ಶರಣರ ನಾಡಿನಲ್ಲಿ ನಡೆದಾಡಿದ ದೇವರು

ಬಾಬುರಾವ ಯಡ್ರಾಮಿ ಕಲಬುರಗಿ
ನಾಡಿನ ಅಧ್ಯಾತ್ಮದ ಸಿರಿಶಿಖರ, ನಡೆದಾಡುವ ದೇವರಾದ ತುಮಕೂರು ಸಿದ್ಧ್ದಗಂಗಾ ಮಠದ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗೂ ಕಲಬುರಗಿ ಜಿಲ್ಲೆಗೆ ಅವಿನಾಭಾವ ಸಂಬಂಧವಿತ್ತು. ಶರಣ ಜನರಿಗೆ ವಿಶ್ವಗುರು ಬಸವೇಶ್ವರರ ದರ್ಶನ ಮಾಡಿಸುವ ಮೂಲಕ ಕಾಯಕ ಸಂಸ್ಕೃತಿಯನ್ನು ಇನ್ನಷ್ಟು ಬಲಗೊಳಿಸುವ ಪ್ರಯೋಗವನ್ನು ಪೂಜ್ಯರು ಮಾಡಿದ್ದು ಅವಿಸ್ಮರಣೀಯ.

ಸ್ವತಃ ಕಾಯಕ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದ ಪೂಜ್ಯರು, ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪ್ರಾಧ್ಯಾಪಕರು, ಶಿಕ್ಷಕರು, ರಂಗಾಸಕ್ತರನ್ನು ಒಳಗೂಡಿಸಿ ಬಸವ ತತ್ವ ಪ್ರಚುರಪಡಿಸಲು ಜಗಜ್ಯೋತಿ ಬಸವೇಶ್ವರ ನಾಟಕ ಮಂಡಳಿ ಹುಟ್ಟು ಹಾಕುವ ಮೂಲಕ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆ ಸೇರಿ ನಾಡಿನ ಉದ್ದಗಲಕ್ಕೂ ಪ್ರಯೋಗಗಳನ್ನು ಮಾಡಿಸಿದ್ದರು. ಕಲಬುರಗಿ ಜಿಲ್ಲೆಯಲ್ಲಿ 2005ರಲ್ಲಿ ತಂಡದೊಂದಿಗೆ ಖುದ್ದು ಸಿದ್ದಗಂಗಾ ಶ್ರೀ ಆಗಮಿಸಿದ್ದು ಐತಿಹಾಸಿಕ ಮತ್ತು ವಿಶೇಷ.

ಚಿಂಚೋಳಿ ತಾಲೂಕಿನ ನಿಡಗುಂದಾ ಕಂಚಾಳಕುಂಟಿ ಮಠಕ್ಕೆ ಆಗಮಿಸಿದ ಡಾ. ಶಿವಕುಮಾರ ಸ್ವಾಮಿಗಳು.

ಜೇವರ್ಗಿ ತಾಲೂಕಿನ ಆಲೂರ, ಚಿಂಚೋಳಿ ತಾಲೂಕಿನ ನಿಡಗುಂದಾ ಕಂಚಾಳಕುಂಟಿ ನಂದೀಶ್ವರ ದೇವಸ್ಥಾನ, ಚಿತ್ತಾಪುರ ತಾಲೂಕಿನ ಸುಕ್ಷೇತ್ರ ನಾಲವಾರ ಇತರ ಕಡೆ ಪ್ರಯೋಗ ನಡೆಸಲಾಯಿತು. ಇಡೀ ನಾಟಕ ಮುಗಿಯುವವರೆಗೆ ಭಕ್ತರಗೊಂದಿಗೆ ಕುಳಿತು ವೀಕ್ಷಿಸುತಿದ್ದುದು ಸಿದ್ಧಗಂಗಾ ಶ್ರೀಗಳ ಅವಿಸ್ಮರಣೀಯ ಕ್ಷಣಗಳನ್ನು ನೆನಪಿಸುವಂತಿದೆ.

ಹತ್ತಾರು ಸಲ ಕಲಬುರಗಿಗೆ ಭೇಟಿ ನೀಡಿದ್ದ ಪೂಜ್ಯರು, ತಮ್ಮ ಆಗಾಧ ಶಕ್ತಿ ಮೂಲಕ ಶಿವಾಚಾರ ಹಾಗೂ ಸದಾಚಾರಗಳನ್ನು ತುಂಬುವ ಪ್ರಯತ್ನ ಮಾಡಿದ್ದು ಅಮೋಘ. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನ, ನಾಲವಾರ, ಅಬ್ಬೆತುಮಕೂರು, ಕಂಚಾಳಕುಂಠಿ, ಜಿಡಗಾ, ಸುಲಫಲ, ಆಲೂರಿನ ಕೆಂಚಬಸವೇಶ್ವರ ಸಂಸ್ಥಾನ ಹೀಗೆ ಹತ್ತಾರು ಮಠಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈ ಮೂಲಕ ಕಲ್ಪತರು ಶರಣರ ನಾಡಿಗೂ ಸಂಬಂಧದ ಬೆಸುಗೆಯನ್ನು ಇನ್ನಷ್ಟು ಗಟ್ಟಿಸಿಗೊಳಿಸಿದ ಶ್ರೇಷ್ಠ ಧಾರ್ಮಿಕರ ನಾಯಕ.

