ನರಗುಂದ: ಹಾನಗಲ್ ಕುಮಾರ ಶಿವಯೋಗಿಗಳ ತತ್ವ ಸಿದ್ಧಾಂತಗಳನ್ನು ಅಕ್ಷರಶಃ ಪಾಲಿಸಿದ ಶಾಂತವೀರ ಪಟ್ಟಾಧ್ಯಕ್ಷರು ಈ ಶತಮಾನದ ಪುಣ್ಯ ಪುರುಷರು. ದೇಶ ಕಂಡ ಶ್ರೇಷ್ಠ ಸ್ವಾಮಿಗಳಾದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳನ್ನು ಗದುಗಿನ ತೋಂಟದಾರ್ಯಮಠಕ್ಕೆ ನೀಡಿದ ಕೀರ್ತಿ ಪಟ್ಟಾಧ್ಯಕ್ಷರಿಗೆ ಸಲ್ಲುತ್ತದೆ ಎಂದು ಉಣಕಲ್ ಸಿದ್ದಪ್ಪಜ್ಜನ ಮಠದ ಬಸಯ್ಯ ಹಿರೇಮಠ ಬಣ್ಣಿಸಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ, ಶ್ರೀ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶ್ರೀಮಠದ 368ನೇ ಮಾಸಿಕ ಶಿವಾನುಭವ, ಸಿಂದಗಿ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ 45ನೇ ಪುಣ್ಯ ಸ್ಮರಣೋತ್ಸವ ಮತ್ತು ಹೋಳಿ ಪದಗಳ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭವರೋಗ ವೈದ್ಯರಾಗಿದ್ದ ಪೂಜ್ಯರು ಭಕ್ತರ ಮುಖದರ್ಪಣದಲ್ಲಿ ಲಿಂಗವನ್ನು ಕಂಡ ಕಾರುಣ್ಯಮೂರ್ತಿಗಳು ಎಂದರು.
ಶಾಂತಲಿಂಗ ಶ್ರೀಗಳು ಮಾತನಾಡಿ, ಹಾನಗಲ್ ಕುಮಾರ ಶಿವಯೋಗಿಗಳು ಕಂಡ ಕನಸನ್ನು ಸಾಕಾರಗೊಳಿಸಿದ ಪಟ್ಟಾಧ್ಯಕ್ಷರು ಕನ್ನಡದ ಕುಲಗುರುಗಳನ್ನು ಕರುನಾಡಿಗೆ ಸಮರ್ಪಿಸಿ ಆ ಮೂಲಕ ಕೋಮು ಸೌಹಾರ್ದತೆಯನ್ನು ಗಟ್ಟಿಗೊಳಿಸಿದರು. ಸರ್ವರನ್ನೂ ಸಮಭಾವದಿಂದ ಕಂಡು ಈ ನಾಡಿನಲ್ಲಿ ಸಂಸ್ಕೃತಿ-ಸಂಸ್ಕಾರ ಬಿತ್ತಿದ ಮಹಾಮಹಿಮರು ಎಂದರು.
ಗ್ರಾಮದ ತಿಪ್ಪಣ್ಣ ನರಸಾಪೂರ, ಈರಪ್ಪ ಬದ್ನೂರ, ಶಿವನಪ್ಪ ಹಾದಿಮನಿ, ಹನಮಪ್ಪ ದಂಡಿನ ಅವರು ಹೋಳಿ ಹುಣ್ಣಿಮೆ ಪದಗಳನ್ನು ಹಾಡಿದರು. ನಿವೃತ್ತ ಉಪ ತಹಸೀಲ್ದಾರ್ ವಿ.ಜಿ. ಐನಾಪೂರ, ಹೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಶ್ವನಾಥ ಶಿರಹಟ್ಟಿಮಠ, ನಾಗಯ್ಯ ಶಿರಹಟ್ಟಿಮಠ, ಕಸಾಪ ಅಧ್ಯಕ್ಷ ಬಿ.ಸಿ. ಹನಮಂತಗೌಡ್ರ, ದಸಾಪ ಅಧ್ಯಕ್ಷೆ ಶೋಭಾ ಆಡಿನಿ, ವೀರಯ್ಯ ವಸ್ತ್ರದ, ಶಾಂತಪ್ಪ ಆಡಿನ, ಆರ್.ಬಿ. ಚಿನಿವಾಲರ ಉಪಸ್ಥಿತರಿದ್ದರು. ಆರ್.ಕೆ. ಐನಾಪೂರ ನಿರೂಪಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿದರು.
