ಶತಮಾನದ ಸಂಭ್ರಮದಲ್ಲಿ ವಿಜಯಪುರ ಡಿಸಿಸಿ ಬ್ಯಾಂಕ್

ಇಂದಿನ ಆರ್ಥಿಕ ಪರಿಸ್ಥಿತಿ, ಜಾಗತಿಕ ಮಟ್ಟದ ಹಣದುಬ್ಬರ, ರೂಪಾಯಿ ಮೌಲ್ಯ ಕುಸಿತ ಮುಂತಾದವು ಬ್ಯಾಂಕ್​ಗಳಿಗೆ ಸವಾಲಾಗಿವೆೆ. ಅವುಗಳ ಹೊರತಾಗಿಯೂ ಬ್ಯಾಂಕ್​ಗಳು ಗ್ರಾಹಕಸ್ನೇಹಿಯಾಗಿ, ರೈತನ ಜೀವನಾಡಿಗಳಾಗಿ ಕೆಲಸ ನಿರ್ವಹಿಸುತ್ತಿವೆ. ಸಣ್ಣ ಕೈಗಾರಿಕೆ, ಹೈನುಗಾರಿಕೆ, ಕೃಷಿ ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್​ಗಳು ನಬಾರ್ಡ್ ಸಹಭಾಗಿತ್ವದಲ್ಲಿ ಸೇವೆ ಸಲ್ಲಿಸುತ್ತಿವೆ. ಇದೇ ಹಾದಿಯಲ್ಲಿ ಸಾಗಿ ಬಂದಿರುವ ವಿಜಯಪುರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ಗೆ ಈಗ ಶತಮಾನದ ಸಂಭ್ರಮ.

| ಹೀರಾನಾಯ್ಕ ಟಿ. ವಿಜಯಪುರ

ರಾಜ್ಯದಲ್ಲಿ ಸರಿಸುಮಾರು 32 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ಗಳಿವೆ, ಅನೇಕ ಶಾಖೆಗಳಿವೆ. ಅವುಗಳ ಪೈಕಿ ಶತಮಾನ ಕಂಡ ಬ್ಯಾಂಕ್​ಗಳು ಬೆರಳೆಣಿಕೆಯಷ್ಟು. ಅದರಲ್ಲಿ ವಿಜಯಪುರದ ಡಿಸಿಸಿ ಬ್ಯಾಂಕ್ ಕೂಡ ಒಂದು. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಡಿಸಿಸಿ ಬ್ಯಾಂಕ್​ಗಳು ಡಿಜಿಟಲೀಕರಣಗೊಳ್ಳುತ್ತಿವೆ. ಇತರ ಬ್ಯಾಂಕ್​ಗಳಿಗೆ ಮಾದರಿಯಾಗುವ ರೀತಿಯಲ್ಲಿ ಡಿಸಿಸಿ ಬ್ಯಾಂಕ್​ಗಳು ಸೇವೆ ಸಲ್ಲಿಸುತ್ತಿದ್ದು, ಅವುಗಳಲ್ಲಿ ವಿಜಯಪುರ ಡಿಸಿಸಿ ಬ್ಯಾಂಕ್ ಸಹ ಮುಂಚೂಣಿಯಲ್ಲಿದೆ.