ಸಿದ್ಧಗಂಗಾ ಮಠದಲ್ಲಿ ಶಿಕ್ಷಣ ಕಲಿತವರು ಸೇರಿ ಹಳೆಯ ವಿದ್ಯಾರ್ಥಿ ಸಂಘ ಹುಟ್ಟು ಹಾಕಿ ಸಮಾಜಮುಖಿ ಕಾರ್ಯ ಮಾಡುತ್ತ ಶ್ರೀಗಳನ್ನು ಚಿರಸ್ಥಾಯಿಯಾಗಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.

ಶರಣಬಸವೇಶ್ವರ ಪುಸ್ತಕ ಪ್ರಕಟಣೆ ಕಲ್ಯಾಣ ಮಂಟಪಕ್ಕೆ ಭೂಮಿಪೂಜೆ

11 ವರ್ಷದ ಹಿಂದೆ ಭಾಲ್ಕಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಕಲಬುರಗಿ ಸುಲಫಲ ಮಠಕ್ಕೆ ಭೇಟಿ ನೀಡಿ ಭಕ್ತರಿಗೆ ದರ್ಶನ ನೀಡಿದ್ದರು. ಕಲಬುರಗಿ ಸಾರ್ವಜನಿಕ ಉದ್ಯಾನದಲ್ಲಿರುವ ವೀರಶೈವ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಸಿದ್ಧಗಂಗಾ ಶ್ರೀ ನಡೆಸಿದ್ದು ವಿಶೇಷ. ಅವರೊಂದಿಗೆ ಸುತ್ತೂರು ಇತರ ಶ್ರೀಗಳಿದ್ದರು ಎನ್ನುತ್ತಾರೆ ಹಿರಿಯರು. ಸಿದ್ಧಗಂಗಾ ಮಠದ ಪ್ರಕಾಶನದಿಂದ ಹಲವು ದಾರ್ಶನಿಕರ ಕುರಿತು ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಅದರಲ್ಲಿ ಕಲಬುರಗಿ ಮಹಾದಾಸೋಹಿ ಶರಣಬಸವೇಶ್ವರ ಕುರಿತು ಸಹ ಕೃತಿ ಪ್ರಕಟಿಸಿದ್ದಾರೆ. ಲಿಂಗೈಕ್ಯ ದೊಡ್ಡಪ್ಪ ಅಪ್ಪ ಹಾಗೂ ಹಾಲಿ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಕುರಿತು ಮಾಹಿತಿಯ ಗ್ರಂಥ ಪ್ರಕಟಿಸಿದ್ದರು.

