬಿಕ್ಕಟ್ಟು, ಶೀತಲಸಮರ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿರುವ ಅಮೆರಿಕ ಅಲ್ಲಿ ತನ್ನ ವ್ಯಾಪಾರವನ್ನು ಚೆನ್ನಾಗಿಯೇ ಕುದುರಿಸಿಕೊಂಡಿದೆ.

ವಿಶ್ವದ ಬೇರೆ-ಬೇರೆ ರಾಷ್ಟ್ರಗಳಲ್ಲಿ 15 ಲಕ್ಷ ಅಮೆರಿಕನ್ ಸೈನಿಕರು ನಿಯೋಜಿತರಾಗಿದ್ದು, 6 ಸಾವಿರ ಸೇನಾನೆಲೆಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲೆಲ್ಲ ಶಾಂತಿಸ್ಥಾಪನೆಯ ಕನಸು ಬಿತ್ತಿದ ಅಮೆರಿಕ ಬೆಳೆದಿದ್ದು ಕ್ರೌರ್ಯ ಮತ್ತು ಹಿಂಸೆಯನ್ನೇ. ವಿಯೆಟ್ನಾಂ, ಕೊರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಕೂಡ ಶಾಂತಿಸ್ಥಾಪನೆಯ ಪ್ರಹಸನವನ್ನು ಈ ದೇಶ ಹೇಗೆ ನಡೆಸಿತು ಮತ್ತು ಅದರ ಪರಿಣಾಮ ಏನಾಯಿತು ಎಂಬುದು ಜಗತ್ತಿಗೆ ತಿಳಿದಿದೆ. ಕೊರಿಯಾದಲ್ಲಿ ನಡೆದ ಯುದ್ಧದಲ್ಲಿ 54,246 ಸೈನಿಕರು ಪ್ರಾಣ ಕಳೆದುಕೊಂಡಿದ್ದರೆ, ವಿಯೆಟ್ನಾಂನಲ್ಲಿ ಕಳೆದ 13 ವರ್ಷಗಳಲ್ಲಿ 58,256 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ವಿಶ್ವದ ಹಲವು ದೇಶಗಳಲ್ಲಿ ಪ್ರಾಣ ಕಳೆದುಕೊಂಡ ಅಮೆರಿಕನ್ ಸೈನಿಕರ ಸಂಖ್ಯೆಯೂ ಕಡಿಮೆಯೇನಿಲ್ಲ. ಆದರೆ, ಆ ಬಗ್ಗೆ ಅಮೆರಿಕ ತಲೆ ಕೆಡಿಸಿಕೊಳ್ಳುವುದಿಲ್ಲ. ಶಸ್ತ್ರಾಸ್ತ್ರ ಮಾರಾಟದಲ್ಲಿ ತಾನು ಚಾಂಪಿಯನ್ ಆಗಿ ಇರುವಷ್ಟು ಅವಧಿಯೂ ಆರ್ಥಿಕವಾಗಿ ತನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ಅದಕ್ಕಿದೆ. ಹೀಗಾಗಿ, ಅದು ಮಿತ್ರರನ್ನು ಶತ್ರುಗಳಾಗಿ, ಶತ್ರುಗಳನ್ನು ಮಿತ್ರರಾಗಿ ಮಾಡಿಕೊಳ್ಳುತ್ತದೆ. ಒಂದು ಕಾಲಕ್ಕೆ ಮಿತ್ರನಾಗಿದ್ದ ತಾಲಿಬಾನ್ ಈಗ ಅದರ ಪರಮಶತ್ರು! ಒಸಾಮಾ ಬಿನ್ ಲಾಡೆನ್​ನನ್ನು ‘ಕುಖ್ಯಾತ’ವಾಗಿ ಬೆಳೆಸಿದ ಅಮೆರಿಕ ಬಳಿಕ ಅದೇ ಲಾಡೆನ್​ನನ್ನು ಕೊಂದು ಹಾಕಿತು. ಈ ರಾಷ್ಟ್ರದ ತಂತ್ರಗಳು ಮತ್ತು ಕಾರ್ಯಸೂಚಿಯೇ ವಿಚಿತ್ರ. ಆದರೂ, ಅಮೆರಿಕದ ರಾಜತಾಂತ್ರಿಕರು, ಹಿರಿಯ ಅಧಿಕಾರಿಗಳು ದೇಶಕ್ಕೆ ನಿಷ್ಠರಾಗಿದ್ದಾರೆ. ಆ ದೇಶದ ಆಡಳಿತ ಕೈಗೊಳ್ಳುವ ಯಾವುದೇ ನಿರ್ಧಾರವನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ಹಾಗಾಗಿಯೇ, ಅಮೆರಿಕ ಯಾವುದೇ ಉತ್ಪನ್ನವನ್ನು ಸರಾಗವಾಗಿ ಮಾರ್ಕೆಟಿಂಗ್ ಮಾಡುತ್ತದೆ. ಆದರೆ, ಶಸ್ತ್ರಾಸ್ತ್ರಗಳ ವಿಷಯದಲ್ಲಿ ಅದು ತಪು್ಪ ಹೆಜ್ಜೆ ಅಷ್ಟೇ ಅಲ್ಲ ಅಪಾಯಕಾರಿ ನಡೆಯನ್ನು ಅನುಸರಿಸುತ್ತಿದ್ದು, ಕ್ರೌರ್ಯ ಬಿತ್ತಿ ಬೆಳೆದರೆ ಏನಾಗುತ್ತದೆ ಎಂಬುದಕ್ಕೆ ಪಾಕಿಸ್ತಾನದ ಉದಾಹರಣೆಯನ್ನೇ ನೋಡಬಹುದು.

ಇನ್ನಾದರೂ ಎಚ್ಚೆತ್ತುಕೊಂಡು ಶಾಂತಿಸ್ಥಾಪನೆ ನಿಟ್ಟಿನಲ್ಲಿ ಪ್ರಾಮಾಣಿಕ ಯತ್ನ ಮಾಡಿದರೆ ಭಯೋತ್ಪಾದನೆ ವಿರೋಧಿ ಹೋರಾಟ ಸೇರಿದಂತೆ ಇತರೆ ವಿಧ್ವಂಸಕ ಶಕ್ತಿಗಳ ವಿರುದ್ಧದ ಹೋರಾಟವೂ ಯಶಸ್ವಿಯಾದೀತು.

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

Leave a Reply

Your email address will not be published. Required fields are marked *