ಗ್ರಾಹಕರ ಗಮನ ಸೆಳೆಯುವ, ಮನೆ ಬಾಗಿಲಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್​ಗಳು ಇದೀಗ ಡಿಜಿಟಲೀಕರಣದತ್ತ ಹೆಜ್ಜೆ ಹಾಕಿವೆ. ಗ್ರಾಹಕರ ಅನುಕೂಲಕ್ಕಾಗಿ ಡಿಜಿಟಲ್ ಲಾಕರ್ ವ್ಯವಸ್ಥೆ, ಎಟಿಎಂ, ಮೊಬೈಲ್ ಎಟಿಎಂ ವ್ಯಾನ್​ಗಳಂತಹ ಸೌಕರ್ಯಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ವಿಜಯಪುರದ ಡಿಸಿಸಿ ಬ್ಯಾಂಕ್ ಕೂಡ ಇತ್ತೀಚೆಗೆ ಮೊಬೈಲ್ ಎಟಿಎಂ ವ್ಯಾನ್​ಗೆ ಚಾಲನೆ ನೀಡಿದೆ. ನಬಾರ್ಡ್​ನ ಬೆಂಗಳೂರು ಶಾಖೆಯ ಸಹಾಯಕ ವ್ಯವಸ್ಥಾಪಕಿ ರಾಜಪ್ರಿಯ ಮುರುಗನ್ ಮೊಬೈಲ್ ಎಟಿಎಂ ವ್ಯಾನಿನಲ್ಲಿ ತಮ್ಮ ಎಟಿಎಂ ಕಾರ್ಡ್ ಬಳಸುವುದರ ಮೂಲಕ ಚಾಲನೆ ನೀಡಿ, ಬ್ಯಾಂಕ್ ವಹಿವಾಟುಗಳಿಗೆ ಡಿಜಿಟಲ್ ಸ್ಪರ್ಶ ನೀಡಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸ್ಥಿತ ಎಟಿಎಂಗಳಿಲ್ಲದ ಕಾರಣ ಗ್ರಾಮೀಣರು ಸುಮಾರು 15ರಿಂದ 20 ಕಿ.ಮೀ. ದೂರದ ಸ್ಥಳಗಳಿಗೆ ಹೋಗಿ ಹಣ ಪಡೆಯಬೇಕಾಗುತ್ತದೆ. ಅದನ್ನು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ದೂರ ಮಾಡಿದೆ. ಮೊಬೈಲ್ ಎಟಿಎಂ ವ್ಯಾನಿನಲ್ಲಿ ಯಾವುದೇ ಬ್ಯಾಂಕಿನ ಕಾರ್ಡ್ ಬಳಸಿ ಹಣ ಪಡೆಯಬಹುದು. ಈ ವ್ಯಾನ್ ಹಳ್ಳಿಹಳ್ಳಿಗೂ ಸಂಚರಿಸಲಿದ್ದು, ಯಾವುದೇ ಬ್ಯಾಂಕಿನ ಎಟಿಎಂ ಕಾರ್ಡ್, ರೂಪೇ ಕಾರ್ಡ್ ಬಳಸಿ ಹಣ ಪಡೆಯಬಹುದಾಗಿದೆ. ಈ ಮೊಬೈಲ್ ಎಟಿಎಂ ವ್ಯಾನ್​ಗಾಗಿ ಒಟ್ಟು 26,38,267 ರೂ. ವೆಚ್ಚ ಮಾಡಲಾಗಿದೆ. ನಬಾರ್ಡ್ ಸಂಸ್ಥೆ 15 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ. ಬ್ಯಾಂಕ್ ಈ ಉದ್ದೇಶಕ್ಕಾಗಿ 11,38,267 ರೂ. ಭರಿಸಿದೆ.

ಶತಮಾನದ ಸಂಭ್ರಮ: 1919ರ ಜು. 28ರಂದು ಪ್ರಾರಂಭವಾದ ವಿಜಯಪುರ ಡಿಸಿಸಿ ಬ್ಯಾಂಕ್ ಇದೀಗ ಒಂದು ಶತಮಾನ ಪೂರೈಸುತ್ತಿದೆ. 2018ರ ಜು.28ಕ್ಕೆ 100ನೇ ವರ್ಷಕ್ಕೆ ಕಾಲಿಟ್ಟಿದೆ. ಬ್ಯಾಂಕ್ ಈವರೆಗೆ 13 ಜನ ಅಧ್ಯಕ್ಷರನ್ನು ಕಂಡಿದೆ. ಪಾಂಡುರಂಗರಾವ್ ದೇಸಾಯಿ ಸಂಸ್ಥಾಪಕ ಅಧ್ಯಕ್ಷರಾಗಿ ಬ್ಯಾಂಕಿನ ಅಭಿವೃದ್ಧಿಗೆ ದುಡಿದಿದ್ದಾರೆ. 1997ರಿಂದ ಪ್ರಸಕ್ತ ಸಾಲಿನವರೆಗೂ ಸತತ ಎರಡು ದಶಕಗಳ ಕಾಲ ಜಿಲ್ಲಾಧ್ಯಕ್ಷರಾಗಿ ಶಿವಾನಂದ ಪಾಟೀಲ ಆಯ್ಕೆಯಾಗಿದ್ದಾರೆ. ಅವರು ಆರೋಗ್ಯ ಸಚಿವರಾಗಿಯೂ ಸದ್ಯ ರಾಜಕೀಯದಲ್ಲಿ ತಮ್ಮ ಪ್ರವೃತ್ತಿ ಮುಂದುವರಿಸಿದ್ದಾರೆ. ಕಳೆದ ವರ್ಷದ ಬಜೆಟ್​ನಲ್ಲಿ ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಭವನ ನಿರ್ವಣಕ್ಕೆ ಬಜೆಟ್​ನಲ್ಲಿ 5 ಕೋಟಿ ರೂ. ಪ್ರಕಟಿಸಲಾಗಿತ್ತು, ಆದರೆ ಇನ್ನೂ ಅನುದಾನ ಬಂದಿಲ್ಲ.