ಶೋಕ ಸಾಗರದಲ್ಲಿ ಕಲಬುರಗಿ ಭಕ್ತರು

ಸಿದ್ಧಗಂಗಾ ಮಠದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿರುವುದು ಕಲಬುರಗಿ ಭಕ್ತರನ್ನು ದುಃಖದಲ್ಲಿ ಮುಳುಗುವಂತೆ ಮಾಡಿದೆ. ಶ್ರೀಗಳ ಜೀವನವೇ ದೊಡ್ಡ ಆದರ್ಶ. ಧರ್ಮ, ಸಮಾಜ, ಜನಸೇವೆಯಲ್ಲೇ ಸಾರ್ಥಕತೆ ಕಂಡಿದ ಮಹಾ ಸಂತ. ಯಾವುದೇ ಆಡಂಬರವಿಲ್ಲದೆ ಮಠಾಧೀಶರೊಬ್ಬರು ಎಷ್ಟೊಂದು ಜನಕಲ್ಯಾಣ ಕೆಲಸ ಮಾಡಬಹುದು ಎಂಬುದಕ್ಕೆ ಇವರಂಥ ಶ್ರೇಷ್ಠ ನಿದರ್ಶನ ಮತ್ತೊಂದಿಲ್ಲ. ಶ್ರೀಗಳು ಕೈಗೊಂಡ ಕೆಲಸಗಳನ್ನು ನೆನೆಸಿ ಭಕ್ತ ಸಮೂಹ ಕಣ್ಣೀರಿಡುತ್ತಿದೆ. ಸಿದ್ಧಗಂಗಾ ಹಳೆಯ ವಿದ್ಯಾರ್ಥಿ ಹಾಗೂ ಹಿತೈಷಿಗಳ ಸಂಘದ ನೇತೃತ್ವದಲ್ಲಿ ಬಸವೇಶ್ವರ ಪ್ರತಿಮೆ ಆವರಣದಲ್ಲಿ ನುಡಿಗೌರವ ಸಭೆ ನಡೆಸಿ `ಮತ್ತೆ ಹುಟ್ಟಿ ಬರಲಿ ಆ ಮಹಾ ಚೇತನ’ ಎಂದು ಪ್ರಾರ್ಥಿಸಿದರು. ಸಿದ್ಧಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಓದಿರುವ ವಿದ್ಯಾರ್ಥಿಗಳ ದೊಡ್ಡ ಪಡೆಯೇ ಇಲ್ಲಿದೆ. ಶ್ರೀಗಳ ಶಿವೈಕ್ಯ ಸುದ್ದಿ ತಿಳಿಯುತ್ತಿದ್ದಂತೆ ಕಂಬನಿ ಮಿಡಿದರು. ವಾಟ್ಸ್ ಆ್ಯಪ್, ಫೇಸ್ಬುಕ್ ಇತರ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಗಳ ಫೋಟೋ, ಜೀವನ, ಸಾಧನೆ ಮತ್ತು ನುಡಿಮುತ್ತುಗಳೇ ಹರಿದಾಡಿದವು. ಅಪಾರ ಸಂಖ್ಯೆಯ ಅನುಯಾಯಿಗಳ ಡಿಪಿಗಳಲ್ಲಿ ಶ್ರೀಗಳೇ ರಾರಾಜಿಸಿದರು. ಶ್ರೀಗಳ ಅಗಲಿಕೆಗೆ ಜಿಲ್ಲೆ ಪ್ರಮುಖ ಮಠಾಧೀಶರು, ರಾಜಕಾರಣಿಗಳು, ಜನಪ್ರತಿನಿಧಿಗಳು, ಜನಸಾಮಾನ್ಯರು ಸಂತಾಪ ಸೂಚಿಸಿದ್ದು, ವಿವಿಧೆಡೆ ಶ್ರದ್ಧಾಂಜಲಿ ಸಭೆ, ನುಡಿನಮನ ನಡೆದವು.

ಅಭಿನವ ಬಸವಣ್ಣನಿಗೆ ಭಾರತ ರತ್ನ ಕೊಡಲಿ

21ನೇ ಶತಮಾನದ ಅಭಿನವ ಬಸವಣ್ಣ ಎಂದು ಕರೆಸಿಕೊಂಡಿರುವ ಸಿದ್ಧಗಂಗಾ ಮಠದ ಶಿವೈಕ್ಯರಾದ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗೆ ಕೇಂದ್ರ ಸರ್ಕಾರ ತಕ್ಷಣವೇ ಭಾರತ ರತ್ನ ಪ್ರಶಸ್ತಿ ಘೋಷಿಸಬೇಕು. ಈ ಮೂಲಕ ಪ್ರಶಸ್ತಿ ಘನತೆ ಹೆಚ್ಚಿಸುವ ಕೆಲಸ ಮಾಡಲಿ ಎಂದು ಶ್ರೀಶೈಲ ಸಾರಂಗಧರ ಮಠದ ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಜಾತಿ, ಮತ, ಭೇದವಿಲ್ಲದೆ ಎಲ್ಲರಿಗೂ ಶಿಕ್ಷಣದ ಮೂಲಕ ಮಹತ್ವದ ಕಾಯಕ ಮಾಡಿದ್ದಾರೆ. ಅವರು 111 ವರ್ಷ ಜೀವಿಸುವ ಮೂಲಕ ನಮ್ಮೆಲ್ಲರಿಗೂ ಅತ್ಯಮೂಲ್ಯ ಮಾರ್ಗದರ್ಶನ ಮಾಡಿದ್ದಾರೆ ಎಂದರು. 11 ವರ್ಷದ ಹಿಂದೆ ಭಾಲ್ಕಿಗೆ ಹೋಗುವಾಗ ಸುಲಫಲ ಮಠಕ್ಕೆ ಭೇಟಿ ನೀಡಿದ್ದರು. ಅವರು ವಿಶ್ವದ 8ನೇ ಅದ್ಭುತವಾಗಿದ್ದರು. ಹೀಗಾಗಿ ಕೂಡಲೇ ಕೇಂದ್ರ ಸರ್ಕಾರ ತುರ್ತು ಸಂಪುಟ ಸಭೆ ನಡೆಸಿ ನಡೆದಾಡುವ ದೇವರು ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಘೋಷಿಸಬೇಕು ಎಂದು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹಕ್ಕೊತ್ತಾಯ ಮಂಡಿಸಿದರು.