ಶರಾವತಿ ಹಿನ್ನೀರು ಈಜಿದ 3 ವರ್ಷ 8 ತಿಂಗಳಿನ ಪೋರಿ; 1 ತಾಸಿನಲ್ಲಿ 1 ಕಿ.ಮೀ. ಈಜಿ ದಾಖಲೆ!

ಸಾಗರ: ಶರಾವತಿ ಹಿನ್ನೀರಿನ ಆಳ, ಉದ್ದ ಅಳತೆ ಮಾಡುವುದು ಸಾಧ್ಯವಿಲ್ಲ. ಏಕೆಂದರೆ ಈ ನೀರಿನಲ್ಲಿ ತೋಟ, ಗದ್ದೆ, ಸೇತುವೆ, ರಸ್ತೆ, ಹೀಗೆ ಊರಿಗೆ ಊರೇ ಮುಳುಗಿದೆ. ಇಲ್ಲಿ ಈಜಿ ದಡ ಸೇರುವುದು ಸುಲಭದ ಮಾತಲ್ಲ. ಕೇವಲ 3 ವರ್ಷ 8 ತಿಂಗಳಿನ ಕುವರಿಯೊಬ್ಬಳು ಒಂದು ತಾಸಿನಲ್ಲಿ ಒಂದು ಕಿ.ಮೀ. ಈಜಿ ದಾಖಲೆ ನಿರ್ವಿುಸಿದ್ದಾಳೆ.

ಹೌದು, ಇದೆಲ್ಲ ನಡೆದಿರುವುದು ಶರಾವತಿ ಹಿನ್ನೀರಿನ ಹಸಿರುಮಕ್ಕಿಯಲ್ಲಿ. ಸಾಗರ-ಹೊಸನಗರ ದಡಕ್ಕೆ ಸಂಪರ್ಕವಾಗಿರುವ ಶರಾವತಿ ಹಿನ್ನೀರಿನಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಗೆ ಈಜಲು ಆರಂಭಿಸಿದ ಕಿಪ್ಪಡಿಯ ಮಿಥಿಲಾ ಎಂಟು ಗಂಟೆಗೆ ಹಸಿರುಮಕ್ಕಿಯ ಮತ್ತೊಂದು ದಡವನ್ನು ಈಜಿ ಸೇರಿದಳು.

ನೀರಿನಲ್ಲಿಯೆ ವಿವಿಧ ಆಸನ ಪ್ರದರ್ಶನ:ಮಿಥಿಲಾಳನ್ನು ಹಿಂಬಾಲಿಸುತ್ತಿದ್ದ 20 ಜನರ ತಂಡ ನೋಡ ನೋಡುತ್ತಿದ್ದಂತೆ ಆಕೆ ಮೀನಿನಂತೆ ಈಜಿದಳು. ನೀರಿನಲ್ಲಿಯೆ ಪದ್ಮಾಸನ ಹಾಕಿ ಕುಳಿತಳು. ಜತೆಯಲ್ಲಿ ವಜ್ರಾಸನ, ಅಷ್ಟೂ ಸಾಲದಂತೆ ನೀರಿನಲ್ಲಿ ತೇಲುತ್ತಲೇ ಶವಾಸನದ ಭಂಗಿಯಲ್ಲಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದಳು. ಈಕೆಯ ಮಹತ್ವಾಕಾಂಕ್ಷೆ, ಸಮಚಿತ್ತ, ಧೈರ್ಯ ನೆರೆದಿದ್ದ ಈಜುಗಾರರನ್ನೆಲ್ಲ ಮಂತ್ರಮುಗ್ಧಗೊಳಿಸಿತು. ದಡ ಸೇರುವ ಹೊತ್ತಿಗೆ ಆಕೆ ಎಂದಿನಂತೆ ಸಂತಸದಲ್ಲಿದ್ದಳು. ಈಜುಗಾರರು ಬಣ್ಣ ಬಣ್ಣದ ಬಲೂನುಗಳನ್ನು ಆಕೆಗೆ ಕೊಟ್ಟು ಸ್ವಾಗತಿಸಿದರು. ಸಾಗರದ ಜಲಯೋಗ ಸಂಸ್ಥೆ ಕಳೆದ ಕೆಲವು ವರ್ಷಗಳಿಂದ ಸಾಗರ ಸುತ್ತಮುತ್ತಲಿನ ಹಳ್ಳಿಗಳಲ್ಲಿರುವ ಕೆರೆ, ಹಿನ್ನೀರು ಮುಂತಾದ ಪ್ರದೇಶಗಳಲ್ಲಿ ಊರಿನ ಜನರನ್ನು ನೀರಿಗಿಳಿಸಿ ಈಜು ಕಲಿಸಿ ಜಲಯೋಗ ಮಾಡುವ ಕಾರ್ಯಕ್ರಮವನ್ನು ಪ್ರಚುರಪಡಿಸುತ್ತಿದೆ.

