ಶವ ಕೊಳೆಯುತ್ತಿದೆ, ಮೂಗು ಮುಚ್ಚಿ ತೆರಳಿ

ಭಟ್ಕಳ: ಗುತ್ತಿಗೆದಾರರ ಬಾಬು ಮೊಗೇರ ಶವ ಇಲ್ಲಿ ಕೊಳೆಯುತ್ತಿದೆ ಮೂಗು ಮುಚ್ಚಿ ತೆರಳಿ. ಇದು ರಾಜ್ಯದ ಪ್ರಸಿದ್ಧ ಕ್ಷೇತ್ರ ಮುರ್ಡೆಶ್ವರಕ್ಕೆ ತೆರಳುವ ರಸ್ತೆಯಲ್ಲಿ ಕಂಡು ಬರುವ ಫಲಕ!

ಅವೈಜ್ಞಾನಿಕ, ಅಪೂರ್ಣ ಕಾಮಗಾರಿ ಯಿಂದಾಗಿ ರೋಸಿಹೋದ ಸಾರ್ವಜನಿಕರು ಈ ರೀತಿ ಫಲಕ ಅಳವಡಿಸಿ ಆಕ್ರೋಶ ಹೊರಹಾಕಿದ್ದಾರೆ. ಮುರ್ಡೆಶ್ವರಕ್ಕೆ ತೆರಳುವ ರಸ್ತೆಯಲ್ಲಿ ಮಲೀನ ನೀರು ಹರಿಯುತ್ತಿದ್ದು, ಪ್ರವಾಸಿಗರು ಸೇರಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ನಿರ್ವಣವಾಗಿದೆ. ನಿತ್ಯ ಸಾವಿರಾರು ಪ್ರವಾಸಿಗರು ಮುರ್ಡೆಶ್ವರಕ್ಕೆ ಆಗಮಿಸುತ್ತಾರೆ. ಹಳೇ ರಸ್ತೆಗಳು ಕಿರಿದಾಗಿದ್ದವು. ಹೀಗಾಗಿ ನೂತನ ನಾಲ್ಕು ಪಥದ ರಸ್ತೆಗೆ ಮಾಜಿ ಶಾಸಕ ಮಂಕಾಳ ವೈದ್ಯ 15 ಕೋಟಿ ರೂ. ಅನುದಾನ ಒದಗಿಸಿದ್ದರು. ಪಿಡಬ್ಲ್ಯುಡಿ ಇಲಾಖೆ ಈ ಕಾಮಗಾರಿಯನ್ನು ಹೆದ್ದಾರಿ ಇಲಾಖೆಗೆ ಹಸ್ತಾಂತರಿಸಿತ್ತು. 2017ರ ಡಿಸೆಂಬರ್​ನಲ್ಲಿ ಕಾಮಗಾರಿ ಆರಂಭವಾಗಿದ್ದು, 2018ರ ಡಿಸೆಂಬರ್​ನಲ್ಲಿ ಮುಗಿಯಬೇಕಿತ್ತು. ಆದರೆ, ಮುಡೇಶ್ವರದ ಬಳಿಯಲ್ಲಿ ಸ್ಥಳೀಯರು ತಮ್ಮ ಜಾಗ ನೀಡದ ಹಿನ್ನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಆದರೆ, ಮುರ್ಡೆಶ್ವರದ ದೇವಸ್ಥಾನದ ಬಳಿ ಚಾಲನೆಯಲ್ಲಿದ್ದ ಚರಂಡಿ ಕಾಮಗಾರಿ ಪೂರ್ಣವಾಗದ ಕಾರಣ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಹೀಗಾಗಿ ದೇವಸ್ಥಾನಕ್ಕೆ ತೆರಳುವ ಭಕ್ತರು ಮಲೀನ ನೀರು ದಾಟಿ ಹೋಗಬೇಕಾಗಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು, ‘ಗುತ್ತಿಗೆದಾರರ ಬಾಬು ಮೊಗೇರ ಶವ ಇಲ್ಲಿ ಕೊಳೆಯುತ್ತಿದೆ ಮೂಗು ಮುಚ್ಚಿ ತೆರಳಿ’ ಎಂದು ಫಲಕ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಈ ಕಾಮಗಾರಿ ನಡೆಯುತ್ತಿದೆ. ಆದರೆ, ಸ್ಥಳೀಯ ಹೋಟೆಲ್, ಲಾಡ್ಜ್ ಹಾಗೂ ಕೆಲ ಮಳಿಗೆಗಳ ಮಲೀನ ನೀರು ಚರಂಡಿ ಹರಿ ಬಿಡುವ ಕಾರಣ ಚರಂಡಿ ಮತ್ತಷ್ಟು ಕಟ್ಟಿಕೊಂಡು ತ್ಯಾಜ್ಯ ರಸ್ತೆ ಮೇಲೆ ಹರಿಯುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಈಗಲಾದರೂ ಸೂಕ್ತ ಕ್ರಮಕೈಗೊಳ್ಳಿ ಎಂದು ಜನರು ಒತ್ತಾಯಿಸಿದ್ದಾರೆ.

ಚರಂಡಿಯಲ್ಲಿ ಒಂದೇ ಸಮನೆ ಹರಿದು ಬರುತ್ತಿರುವ ಮಲೀನ ನೀರಿನಿಂದ ಕಾಮಗಾರಿ ಮುಂದುವರಿಸಲು ತೊಡಕಾಗಿದೆ. ಒಂದಡೆ ಬ್ಲಾಕ್ ಮಾಡಿ ಕೆಲಸ ಆರಂಭಿದರೆ ಇನ್ನೊಂದೆಡೆ ಹೊಲಸು ನೀರು ಹರಿಯುತ್ತದೆ. ನೀರು ಹೋಗುವ ಚರಂಡಿಯಲ್ಲಿ ಹೊಟೇಲ್ ಹಾಗೂ ಲಾಡ್ಜ್​ಗಳ ಮಲೀನ ನೀರು ಬಿಡಲಾಗುತ್ತಿದೆ. ಹೀಗಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಹಿರಿಯ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.

| ಮಹೇಶ ನಾಯ್ಕ ಎಇಇ, ನ್ಯಾಶನಲ್ ಹೈವೆ, ಭಟ್ಕಳ