ಶರಣಬಸವೇಶ್ವರ ಜಾತ್ರಾ ಮಹೋತ್ಸವ 24ಕ್ಕೆ ಆರಂಭ, 25ಕ್ಕೆ ರಥೋತ್ಸವ

ಕಲಬುರಗಿ: ಶ್ರೀ ಶರಣಬವೇಶ್ವರರ 197ನೇ ಪುಣ್ಯತಿಥಿ ಮತ್ತು ಪೀಠಾರೋಹಣ ಸ್ಮರಣಾರ್ಥ ಮಹಾದಾಸೋಹ ಯಾತ್ರಾ ಮಹೋತ್ಸವ 24ರಿಂದ ಶುರುವಾಗಲಿದ್ದು, 25ರಂದು ಸಂಜೆ 6ಕ್ಕೆ ಭವ್ಯ ರಥೋತ್ಸವ ನಡೆಯಲಿದೆ ಎಂದು ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಹೇಳಿದರು.

24ರಂದು ಸಂಜೆ 6ಕ್ಕೆ ಉಚ್ಚಾಯಿ ಕಾರ್ಯಕ್ರಮ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ಸಂಸ್ಥಾನ ಮಹಾದಾಸೋಹ ಭಂಡಾರಿ ಶರಣಬಸವರ 187ನೇ ಮಹಾದಾಸೋಹ ಯಾತ್ರಾ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ಶಿವಾನುಭವ ಉಪನ್ಯಾಸ ಮಾಲಿಕೆ, ವಿಶೇಷ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಪೂಜ್ಯ ಅಪ್ಪ ಹೇಳಿದ್ದಿಷ್ಟು. ಡಾ.ಶರಣಬಸವಪ್ಪ ಅಪ್ಪ ವಿರಚಿತ ಅಂತರದೃಷ್ಟಿ ಕುರಿತು ವಿಶೇಷ ಉಪನ್ಯಾಸ ಮಾಲಿಕೆ 21ರಿಂದ 26ರವರೆಗೆ ನಿತ್ಯ ಸಂಜೆ 5ರಿಂದ 8ರವರೆಗೆ ನಡೆಯಲಿವೆ. 21ರಂದು ಶರಣಬಸವೇಶ್ವರರ ಜನನ, ವಿದ್ಯಾಭ್ಯಾಸ, ದೀಕ್ಷೆ ಕುರಿತು ಡಾ.ಸುಮಂಗಲಾ ರೆಡ್ಡಿ, ಸಾಮಾಜಿಕ ಆಯಾಮದ ಅಂತರದೃಷ್ಟಿ ಕುರಿತು ಡಾ.ಶಿವರಾಜ ಶಾಸ್ತ್ರಿ ಹೆರೂರ್ ಉಪನ್ಯಾಸ ನೀಡಲಿದ್ದಾರೆ. ಡಾ.ಎಂ.ಎಸ್.ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರೊ.ರೇವಯ್ಯ ವಸ್ತ್ರದಮಠ, ಪ್ರೊ.ಎಂ.ಎಸ್.ಪಾಟೀಲ್, ಡಾ.ಸೀಮಾ ಪಾಟೀಲ್, ಡಾ.ಛಾಯಾ ಭರತನೂರ, ಡಾ.ಕಲಾವತಿ ದೊರೆ, ಕವಿತಾ ಮಠಪತಿ, ಷಣ್ಮುಖ ಪಾಟೀಲ್, ಚೆನ್ನಬಸವಣ್ಣ, ಚೆನ್ನಮ್ಮ ಹಾಗೂ ಸಂಗೀತ ಅಕಾಡೆಮಿ ಸದಸ್ಯರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಡೀನ್ ಡಾ.ಲಿಂಗರಾಜ ಶಾಸ್ತ್ರೀ ಜಾತ್ರೆಯ ಕುರಿತು ಒಟ್ಟಾರೆ ಮಾಹಿತಿ ಒದಗಿಸಿದರು. ಶರಣಬಸವ ವಿವಿ ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಡಾ.ಶಿವರಾಜ ಶಾಸ್ತ್ರೀ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ್, ಕೃಪಾಸಾಗರ ಗೊಬ್ಬುರ ಇತರರು ಇದ್ದರು.

ಶರಣಬಸವರ ಮಹಾಯಾತ್ರೆ

22ರಂದು ಶರಣಬಸವರ ಗೃಹಸ್ಥಾಶ್ರಮ, ಕೃಷಿ, ಕಾಯಕ, ದಾಸೋಹ ಕುರಿತು ಪ್ರೊ.ಪುಟ್ಟಮಣಿ ದೇವಿದಾಸ, ಆಧ್ಯಾತ್ಮಿಕ ಚಿಂತನೆಯ ಅಂತರದೃಷ್ಟಿ ಕುರಿತು ಡಾ.ನೀಲಾಂಬಿಕಾ ಶೇರಿಕಾರ ಉಪನ್ಯಾಸ ನೀಡಲಿದ್ದು, ಡಾ.ಎಸ್.ಜಿ.ಡೊಳ್ಳೇಗೌಡರ ಅಧ್ಯಕ್ಷತೆ ವಹಿಸಲಿದ್ದಾರೆ. 23ರಂದು ಅರಳಗುಂಡಿಗೆಯಿಂದ ಶರಣಬಸವರ ಮಹಾಯಾತ್ರೆ ಕುರಿತು ಪ್ರೊ.ಕ್ಷೇಮಲಿಂಗ ಬಿರಾದಾರ, ಅಂತರದೃಷ್ಟಿ, ಶೈಕ್ಷಣಿಕ ಚಿಂತನೆ ಕುರಿತು ಡಾ.ವೆಂಕಣ್ಣ ಡೊಣ್ಣೆಗೌಡ್ರು ಉಪನ್ಯಾಸ ನೀಡಲಿದ್ದಾರೆ. ಡಾ.ಡಿ.ಟಿ.ಅಂಗಡಿ ಅಧ್ಯಕ್ಷತೆ ವಹಿಸಲಿದ್ದಾರೆ.