ಎರಡೂವರೆ ವರ್ಷದಲ್ಲೇ ಈಜು ಕಲಿಕೆ: ಈ ತಂಡದ ಮುಖ್ಯಸ್ಥ ಹರೀಶ್ ನವಾಥೆ, ರಾಜ್ಯದ ಇತಿಹಾಸದಲ್ಲಿಯೆ 3 ವರ್ಷ 8 ತಿಂಗಳ ಕುವರಿಯೊಬ್ಬಳು ಒಂದು ಗಂಟೆಯಲ್ಲಿ ಶರಾವತಿ ಹಿನ್ನೀರಿನಲ್ಲಿ ಈಜಿ ಸುದ್ದಿ ಮಾಡಿದ್ದಾಳೆ. ಆರಂಭದಲ್ಲಿ ಇವಳಿಗೆ 2 ವರ್ಷ 6 ತಿಂಗಳಿರುವಾಗ ಈಜು ಕಲಿಸಿದೆವು. ಇವರ ತಂದೆ ಗಿರೀಶ್, ತಾಯಿ ವಿನುತಾ ಮತ್ತು ಕುಟುಂಬದವರು, ಗ್ರಾಮಸ್ಥರು ಅವಳ ಜತೆಯಲ್ಲಿಯೆ ಕಿಪ್ಪಡಿಯ ಹಿನ್ನೀರಿನಲ್ಲಿ ಈಜುತ್ತಾ ತರಬೇತಿ ನೀಡಿದರು. ಆರಂಭದಲ್ಲಿ ನಮ್ಮ ಸಂಘಟನೆಯಿಂದ ಆಕೆಗೆ ನೀಡಿದ ತರಬೇತಿ ಇಂದು ಫಲವಂತಿಕೆ ಕಂಡಿದೆ. ನಮ್ಮ ಸಂಘಟನೆ ಇಂತಹ ಶಿಬಿರಗಳನ್ನು ನಡೆಸಿ ಯುವಜನರಲ್ಲಿ ಜಲಯೋಗದ ಬಗ್ಗೆ ಅರಿವು ಮೂಡಿಸುತ್ತಿದೆ ಎನ್ನುತ್ತಾರೆ.

ಹಿನ್ನೀರಿನಲ್ಲಿ ಈಜುವುದು ಸುಲಭವಲ್ಲ:ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಈ ಕಾರ್ಯಕ್ರಮದ ಆಯೋಜನೆಗೆ ಸಾಥ್ ನೀಡಿದ್ದ ಹಕ್ಕಲಳ್ಳಿ ಹೆರಿಟೇಜ್ ಹೋಮ್ ಮುಖ್ಯಸ್ಥ ಎಂ.ಸಿ.ಗಂಗಾಧರಗೌಡ, ಶರಾವತಿ ಹಿನ್ನೀರು ಒಂದು ಸುಂದರ ಪ್ರವಾಸಿ ತಾಣ. ಇಲ್ಲಿಯ ನಡುಗಡ್ಡೆಗಳು ಜನರನ್ನು ಆಕರ್ಷಿಸುತ್ತವೆ. ಮಿಥಿಲಾ ಅವರ ತಂದೆ- ತಾಯಿ ಮಗಳಿಗೆ ಚಿಕ್ಕ ವಯಸ್ಸಿನಲ್ಲಿಯೆ ಈಜು ಕಲಿಸಿದ್ದಾರೆ. ಊರಿನ ಗ್ರಾಮಸ್ಥರೆಲ್ಲರೂ ಈಕೆಯ ಅಗಾಧ ಪ್ರತಿಭೆಗೆ ಬೆನ್ನು ತಟ್ಟಿ ಸಹಕರಿಸುತ್ತಿದ್ದಾರೆ. ಶರಾವತಿ ಹಿನ್ನೀರಿನಲ್ಲಿ ಈಜುವುದು ಸುಲಭದ ಮಾತಲ್ಲ. ಆಳ ಅಗಲ ಗೊತ್ತಿದ್ದವರೆ ಇಲ್ಲಿ ಈಜಲು ಭಯ ಪಡುತ್ತಾರೆ. ಅಂತಹುದರಲ್ಲಿ ಹಸುಳೆ ಇಂತಹ ಸಾಧನೆ ಮಾಡಿರುವುದು ಭವಿಷ್ಯದಲ್ಲಿ ಒಳ್ಳೆಯ ದಿನಗಳು ಆಕೆಗೆ ಬರಲಿವೆ ಎಂದರು. ಒಟ್ಟು 20 ಜನರ ತಂಡ ಮಿಥಿಲಾಳ ಈಜಿಗೆ ಸಾಥ್ ನೀಡಿದರು.

One Reply to “ಶರಾವತಿ ಹಿನ್ನೀರು ಈಜಿದ 3 ವರ್ಷ 8 ತಿಂಗಳಿನ ಪೋರಿ; 1 ತಾಸಿನಲ್ಲಿ 1 ಕಿ.ಮೀ. ಈಜಿ ದಾಖಲೆ!”

  1. Tumba.. Hemme enisuttade… Intha sadane madida hudugige nanna abhinandanegalu… Avlige Spoorthi tumbida kutumbadavaru kooda great…..

Comments are closed.