ಲಾಭದ ಹಾದಿಯಲ್ಲಿ ಬ್ಯಾಂಕ್

ಈ ಬ್ಯಾಂಕ್ ಲಾಭದ ಹಾದಿಯಲ್ಲಿದ್ದು 95.43 ಕೋಟಿ ರೂ ಷೇರು ಹಣ, ಒಟ್ಟು ನಿಧಿಗಳಿಂದ 195.26 ಕೋಟಿ ರೂ, ಒಟ್ಟು ಠೇವಣಿ 1711.60 ಕೋಟಿ ರೂ, ಒಟ್ಟು ಹೂಡಿಕೆ 636.47 ರೂ, ಒಟ್ಟು ದುಡಿಯುವ ಬಂಡವಾಳ 2616.10 ಕೋಟಿ ರೂ., ನಿವ್ವಳ ಲಾಭ 13.28 ಕೋಟಿ ರೂ. ವಹಿವಾಟು ನಡೆಸಿದೆ. ಪ್ರತಿ ವರ್ಷ 10ರಿಂದ 12 ಕೋಟಿ ರೂ. ವರೆಗೆ ನಿವ್ವಳ ಲಾಭದ ಸರಾಸರಿ ಹೊಂದಿದ್ದು, ರಾಜ್ಯದಲ್ಲಿಯೇ ನಿವ್ವಳ ಲಾಭ ಗಳಿಸುವಲ್ಲಿ 3ನೇ ಸ್ಥಾನ ಪಡೆದಿದೆ. ಹೂಡಿಕೆ ಹಾಗೂ ಸಾಲ ವಿತರಣೆಯಲ್ಲಿ ರಾಜ್ಯದಲ್ಲಿಯೇ 4ನೇ ಸ್ಥಾನ ಪಡೆದಿದೆ. ಈ ಡಿಸಿಸಿ ಬ್ಯಾಂಕ್ ಹೈನುಗಾರಿಕೆ, ಕುರಿ ಸಾಕಣೆ, ನೇಕಾರರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಜಿಲ್ಲೆಯಲ್ಲಿ 2,69,726 ರೈತರು ಬ್ಯಾಂಕ್​ನ ಸದಸ್ಯತ್ವ ಪಡೆದಿದ್ದಾರೆ.

ಸಾಲ ಹಂಚಿಕೆ, ನಿವ್ವಳ ಲಾಭದಲ್ಲಿ ನಮ್ಮ ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಈಗಾಗಲೇ ಬ್ಯಾಂಕ್ 100ನೇ ವರ್ಷಕ್ಕೆ ಕಾಲಿಟ್ಟಿದೆ. ಮುಂದಿನ ವರ್ಷದಲ್ಲಿ ಶತಮಾನೋತ್ಸವ ಆಚರಿಸಲಾಗುತ್ತಿದೆ. ಅದಕ್ಕೆ ರಾಜ್ಯ ಸರ್ಕಾರದಿಂದ 5 ಕೋಟಿ ರೂ. ಹಾಗೂ ಬ್ಯಾಂಕ್​ನಿಂದ 5 ಕೋಟಿ ರೂ. ವೆಚ್ಚದಲ್ಲಿ ಸಂಭ್ರಮ ಆಚರಿಸಲಾಗುವುದು.

| ಬಿ.ಎಸ್. ಪಾಟೀಲ (ಯಾಳಗಿ) ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ,ವಿಜಯಪುರ

ಬ್ಯಾಂಕ್​ಗೆ ಸಂದ ಪ್ರಶಸ್ತಿಗಳು

  • 999-2000ನೇ ಸಾಲಿನಲ್ಲಿ ನಬಾರ್ಡ್​ನಿಂದ ರಾಷ್ಟ್ರಮಟ್ಟದ ವಿಶೇಷ ಪ್ರಶಸ್ತಿ ್ಠ013-14ರಲ್ಲಿ ಅತ್ಯುತ್ತಮ ಸಾಧನಾ ಪ್ರಶಸ್ತಿ
  • 2014-15ರಲ್ಲಿ ನಬಾರ್ಡ್​ದಿಂದ ರಾಷ್ಟ್ರಮಟ್ಟದ ಸಾಧನಾ ಪ್ರಶಸ್ತಿ
  • 2014-15ರಲ್ಲಿ ಅಪೆಕ್ಸ್​ನಿಂದ ಪ್ರಶಂಸನಾ ಪುರಸ್ಕಾರ

Leave a Reply

Your email address will not be published. Required fields are marked *